ಬಿಜೆಪಿಯ ಕುತಂತ್ರಕ್ಕೆ ಬಗ್ಗಲ್ಲ

ಮಂಡ್ಯ: ಮಂಡ್ಯ ಲೋಕಸಭಾ ಚುನಾವಣೆ ಸುಮಲತಾ ಅಂಬರೀಷ್ ಮತ್ತು ನಿಖಿಲ್ ಕುಮಾರಸ್ವಾಮಿ ನಡುವಿನ ಕದನವಲ್ಲ. ಬದಲಿಗೆ, ಎಚ್.ಡಿ.ದೇವೇಗೌಡ-ನರೇಂದ್ರ ಮೋದಿ ಮತ್ತು ಬಿಎಸ್‌ವೈ ನಡುವಿನ ಕದನ ಎಂದು ಜಲಸಂಪನ್ಮೂಲ ಸಚಿವ ಡಿ.ಕೆ.ಶಿವಕುಮಾರ್ ಹೇಳಿದರು.

ನಗರದ ಜಿಲ್ಲಾಧಿಕಾರಿ ಕಚೇರಿ ಎದುರಿನ ಕಾವೇರಿ ಉದ್ಯಾನದಲ್ಲಿ ಮೈತ್ರಿ ಅಭ್ಯರ್ಥಿ ನಿಖಿಲ್ ಕುಮಾರಸ್ವಾಮಿ ನಾಮಪತ್ರ ಸಲ್ಲಿಕೆ ಕಾರ್ಯಕ್ರಮದ ಬಳಿಕ ನಡೆದ ಬೃಹತ್ ಸಮಾವೇಶದಲ್ಲಿ ಮಾತನಾಡಿದರು. ಬಿಜೆಪಿಯ ಯಾವುದೇ ತಂತ್ರ-ಕುತಂತ್ರಕ್ಕೆ ನಾವು ಬಗ್ಗಲ್ಲ. ನಿಮ್ಮ ತಂತ್ರ, ಕುತಂತ್ರ ಶನಿವಾರ ಪ್ರಕಟವಾಗಿದೆ. ಹಿಂದಿನಿಂದ ಎಷ್ಟೇ ಪ್ರಯತ್ನ ನಡೆಸಿದರೂ ನಿಮ್ಮ ತಂತ್ರ, ಕುತಂತ್ರಕ್ಕೆ ಮಂಡ್ಯ ಜನ, ಕರ್ನಾಟಕದಲ್ಲಿ ಉತ್ತರ ಸಿಗಲು ಸಾಧ್ಯವಿಲ್ಲ. ಜಿಲ್ಲೆಯ ಜನ ಹಾಗೂ ರೈತರು ಸ್ವಾಭಿಮಾನಿ ಮಕ್ಕಳು. ನಿಮ್ಮ ಕುತಂತ್ರಕ್ಕೆ ಎಂದೂ ಅವಕಾಶ ಕೊಡುವುದಿಲ್ಲ ಎಂದು ಬಿಜೆಪಿ ನಾಯಕರ ವಿರುದ್ಧ ಹರಿಹಾಯ್ದರು.

ನಿಮ್ಮ ಹೆಣ ಹೊರುವವರು ನಾವೇ, ಪಲ್ಲಕ್ಕಿ ಹೊರುವವರೂ ನಾವೇ, ಬೇರೆ ಯಾರೂ ಬರಲು ಸಾಧ್ಯವಿಲ್ಲ. ಅಂಬರೀಷ್ ಅವರು ಎಚ್.ಡಿ.ಕುಮಾರಸ್ವಾಮಿ ಸರ್ಕಾರವನ್ನು ಆಶೀರ್ವದಿಸಿರಲಿಲ್ಲವೇ?. ಮಂಡ್ಯಕ್ಕೆ ಅವರ ಪಾರ್ಥಿವ ಶರೀರವನ್ನು ತೆಗೆದುಕೊಂಡು ಹೋಗಲು ಸಾಧ್ಯವಿಲ್ಲ ಎಂದಾಗ, ಕುಮಾರಸ್ವಾಮಿ ಅವರು ಮಂಡ್ಯ ಜಿಲ್ಲೆ ಜನತೆಯ ಅಭಿಮಾನಕ್ಕಾಗಿ ತಂದು ಅಭಿಮಾನಿಗಳ ಆಸೆ ಈಡೇರಿಸಿದರು ಎಂದರು.

ರಾಜಕೀಯದಲ್ಲಿ ಏನೇ ಭಿನ್ನಾಭಿಪ್ರಾಯ ಇದ್ದರೂ ಹೃದಯ ಶ್ರೀಮಂತಿಕೆ ಇರಬೇಕು. ನಾನು, ಕುಮಾರಸ್ವಾಮಿ ಬೇಕಾದಷ್ಟು ಬಾರಿ ಜಗಳ ಆಡಿದ್ದೇವೆ. ಆದರೆ, ದೇಶದ ಏಳಿಗೆಗಾಗಿ ಇಬ್ಬರೂ ಒಂದಾಗಿದ್ದೇವೆ. ನಮ್ಮ ಪಕ್ಷ ಅಧಿಕಾರಕ್ಕೆ ಬಂದಿದ್ದರೆ ನಾವೇ ರಾಜ್ಯಭಾರ ಮಾಡಬಹುದಿತ್ತು. ಆದರೆ, ಅದು ಸಾಧ್ಯವಾಗಲಿಲ್ಲ ಎಂದರು.
ಅಂಬರೀಷ್ ಅವರ ಆತ್ಮಕ್ಕೆ ಶಾಂತಿ ಸಿಗಬೇಕು ಎಂದರೆ ನಿಖಿಲ್ ಆಯ್ಕೆಯಾಗಬೇಕು. ಮಾಜಿ ಸಿಎಂ ಸಿದ್ದರಾಮಯ್ಯ ಹಾಗೂ ನಾನೂ ಚುನಾವಣಾ ಪ್ರಚಾರಕ್ಕೆ ಬರುತ್ತೇವೆ. ನಾಮಪತ್ರ ಸಲ್ಲಿಕೆಗೆ ಸೇರಿರುವ ಜನಸಾಗರ ಇತಿಹಾಸ ಸೃಷ್ಟಿ ಮಾಡುವಂತಿದೆ. ಇಡೀ ಸರ್ಕಾರಕ್ಕೆ ಆಶೀರ್ವಾದ ಮಾಡಲು ಬಂದಿದ್ದೀರಿ. ನಿಖಿಲ್ ಅವರನ್ನು ಲಕ್ಷಾಂತರ ಮತಗಳ ಅಂತರದಿಂದ ಗೆಲ್ಲಿಸಿಕೊಡಬೇಕು ಎಂದು ಮನವಿ ಮಾಡಿದರು.

ನಿಖಿಲ್‌ನನ್ನು ನಿಮ್ಮ ಮಡಿಲಿಗೆ ಹಾಕುತ್ತಿದ್ದೇವೆ. ಅವರನ್ನು ಗೆಲ್ಲಿಸಿ, ನಾನು ಮತ್ತು ಎಚ್‌ಡಿಕೆ ನಿಮ್ಮ ಋಣ ತೀರಿಸಲು ಬದ್ಧರಾಗಿದ್ದೇವೆ. ಕಾಂಗ್ರೆಸ್‌ನವರು ಆತ್ಮ ವಂಚನೆ ಮತ್ತು ಪಕ್ಷಕ್ಕೆ ವಂಚನೆ ಮಾಡಿಕೊಳ್ಳದೆ ಮೈತ್ರಿ ಅಭ್ಯರ್ಥಿಯ ಗೆಲುವಿಗಾಗಿ ಪಣತೊಡಬೇಕೆಂದು ಮನವಿ ಮಾಡಿದರು.