ವಿಧಾನಸೌಧದ ಲಂಚ ಸಚಿವರಿಗೇ ಕೊಟ್ಟಿದ್ದು

| ಅವಿನಾಶ ಮೂಡಂಬಿಕಾನ

ಬೆಂಗಳೂರು: ವಿಧಾನಸೌಧ ಆವರಣದಲ್ಲಿ ಸಚಿವ ಪುಟ್ಟರಂಗ ಶೆಟ್ಟಿ ಕಚೇರಿ ನೌಕರನ ಬಳಿ ಪತ್ತೆಯಾಗಿದ್ದ 25.76 ಲಕ್ಷ ರೂ. ಲಂಚದ ಹಣ ಪ್ರಕರಣ ಹೊಸ ತಿರುವು ಪಡೆದುಕೊಂಡಿದೆ. 2018 ವಿಧಾನಸಭಾ ಚುನಾವಣೆಯಲ್ಲಿ ಮೊಳಕಾಲ್ಮೂರು ಕ್ಷೇತ್ರದಲ್ಲಿ ಶ್ರೀರಾಮುಲು ವಿರುದ್ಧ ಕಾಂಗ್ರೆಸ್ ಅಭ್ಯರ್ಥಿಯಾಗಿ ನಿಂತು ಸೋತಿದ್ದ ಬಿ.ಯೋಗೀಶ್ ಬಾಬು ಸೇರಿ 7 ಗುತ್ತಿಗೆದಾರರು ಸಚಿವರಿಗೇ ಲಂಚ ಕೊಟ್ಟಿರುವುದು ಎಸಿಬಿ ತನಿಖೆಯಲ್ಲಿ ದೃಢಪಟ್ಟಿದೆ.

ಗುತ್ತಿಗೆದಾರರಾದ ಬಿ. ಯೋಗೀಶ್ ಬಾಬು, ಸತೀಶ್, ಜ್ಯೋತಿ ಪ್ರಕಾಶ್, ಉಮೇಶ್ ಮತ್ತು ರಾಜು ಸೇರಿ 7 ಮಂದಿ ಸಚಿವ ಪುಟ್ಟರಂಗ ಶೆಟ್ಟಿ ಅವರಿಗೆ ತಲುಪಿಸುವಂತೆ 25.76 ಲಕ್ಷ ರೂ.ಗಳನ್ನು ಕಚೇರಿ ಸಿಬ್ಬಂದಿ ಕೈಗೆ ಕೊಟ್ಟಿರುವುದು ವಿಚಾರಣೆ ವೇಳೆ ಸಾಬೀತಾಗಿದೆ ಎಂದು ಎಸಿಬಿ ಹಿರಿಯ ಅಧಿಕಾರಿ ಖಚಿತಪಡಿಸಿದ್ದಾರೆ.

ಕೌಶಲ ಇಲಾಖೆಯಿಂದ ಪುಟ್ಟರಂಗ ಶೆಟ್ಟಿ ಕಚೇರಿಗೆ ನಿಯೋಜನೆಗೊಂಡಿದ್ದ ಅನಂತು, ಕಾರ್ವಿುಕ ಸಚಿವರ ಕಚೇರಿಯಲ್ಲಿ ಕೆಲಸ ಮಾಡುತ್ತಿದ್ದ ಕೃಷ್ಣಮೂರ್ತಿ ಹಾಗೂ ಬಂಧಿತ ಆರೋಪಿ ಮೋಹನ್ ಗೆಳೆಯ ನಂದ ಗುರುವಾರ ಮತ್ತು ಶುಕ್ರವಾರ ನಡೆದ ವಿಚಾರಣೆ ವೇಳೆ ತಪ್ಪೊಪ್ಪಿಕೊಂಡಿದ್ದಾರೆ. ಈ ಹಿನ್ನೆಲೆಯಲ್ಲಿ ಯೋಗೀಶ್ ಬಾಬು ಸೇರಿ ಲಂಚ ನೀಡಿದ್ದ 7 ಮಂದಿ ಗುತ್ತಿಗೆದಾರರಿಗೆ ವಿಚಾರಣೆಗೆ ಹಾಜರಾಗುವಂತೆ ಎಸಿಬಿ ಅಧಿಕಾರಿಗಳು ನೋಟಿಸ್ ಕೊಟ್ಟಿದ್ದಾರೆ ಎಂದು ತಿಳಿದುಬಂದಿದೆ.

ಪ್ರಭಾವಿ ಸಚಿವರ ನಂಟು: ಅನಂತು ಮತ್ತು ಕೃಷ್ಣಮೂರ್ತಿ ವಿಚಾರಣೆ ವೇಳೆ ಬಾಯ್ಬಿಟ್ಟ 7 ಮಂದಿ ಗುತ್ತಿಗೆದಾರರೂ ಪ್ರಭಾವಿ ಸಚಿವರ ಒಡನಾಟ ಹೊಂದಿದ್ದಾರೆ. ಗುತ್ತಿಗೆದಾರರು ಲಂಚ ನೀಡಿರುವುದಕ್ಕೆ ಎಸಿಬಿ ಅಧಿಕಾರಿಗಳಿಗೆ ಕೆಲ ಸಾಕ್ಷ್ಯಗಳು ಲಭ್ಯವಾಗಿದ್ದು, ಆ ಸಾಕ್ಷ್ಯಗಳನ್ನು ಬಹಿರಂಗಪಡಿಸಲು ಅಧಿಕಾರಿಗಳು ನಿರಾಕರಿಸಿದ್ದಾರೆ. ಗುತ್ತಿಗೆದಾರರ ವಿಚಾರಣೆಯಲ್ಲಿ ಇನ್ನಷ್ಟು ವಿಚಾರಗಳು ಬೆಳಕಿಗೆ ಬರಲಿವೆ.

ಏತಕ್ಕಾಗಿ ಲಂಚ?

ಅಲೆಮಾರಿ ಕಾಲನಿಗಳ ರಸ್ತೆ ಅಭಿವೃದ್ಧಿಗೆ ಸರ್ಕಾರದಿಂದ ಅನುದಾನ ಬಿಡುಗಡೆಯಾಗಿತ್ತು. ತಮ್ಮ ವ್ಯಾಪ್ತಿಯಲ್ಲಿ ರಸ್ತೆ ಅಭಿವೃದ್ಧಿ ಕಾಮಗಾರಿ ಮಾಡಲು ಗುತ್ತಿಗೆ ಪಡೆದಿದ್ದ ಈ ಏಳು ಮಂದಿ ಗುತ್ತಿಗೆದಾರರು ಆದಷ್ಟು ಬೇಗ ಅನುದಾನ ಬಿಡುಗಡೆ ಮಾಡಲು ಸಚಿವರಿಗೆ ಲಂಚ ನೀಡಲು ಡೀಲ್ ಕುದುರಿಸಿದ್ದರು. ಅದರಂತೆ ಅನಂತು ಮತ್ತು ಕೃಷ್ಣಮೂರ್ತಿಯನ್ನು ಸಂರ್ಪಸಿದ್ದ ಗುತ್ತಿಗೆದಾರರು, ಸಚಿವರಿಗೆ ಲಂಚ ನೀಡುವ ಬಗ್ಗೆ ರ್ಚಚಿಸಿ 25.76 ಲಕ್ಷ ರೂ. ಕೊಟ್ಟಿದ್ದರು.

ತಲಾ ರೂ. 2ರಿಂದ ರೂ. 4 ಲಕ್ಷ!

ಬೇರೆ ಬೇರೆ ದಿನಗಳಲ್ಲಿ ಗುತ್ತಿಗೆದಾರರು ತಲಾ 2 ರಿಂದ 4 ಲಕ್ಷ ರೂ. ಲಂಚ ನೀಡಿದ್ದಾರೆ. ಒಟ್ಟಾರೆ ಸಂಗ್ರಹವಾಗಿದ್ದ 25.76 ಲಕ್ಷ ರೂ. ಅನ್ನು ಬ್ಯಾಗ್​ನಲ್ಲಿ ತುಂಬಿದ್ದ ಕೃಷ್ಣಮೂರ್ತಿ ಮತ್ತು ಅನಂತು ಈ ದುಡ್ಡನ್ನು ಸಚಿವರಿಗೆ ತಲುಪಿಸುವಂತೆ ಮೋಹನ್​ಗೆ ನೀಡಿದ್ದರು. ಮೋಹನ್ ಈ ದುಡ್ಡನ್ನು ಕೊಂಡೊಯ್ಯುತ್ತಿದ್ದ ವೇಳೆ ಪೊಲೀಸರ ಕೈಗೆ ಸಿಕ್ಕಿ ಬಿದ್ದಿದ್ದ. ಲಂಚದ ದುಡ್ಡು ಬೇರೆ ವ್ಯಕ್ತಿ ಮೂಲಕ ಸಚಿವರಿಗೆ ಸೇರುವುದಿತ್ತು ಎಂದು ಎಸಿಬಿ ಅಧಿಕಾರಿಯೊಬ್ಬರು ವಿಜಯವಾಣಿಗೆ ತಿಳಿಸಿದ್ದಾರೆ.