ಅಥಣಿ: ಬಾಲಕನ ಮೇಲೆ ಮಾರಣಾಂತಿಕ ಹಲ್ಲೆ

ಅಥಣಿ:  ಪಟ್ಟಣದ ಹೊರವಲಯದಲ್ಲಿ ಭಾನುವಾರ ಸಂಜೆ ಎರೆ ಹುಳು ಕದ್ದ ಆರೋಪದ ಮೇಲೆ ಇಬ್ಬರು ಯುವಕರು ಅಪ್ರಾಪ್ತ ಬಾಲಕನನ್ನು ಬೆತ್ತಲೆಗೊಳಿಸಿ ಮಾರಣಾಂತಿಕ ಹಲ್ಲೆ ನಡೆಸಿದ್ದಾರೆ. 12 ವರ್ಷದ ಹರೀಶ ಶ್ರೀನಿವಾಸ ಹೋಮಕರ ಹಲ್ಲೆಗೀಡಾದ ಬಾಲಕ. ಸಹೋದರರಾದ ರಾಜು ಅಣ್ಣಪ್ಪ ಬಳ್ಳೋಳಿ ಮತ್ತು ಮುರಳಿ ಅಣ್ಣಪ್ಪ ಬಳ್ಳೋಳಿ ಪೈಶಾಚಿಕ ಹಲ್ಲೆ ನಡೆಸಿದ ಆರೋಪಿಗಳು.

ಮೀನು ಹಿಡಿಯಲು ಎರೆಹುಳು ಕದ್ದ ಎಂಬ ಕಾರಣಕ್ಕೆ ಇಬ್ಬರು ಯುವಕರು ಬಾಲಕನನ್ನು ಹಗ್ಗದಿಂದ ಬೈಕ್‌ಗೆ ಕಟ್ಟಿ ಸುಮಾರು 50 ಮೀಟರ್‌ವರೆಗೆ ಎಳೆದಾಡಿದ್ದಾರೆ. ಮೈಯಿಂದ ರಕ್ತ ಚಿಮ್ಮುವಂತೆ ಗಾಯಗೊಳಿಸಿ ಮಾರಣಾಂತಿಕ ಹಲ್ಲೆ ನಡೆಸಿದ್ದಾರೆ. ಬಾಲಕ ಸ್ಥಳೀಯ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ. ಬಾಲಕನ ಪಾಲಕರು ಬಡವರಾಗಿದ್ದು, ತಮಗೆ ನ್ಯಾಯ ದೊರಕಿಸಿಕೊಡುವಂತೆ ಅಥಣಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.