ಬಿಜೆಪಿಯವರೇ ಬಿ.ವೈ ರಾಘವೇಂದ್ರ ಅವರನ್ನು ಸೋಲಿಸುತ್ತಾರೆ ಎಂದು ಎಚ್​.ಡಿ.ರೇವಣ್ಣ ಹೇಳಿದ್ದು ಯಾರಿಗೆ?

ಶಿವಮೊಗ್ಗ: ಬಿಜೆಪಿಯವರೇ ಬಿ,ವೈ.ರಾಘವೇಂದ್ರ ಅವರನ್ನು ಸೋಲಿಸ್ತಾರೆ. ನಾನು ಹೇಳಿದ ಮಾತನ್ನು ಡೈರಿಯಲ್ಲಿ ಬರೆದಿಟ್ಟುಕೊಳ್ಳಿ. ಅವರು ಯಾರೆಂದು ಸಮಯ ಬಂದಾಗ ಹೇಳುತ್ತೇನೆ. ಎಂದು ಸಚಿವ ಎಚ್.ಡಿ.ರೇವಣ್ಣ ಹೇಳಿದರು.

ಶಿವಮೊಗ್ಗದಲ್ಲಿ ಮಾತನಾಡಿದ ಅವರು, ಅಭಿವೃದ್ದಿ ವಿಚಾರದಲ್ಲಿ ನಾವು ದ್ವೇಷದ ರಾಜಕಾರಣ ಮಾಡುವುದಿಲ್ಲ. ಶಿವಮೊಗ್ಗದಲ್ಲಿ ಯಡಿಯೂರಪ್ಪ ಅವರು ಏನು ಅಭಿವೃದ್ಧಿ ಮಾಡಿದ್ದಾರೆ ಎಂದು ನರೇಂದ್ರಮೋದಿ ಹತ್ತಿರ ಹೇಳಿಸ್ತಾರಾ? ಎಂದು ಪ್ರಶ್ನಿಸಿದ ಅವರು, ಪ್ರತಿಪಕ್ಷವನ್ನ ದಮನ ಮಾಡೋಕೆ ಕೇಂದ್ರ ಸರ್ಕಾರದ ನಾನಾ ಸಂಸ್ಥೆಗಳನ್ನ ಬಳಸಿಕೊಳ್ತಾ ಇದ್ದಾರೆ ಎಂದು ಆರೋಪಿಸಿದರು.

ಐಟಿ ದಾಳಿ ಬಿಜೆಪಿ ಅವರ ಮೇಲೆ ನಡೆಯುತ್ತಿಲ್ಲ. ಬಿಜೆಪಿ ಅವರ ಹತ್ತಿರ ಹಣ ಇಲ್ಲವೇ, ಪಾಪರ್ ಚೀಟಿ ತೆಗೆದುಕೊಂಡಿದ್ದಾರೆಯೇ ಎಂದರು. ರಾಜ್ಯ ಮೈತ್ರಿ ಸರ್ಕಾರ ಬಿದ್ದು ಹೋಗಲ್ಲ, ನರೇಂದ್ರ ಮೋದಿ ಸರ್ಕಾರ ಬಿದ್ದು ಹೋಗುತ್ತೆ. ಮೋದಿ ಬಿಟ್ರೆ ಅಲ್ಲಿ ಏನೂ ಇಲ್ಲ ಎಂದರು.

ಬಿಜೆಪಿಗೆ ಹಾಸನದಲ್ಲಿ ಅಭ್ಯರ್ಥಿಯೇ ಇಲ್ಲ. ಬೇರೆ ಪಕ್ಷದವರನ್ನ ಕರೆದುಕೊಂಡು ಬಂದಿದ್ದಾರೆ. ಮಂಡ್ಯದಲ್ಲಿ ಬಿಜೆಪಿ ಅಭ್ಯರ್ಥಿ ಇಲ್ಲದೆ ಹುಡುಕಿಕೊಂಡು ಹೋಗಿದ್ರು ಎಂದು ವ್ಯಂಗ್ಯವಾಡಿದರು.(ದಿಗ್ವಿಜಯ ನ್ಯೂಸ್​)