ಬಿಜೆಪಿಯಲ್ಲಿ ಉಸಿರುಗಟ್ಟುವ ವಾತಾವರಣ

ಚಾಮರಾಜನಗರ: ಬಿಜೆಪಿ ಪಕ್ಷದಲ್ಲಿ ಉಸಿರುಗಟ್ಟುವ ವಾತಾವರಣವಿದ್ದು, ಸ್ವತಂತ್ರ ಇರಲಿಲ್ಲ. ಇದರಿಂದ ಬೇಸತ್ತು ಮತ್ತೆ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾಗಿದ್ದೇನೆ ಎಂದು ಮಾಜಿ ಸಂಸದ ಕಾಗಲವಾಡಿ ಎಂ.ಶಿವಣ್ಣ ಹೇಳಿದರು.

ನರೇಂದ್ರಮೋದಿ ಅವರು ಜಾದು ಮಾಡುತ್ತಾರೆ ಎಂಬ ನಂಬಿಕೆಯಿಂದ ಕಳೆದ 2 ವರ್ಷದ ಹಿಂದೆ ಬಿಜೆಪಿ ಪಕ್ಷಕ್ಕೆ ಸೇರಿದ್ದೆ. ಆದರೆ ಬಿಜೆಪಿ ದಲಿತ ವಿರೋಧಿಯಾಗಿದ್ದು ಸಾಮಾಜಿಕ ನ್ಯಾಯ ಕೊಡಲು ವಿಫಲರಾಗಿದ್ದರಿಂದ ಪಕ್ಷವನ್ನು ತೊರೆದೆ ಎಂದು ಸುದ್ದಿಗೋಷ್ಠಿಯಲ್ಲಿ ಮಂಗಳವಾರ ತಿಳಿಸಿದರು.

2004 ರಲ್ಲಿ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸಿ ಗೆಲುವು ಸಾಧಿಸಿದ್ದೆ. ಆದರೆ ನಂತರದಲ್ಲಿ ತನಗೆ ಟಿಕೆಟ್ ನೀಡಲು ವಿ.ಶ್ರೀನಿವಾಸಪ್ರಸಾದ್ ನಿರಾಕರಿಸಿದ್ದರು. ಕಾಂಗ್ರೆಸ್ ಪಕ್ಷವು ತನ್ನನ್ನು ಪರಿಶಿಷ್ಟ ಆಯೋಗದ ಸದಸ್ಯ ಹಾಗೂ ರಾಷ್ಟ್ರೀಯ ಸಫಾಯಿ ಕರ್ಮಚಾರಿ ಆಯೋಗದ ಅಧ್ಯಕ್ಷನನ್ನಾಗಿ ಮಾಡಿತ್ತು ಎಂದರು.

ನಂಜನಗೂಡು ಉಪ ಚುನಾವಣೆಯಲ್ಲಿ ವಿ.ಶ್ರೀನಿವಾಸಪ್ರಸಾದ್ ಪರ ಕೆಲಸ ಮಾಡಿದ್ದೆ. ಕಾಂಗ್ರೆಸ್ ಪಕ್ಷದಲ್ಲಿದ್ದಾಗ ಬೇರೆಯವರಿಗೆ ಟಿಕೆಟ್ ಕೊಡಿಸುವ ಶಕ್ತಿ ಇತ್ತು. ಆದರೆ ಬಿಜೆಪಿಯಲ್ಲಿ ಯಾವುದಕ್ಕೂ ಅನುಮತಿ ಪಡೆಯಬೇಕಿತ್ತು. ಆದ್ದರಿಂದ ಮಾಜಿ ಸಿಎಂ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್, ಮಾಜಿ ಸಚಿವ ಎಚ್.ಸಿ.ಮಹದೇವಪ್ಪ ಅವರ ಸಮ್ಮುಖದಲ್ಲಿ ಮತ್ತೆ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾಗಿದ್ದೇನೆ ಎಂದು ತಿಳಿಸಿದರು.

ಕಾಂಗ್ರೆಸ್ ಜಿಲ್ಲಾಧ್ಯಕ್ಷ ಪಿ.ಮರಿಸ್ವಾಮಿ, ಜಿಪಂ ಸದಸ್ಯ ಸದಾಶಿವಮೂರ್ತಿ, ಮುಖಂಡರಾದ ಸೈಯದ್ ರಫಿ, ಸೋಮನಾಯಕ ಸುದ್ದಿಗೋಷ್ಠಿಯಲ್ಲಿದ್ದರು.