ಪ್ರವಾಹಪೀಡಿತ ಗ್ರಾಮಕ್ಕೆ ನ್ಯಾಯಾಧೀಶರ ಭೇಟಿ

ಕೊಳ್ಳೇಗಾಲ: ತಾಲೂಕಿನ ಕಾವೇರಿ ನದಿಪಾತ್ರದ ಪ್ರವಾಹ ಪೀಡಿತ ಗ್ರಾಮಗಳಿಗೆ ಜಿಲ್ಲಾ ಸೆಷನ್ ನ್ಯಾಯಾಧೀಶ ಜಿ.ಬಸವರಾಜು ನೇತೃತ್ವದ ತಂಡ ಗುರುವಾರ ಭೇಟಿ ನೀಡಿ ಜನರ ಸಮಸ್ಯೆ ಆಲಿಸಿತು.
ನ್ಯಾಯಾಧೀಶರು ದಾಸನಪುರ ಮತ್ತು ಮುಳ್ಳೂರು ಗ್ರಾಮಗಳಿಗೆ ಭೇಟಿ ನೀಡಿ ಪ್ರವಾಹದಿಂದ ಜನರಿಗಾದ ತೊಂದರೆಗಳ ಬಗ್ಗೆ ಮಾಹಿತಿ ಪಡೆದರು. ಇದೇ ವೇಳೆದಾಸನಪುರ ಗ್ರಾಮಸ್ಥರು ನ್ಯಾಯಾಧೀಶರ ಬಳಿ ಬಂದು ತಮ್ಮ ಸಮಸ್ಯೆಗಳನ್ನು ಹೇಳಿಕೊಂಡರು.

ಹರಳೆ ಗ್ರಾ.ಪಂ.ವ್ಯಾಪ್ತಿಗೆ ಸೇರಿದ ದಾಸನಪುರ ಗ್ರಾಮದಲ್ಲಿ ಪರಿಶಿಷ್ಟಜಾತಿ, ಪರಿಶಿಷ್ಟ ಪಂಗಡ, ಕುರುಬ ಹಾಗೂ ಲಿಂಗಾಯತ ಸಮುದಾಯದ ಜನರು ವಾಸವಿದ್ದು, ಎಲ್ಲರೂ ಕಾವೇರಿ ನದಿ ನೀರನ್ನೇ ಕುಡಿಯಲು ಹಾಗೂ ಅಡುಗೆ ತಯಾರಿಕೆಗೆ ಬಳಸುತ್ತಿದ್ದಾರೆ. ಪ್ರವಾಹ ಸಂದರ್ಭದಲ್ಲಿಯೂ ನಾವು ನೀರಿಗಾಗಿ ನದಿಯನ್ನು ಆಶ್ರಯಿಸಬೇಕಿದೆ. ಹೀಗಿದ್ದರೂ ತಾಲೂಕು ಆಡಳಿತ ಶುದ್ಧ ಕುಡಿಯುವ ನೀರು ಪೂರೈಕೆಗೆ ಕ್ರಮವಹಿಸಿಲ್ಲ. ತುರ್ತು ಸಂದರ್ಭದಲ್ಲಿ ನೀರು ಪಡೆಯಲು ಬೋರ್‌ವೆಲ್, ನೀರಿನ ತೊಂಬೆಗಳನ್ನು ನಿರ್ಮಿಸಿಲ್ಲ ಎಂದು ದೂರಿದರು.
ಗ್ರಾಮದಲ್ಲಿ ಸ್ವಚ್ಛತೆ ಕಾಣದಾಗಿದ್ದು, ಚರಂಡಿ ಮತ್ತು ರಸ್ತೆಗಳಲ್ಲಿ ತ್ಯಾಜ್ಯ ಸಂಗ್ರಹ ಮತ್ತು ವಿಲೇವಾರಿಯಾಗುತ್ತಿಲ್ಲ. ಬೀದಿ ದೀಪ ಸೇರಿದಂತೆ ಜನರಿಗೆ ಮೂಲ ಸೌಕರ್ಯಗಳು ಇಲ್ಲವಾಗಿದೆ. ನದಿಯಲ್ಲಿ ಪ್ರವಾಹ ಬರುವ ಬಗ್ಗೆ ಸರ್ಕಾರಕ್ಕೆ ತಿಳಿದಿದ್ದರೂ ನದಿ ದಡದಲ್ಲಿ ತಡೆಗೋಡೆ ನಿರ್ಮಿಸಿ ಗ್ರಾಮ ಮುಳುಗಡೆಯಾಗದಂತೆ ಕ್ರಮವಹಿಸಿಲ್ಲ ಎಂದು ಅಳಲು ತೋಡಿಕೊಂಡರು.

ಪ್ರವಾಹ ತಗ್ಗಿದ ಬಳಿಕವೂ ಗ್ರಾಮದಲ್ಲಿ ಕುಸಿದಿರುವ ಮನೆಗಳ ಮರು ನಿರ್ಮಾಣಕ್ಕೆ ತಾಲೂಕು ಆಡಳಿತ ನಿರೀಕ್ಷಿತ ವೇಗದಲ್ಲಿ ಕೆಲಸ ಮಾಡುತ್ತಿಲ್ಲ. ನೆರೆ ಪರಿಹಾರ ಕೇಂದ್ರದಲ್ಲಿ ನಮ್ಮೆಲ್ಲರಿಗೆ ಆರೋಗ್ಯ ತಪಾಸಣೆ, ಊಟ, ತಿಂಡಿ ಹೊರತುಪಡಿಸಿ ಬೇರಾವ ಸೌಲಭ್ಯವನ್ನು ನೀಡಲಿಲ್ಲ. ಗ್ರಾಮಸ್ಥರಿಗೆ ಹಳೇ ಅಣಗಳ್ಳಿ ಗ್ರಾಮದ ನ್ಯಾಯಬೆಲೆ ಅಂಗಡಿ ಮಾಲೀಕರು ಸಮರ್ಪಕವಾಗಿ ಪಡಿತರ ವಿತರಿಸುತ್ತಿಲ್ಲ. ದಾಸನಪುರ ಗ್ರಾಮದವರಿಗೆ ಪಡಿತರ ವಿತರಣೆ ಜವಾಬ್ದಾರಿ ನೀಡಬೇಕು ಎಂದು ಆಗ್ರಹಿಸಿದರು.

ಮುಳ್ಳೂರು ಗ್ರಾಮಕ್ಕೆ ನ್ಯಾಯಾಧೀಶರು ಭೇಟಿ ನೀಡಿದ ವೇಳೆ ಗ್ರಾಮಸ್ಥರು ಮಾತನಾಡಿ, ಪ್ರವಾಹದ ವೇಳೆ ಗ್ರಾಮ ಜಲಾವೃತಗೊಳ್ಳುವುದನ್ನು ತಪ್ಪಿಸಲು ಶಾಶ್ವತ ರೀತಿಯಲ್ಲಿ ನದಿ ದಡದಲ್ಲಿ ತಡೆಗೋಡೆ ನಿರ್ಮಿಸಲು ಸರ್ಕಾರಕ್ಕೆ ಸಾಕಷ್ಟು ಮನವಿ ಮಾಡಲಾಗಿದೆ. ಆದರೂ ಯಾವುದೇ ಕ್ರಮವಾಗಿಲ್ಲ. ಗ್ರಾಮ ಸಮೀಪದಲ್ಲಿ ಕಾವೇರಿ ನದಿಯಿದ್ದರೂ ನಮಗೆ ಕಾವೇರಿ ನೀರು ಪೂರೈಸಲು ಆಡಳಿತ ವರ್ಗ ಕ್ರಮವಹಿಸಿಲ್ಲ. ಇಲ್ಲಿಂದ ಯಳಂದೂರು ಪಟ್ಟಣಕ್ಕೆ ಪೈಪ್‌ಲೈನ್ ಮೂಲಕ ನೀರು ಪೂರೈಸಲಾಗುತ್ತಿದೆ. ಆದರೆ, ಮುಳ್ಳೂರು ಗ್ರಾಮವನ್ನು ಮಾತ್ರ ಕಡೆಗಣಿಸಲಾಗಿದೆ. ಪರಿಣಾಮ, ನಾವೆಲ್ಲ ಬೋರ್‌ವೆಲ್‌ನಲ್ಲಿ ಬರುವ ಗಡಸು ನೀರನ್ನೆ ಸೇವಿಸಬೇಕಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಮೌಖಿಕ ಅಹವಾಲುಗಳನ್ನು ಆಲಿಸಿದ ನ್ಯಾಯಾಧೀಶರು, ಕಾವೇರಿ ನದಿ ದಡದಲ್ಲಿ ಶಾಶ್ವತ ರೀತಿಯಲ್ಲಿ ಬದು ಅಥವಾ ತಡೆಗೋಡೆ ನಿರ್ಮಿಸುವ ಮೂಲಕ ಗ್ರಾಮಕ್ಕೆ ನುಗ್ಗುವ ಪ್ರವಾಹ ತಡೆಗೆ ಸರ್ಕಾರಕ್ಕೆ ಸಂಬಂಧಿಸಿದ ಇಲಾಖೆ ಮೂಲಕ ಪತ್ರ ಬರೆಯಲಾಗುವುದು. ಅದೇ ರೀತಿ ಪ್ರವಾಹ ಪೀಡಿತ ಜನರಿಗೆ ಇಲಾಖಾವಾರು ದೊರೆಯಬೇಕಾದ ಸವಲತ್ತುಗಳನ್ನು ಕಲ್ಪಿಸಲು ಈ ಕೂಡಲೇ ಸೂಚನೆ ನೀಡುವ ಸಂಬಂಧ ಈ ದಿನ ಪ್ರವಾಹ ಪೀಡಿತ ಪ್ರದೇಶಕ್ಕೆ ಭೇಟಿ ನೀಡಲಾಗಿದೆ. ಈ ನಡುವೆ ಸಾರ್ವಜನಿಕರಿಗೆ ಸರ್ಕಾರದಿಂದ ಆಗದಿರುವ ಕೆಲಸ ಕಾರ್ಯಗಳ ಬಗ್ಗೆ ಗಮನ ಹರಿಸಲು ಅಗತ್ಯ ಸೂಚನೆ ನೀಡಲು ರಾಷ್ಟ್ರೀಯ ಕಾನೂನು ಸೇವೆಗಳ ಪ್ರಾಧಿಕಾರಕ್ಕೆ ಜನರು ಅರ್ಜಿ ನೀಡಬಹುದಾಗಿದೆ. ಈ ಸೇವೆ ನಿರಂತರವಾಗಿದೆ ಎಂದು ತಿಳಿಸಿದರು.

ಮಾತ್ರವಲ್ಲದೇ, ಸ್ಥಳದಲ್ಲಿದ್ದ ತಾಪಂ ಇಒ ಉಮೇಶ್ ಸೇರಿದಂತೆ ಪಿಡಿಒ ರಾಮೇಗೌಡ, ರಾಜೇಶ್, ಕಾರ್ಯದರ್ಶಿ ಎನ್.ಉಷಾ ಅವರಿಗೆ ಕೂಡಲೇ ಪ್ರವಾಹ ಪೀಡಿತರು ಹಾಗೂ ಜನರ ಸಮಸ್ಯೆಗಳನ್ನು ತ್ವರಿತಗತಿಯಲ್ಲಿ ಪರಿಹರಿಸುವಂತೆ ಸೂಚನೆ ನೀಡಿದರು.
ಹಿರಿಯ ಶ್ರೇಣಿ ಸಿವಿಲ್ ನ್ಯಾಯಾಧೀಶ ಎಸ್.ಜೆ.ಕೃಷ್ಣ, ಪ್ರಧಾನ ಸಿವಿಲ್ ನ್ಯಾಯಾಧೀಶ ಟಿ.ಶ್ರೀಕಾಂತ್, ತಾಪಂ ಕಚೇರಿಯ ನರೇಗಾ ಯೋಜನೆ ಸಹಾಯಕ ನಿರ್ದೇಶಕ ಲಿಂಗರಾಜು, ಕಸಬಾ ಹೋಬಳಿ ರಾಜಸ್ವ ನಿರೀಕ್ಷಕ ನಿರಂಜನ್ ಇದ್ದರು.