ಸಾಗರ: ಕಾರ್ಮಿಕರ ಹೆಸರು ಹೇಳಿ ಕಾರ್ಡ್ ಪಡೆದ ನಕಲಿ ಕಾರ್ಮಿಕರ ಬಗ್ಗೆ ಜಾಗ್ರತೆ ಇರಲಿ. ಅಂತ ಪ್ರಕರಣಗಳು ಕಂಡುಬಂದರೆ ಕೂಡಲೇ ನನ್ನ ಗಮನಕ್ಕೆ ತರಬೇಕು. ಸರ್ಕಾರದ ಯೋಜನೆಗಳು ನಿಜವಾದ ಫಲಾನುಭವಿಗಳನ್ನು ತಲುಪಬೇಕು ಎಂದು ಶಾಸಕ ಗೋಪಾಲಕೃಷ್ಣ ಬೇಳೂರು ಹೇಳಿದರು.
ಸಾಗರ ನಗರಸಭೆ ರಂಗಮಂದಿರದಲ್ಲಿ ಸೋಮವಾರ ಕಾರ್ಮಿಕ ಕಲ್ಯಾಣ ಇಲಾಖೆ, ಮೀನುಗಾರಿಕೆ ಇಲಾಖೆ ಸೇರಿ ವಿವಿಧ ಇಲಾಖೆಗಳ ಆಶ್ರಯದಲ್ಲಿ ಬ್ಲಾಕ್ ಕಾಂಗ್ರೆಸ್ ಅಸಂಘಟಿತ ಕಾರ್ಮಿಕರ ಘಟಕದಿಂದ ಕಾರ್ಮಿಕರಿಗೆ ಕಿಟ್, ಮೀನುಗಾರರಿಗೆ ಸಾಧನಾ ಸಲಕರಣೆ, ಮಹಿಳೆಯರಿಗೆ ಹೊಲಿಗೆ ಯಂತ್ರ ವಿತರಣೆ, ವಿವಿಧ ಯೋಜನೆ ಫಲಾನುಭವಿಗಳಿಗೆ ಸೌಲಭ್ಯ ವಿತರಣಾ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಕಾರ್ಮಿಕರಲ್ಲದವರು ಕಾರ್ಮಿಕ ಇಲಾಖೆ ಸೌಲಭ್ಯ ಪಡೆಯುವುದು ಅಪರಾಧ. ಬಡವರ ಹೊಟ್ಟೆ ಮೇಲೆ ಹೊಡೆಯಬಾರದು. ರಾಜ್ಯ ಸರ್ಕಾರ ಕಾರ್ಮಿಕರ ಶ್ರೇಯೋಭಿವೃದ್ಧಿಗಾಗಿ ವಿವಿಧ ಯೋಜನೆ ಜಾರಿಗೆ ತಂದಿದ್ದು ಕಾರ್ಮಿಕರು ಪಡೆದುಕೊಳ್ಳಬೇಕು. ಮಕ್ಕಳಿಗೆ ಉತ್ತಮ ವಿದ್ಯಾಭ್ಯಾಸ ಕೊಡಿಸುವ ಜತೆಗೆ ಕುಟುಂಬವನ್ನು ಚೆನ್ನಾಗಿ ನೋಡಿಕೊಳ್ಳಬೇಕು. ಜೀವನ ಸುರಕ್ಷತೆಗಾಗಿ ಕಾರ್ಮಿಕರು ಕಡ್ಡಾಯವಾಗಿ ಜೀವ ವಿಮೆ ಮಾಡಿಸಿಕೊಳ್ಳಬೇಕು ಎಂದು ತಿಳಿಸಿದರು.
ದುಶ್ಚಟಗಳಿಂದ ದೂರವಿದ್ದು ದುಡಿದ ಹಣವನ್ನು ಕುಟುಂಬದ ಏಳಿಗೆಗೆ ಬಳಸಿಕೊಳ್ಳಿ. ಮಕ್ಕಳಿಗೆ ಉತ್ತಮ ಶಿಕ್ಷಣ ಕೊಡಿಸಿ. ದೇಶದಲ್ಲಿ ಮದ್ಯಸೇವನೆ ಮೇಲೆ ನಿಷೇಧ ಹೇರಿದ್ದರೆ ದೇಶವು ವಿಶ್ವದಲ್ಲಿಯೇ ನಂ.1 ಆಗುತ್ತಿತ್ತು. ಅಂತಹ ದಿನವನ್ನು ನಾವೆಲ್ಲ ನಿರೀಕ್ಷೆ ಮಾಡಬೇಕು. ಸರ್ಕಾರದ ಯೋಜನೆಗಳನ್ನು ವ್ಯವಸ್ಥಿತವಾಗಿ ಬಳಸಿಕೊಳ್ಳಿ ಎಂದು ಸಲಹೆ ನೀಡಿದರು.
ಕಾರ್ಮಿಕ ಘಟಕದ ಅಧ್ಯಕ್ಷ ಕೆ.ಸಿದ್ದಪ್ಪ ಮಾತನಾಡಿ, ತಾಲೂಕಿನಲ್ಲಿ 50 ಸಾವಿರಕ್ಕೂ ಹೆಚ್ಚು ಅಸಂಘಟಿತ ವಲಯದ ಕಾರ್ಮಿಕರು ತಮ್ಮ ಹೆಸರು ನೋಂದಣಿ ಮಾಡಿಕೊಂಡಿದ್ದಾರೆ. ಉಳಿದ ಕಾರ್ಮಿಕರು ಹೆಸರು ನೋಂದಾಯಿಸಿ ಕಾರ್ಡ್ ಪಡೆಯಬೇಕು. ಮಧ್ಯವರ್ತಿಗಳ ಹಾವಳಿ ಇಲ್ಲದೆ ನಮ್ಮ ಘಟಕ ಉಚಿತವಾಗಿ ಕಾರ್ಮಿಕ ಕಾರ್ಡ್ ಮಾಡಿಕೊಡಲು ಬದ್ಧವಾಗಿದೆ ಎಂದರು.
ಸಾಗರ ತಹಸೀಲ್ದಾರ್ ಚಂದ್ರಶೇಖರ್ ನಾಯ್ಕ, ಕಾರ್ಮಿಕ ಇಲಾಖೆಯ ಶಿಲ್ಪಾ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಮಹಾದೇವಿ, ಅಂಚೆ ಇಲಾಖೆಯ ಜಯರಾಮ್, ಪ್ರಮುಖರಾದ ಗಣಪತಿ ಮಂಡಗಳಲೆ, ಆರ್.ಶ್ರೀನಿವಾಸ್, ಮಧುಮಾಲತಿ, ಲಲಿತಮ್ಮ, ಸುರೇಶಬಾಬು, ಕಲಸೆ ಚಂದ್ರಪ್ಪ, ಪಾರ್ವತಿ, ವಿಲ್ಸನ್ ಗೋನ್ಸಾಲ್ವಿಸ್ ಇತರರಿದ್ದರು.
