ಆರನೇ ಹಂತದಲ್ಲೇ ಬಿಜೆಪಿಗೆ ಬಹುಮತ

ನವದೆಹಲಿ: ಪ್ರತಿಪಕ್ಷಗಳ ಎಡವಟ್ಟುಗಳಿಂದ ಬಿಜೆಪಿ ಈ ಬಾರಿ 300ನ್ನು ದಾಟಲಿದೆ. 6 ಹಂತದ ಚುನಾವಣೆಯಲ್ಲಿಯೇ ಸ್ಪಷ್ಟ ಬಹುಮತ ದೊರೆತಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ. ಈ ವಿಚಾರ ಪ್ರತಿಪಕ್ಷಗಳಿಗೂ ತಿಳಿದಿದೆ. ಇದೇ ಕಾರಣಕ್ಕೆ ಹತಾಶರಾಗಿ ಹೇಳಿಕೆ ನೀಡುತ್ತಿದ್ದಾರೆ. ಪ್ರತಿಪಕ್ಷಗಳು ರಾಜಕೀಯ ಹಿಂಸಾಚಾರದಲ್ಲಿ ತೊಡಗಿವೆ ಎಂದು ಮೋದಿ ಹೇಳಿದ್ದಾರೆ. ಇದಕ್ಕೆ ಪೂರಕವಾಗಿ ಮಾತನಾಡಿರುವ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಷಾ, ಆರನೇ ಹಂತದ ಮತದಾನದ ಬಳಿಕ ಬಹುಮತಕ್ಕೆ ಅಗತ್ಯವಾದ ಸ್ಥಾನಗಳನ್ನು ಬಿಜೆಪಿ ಗಳಿಸಿದೆ. ದೇಶಾದ್ಯಂತ ತಿರುಗಾಡಿ ಪ್ರಚಾರ ರ್ಯಾಲಿಗಳನ್ನು ನಡೆಸಿದ್ದೇನೆ. ಜನರ ಪ್ರತಿಕ್ರಿಯೆಯನ್ನು ಗಮನಿಸಿದ್ದೇನೆ. ಐದು ಮತ್ತು ಆರನೇ ಹಂತದ ಮತದಾನದ ಬಳಿಕ ಬಿಜೆಪಿಗೆ ಬಹುಮತ ದೊರೆತಿರುವುದು ಸ್ಪಷ್ಟವಾಗಿದೆ. ಏಳನೇ ಹಂತದ ಬಳಿಕ ಎನ್​ಡಿಎ 300ಕ್ಕೂ ಅಧಿಕ ಸ್ಥಾನಗಳಿಸಿ ನರೇಂದ್ರ ಮೋದಿ ನೇತೃತ್ವದಲ್ಲಿ ಸರ್ಕಾರ ರಚಿಸಲಿದೆ ಎಂದು ಹೇಳಿದರು. ಪ್ರತಿಪಕ್ಷಗಳ ಸರ್ಕಾರ ರಚನೆ ಕಸರತ್ತಿನ ಬಗ್ಗೆ ಪ್ರತಿಕ್ರಿಯಿಸಿ, ಪ್ರತಿಪಕ್ಷಗಳು ಅತಂತ್ರ ಲೋಕಸಭೆ ಬಯಸಿ ಸಭೆ ನಡೆಸುತ್ತಿವೆ. ಅವರು ವಿರೋಧ ಪಕ್ಷದ ನಾಯಕನನ್ನು ಆಯ್ಕೆ ಮಾಡಿಕೊಳ್ಳಲಿ ಎಂದು ಲೇವಡಿ ಮಾಡಿದರು.

ಆಡ್ವಾಣಿ ಅಡ್ಡ ಬರಲಿಲ್ಲ!

ನವದೆಹಲಿ: ಬಿಜೆಪಿ ತೊರೆಯುವ ನನ್ನ ನಿರ್ಧಾರಕ್ಕೆ ಮಾಜಿ ಉಪಪ್ರಧಾನಿ ಎಲ್.ಕೆ. ಆಡ್ವಾಣಿ ಕಣ್ಣೀರಾದರು. ಆದರೆ, ಬೇಡ ಎನ್ನಲಿಲ್ಲ ಎಂದು ಬಿಹಾರದ ಪಟನಾ ಸಾಹೀಬ್​ನ ಕಾಂಗ್ರೆಸ್ ಅಭ್ಯರ್ಥಿ ಶತ್ರುಘ್ನ ಸಿನ್ಹಾ ಹೇಳಿದ್ದಾರೆ. ಹೊಸ ದಿಕ್ಕಿನಲ್ಲಿ ಸಾಗುವ ನನ್ನ ನಿರ್ಧಾರವನ್ನು ಆಡ್ವಾಣಿ ಅವರಿಗೆ ತಿಳಿಸಿ ಆಶೀರ್ವಾದ ಪಡೆದೆ. ಕಣ್ಣೀರು ತುಂಬಿಕೊಂಡೇ ಹರಸಿದರು. ಆದರೆ, ಪಕ್ಷ ತೊರೆಯಬೇಡ ಎನ್ನಲ್ಲಿಲ್ಲ. ಬಿಜೆಪಿಯಲ್ಲಿ ಹಿರಿಯ ನಾಯಕರನ್ನು ಕಡೆಗಣಿಸಲಾಗಿದೆ. ಪಕ್ಷವನ್ನು ಟೀಕಿಸುವವರಿಂದ ಬಿಜೆಪಿ ಕಲಿಯಬೇಕೆ ಹೊರತು ಅವರನ್ನು ಮೂಲೆಗುಂಪು ಮಾಡುವುದಲ್ಲ ಎಂದು ಸಿನ್ಹಾ ಅಭಿಪ್ರಾಯಪಟ್ಟಿದ್ದಾರೆ.

Leave a Reply

Your email address will not be published. Required fields are marked *