ಬೆಂಗಳೂರು ಹೊರವಲಯವೇ ಉಗ್ರರ ಅಡಗುದಾಣ

| ಗೋವಿಂದರಾಜು ಚಿನ್ನಕುರ್ಚಿ ಬೆಂಗಳೂರು

ರಾಜಧಾನಿಯಿಂದ ಹೊರ ವಲಯಕ್ಕೆ ಉಗ್ರರು ತಮ್ಮ ಅಡಗುದಾಣ ಶಿಫ್ಟ್ ಮಾಡಿದ್ದಾರೆ. ರಾಷ್ಟ್ರಪತಿ, ಉಪರಾಷ್ಟ್ರಪತಿ, ಪ್ರಧಾನಿ, ವಿದೇಶಿ ಉದ್ಯಮಿಗಳು, ಗಣ್ಯರು ಇನ್ನಿತರರು ನಗರದಲ್ಲಿ ವಾಸ್ತವ್ಯ ಹೂಡಿ ಹೋಗುತ್ತಾರೆ. ಇಂಥ ಸಂದರ್ಭದಲ್ಲಿ ಪೊಲೀಸರು ಮತ್ತು ಕೇಂದ್ರ ಭದ್ರತಾ ಪಡೆಗಳು ಹೈ-ಅಲರ್ಟ್ ಆಗಿರುತ್ತವೆ. ಶಂಕಾಸ್ಪದ ವ್ಯಕ್ತಿಗಳ ಮತ್ತು ಮೊಬೈಲ್ ಕರೆಗಳ ಮೇಲೆ ಸದಾ ನಿಗಾ ಇರುತ್ತದೆ. ಹಾಗಾಗಿ ಬಂಧನ ಭೀತಿಯಿಂದ ಭಯೋತ್ಪಾದಕರು ಹೊರವಲಯದ ತುಮಕೂರು, ರಾಮನಗರ, ಹೊಸೂರು ರಸ್ತೆ, ಕೋಲಾರದಲ್ಲಿ ಉಳಿದುಕೊಳ್ಳುತ್ತಾರೆ.

ಇಲ್ಲಿ ಸುಲಭವಾಗಿ ಬಾಡಿಗೆ ಮನೆಗಳು ಸಿಗುತ್ತಿವೆ. ಬೆಂಗಳೂರಿಗೆ ಯಥೇಚ್ಛ ಸಾರಿಗೆ ಸೌಲಭ್ಯಗಳಿದ್ದು, ಒಂದು ಒಂದೂವರೆ ತಾಸಿನಲ್ಲಿ ನಗರ ತಲುಪಬಹುದು. ವರ್ಷಗಟ್ಟಲೆ ಅಡಗಿದ್ದರೂ ಯಾರಿಗೂ ಗೊತ್ತಾಗುವುದಿಲ್ಲ. ಜನಸಾಮಾನ್ಯರಂತೆ ಇದ್ದುಕೊಂಡೇ ರಕ್ತಪಾತ ನಡೆಸಲು ಸಂಚು ರೂಪಿಸುತ್ತಾರೆ ಎಂದು ಎನ್​ಐಎ ಮೂಲಗಳು ವಿಜಯವಾಣಿಗೆ ತಿಳಿಸಿವೆ. ಬಾಂಗ್ಲಾದಲ್ಲಿ ಬಾಂಬ್ ಸ್ಫೋಟ ಪ್ರಕರಣದಲ್ಲಿ 95 ವರ್ಷ ಶಿಕ್ಷೆಗೆ ಒಳಗಾಗಿ ಜೈಲು ಸೇರಿದ್ದ ಜಮಾತ್ ಉಲ್ ಮುಜಾಹಿದ್ದೀನ್ ಬಾಂಗ್ಲಾದೇಶ್(ಜೆಎಂಬಿ) ಮುಖಂಡ ಮುನೀರ್ ಶೇಖ್ ಜೈಲ್ ಬ್ರೇಕ್ ಮಾಡಿಕೊಂಡು ಭಾರತಕ್ಕೆ ನುಸುಳಿದ್ದ. ಆ ನಂತರ ಬೋಧ್​ಗಯಾ, ಕೋಲ್ಕತದ ಬರ್ದ್ವಾನ್ ಮತ್ತು ಬೋಧ್​ಗಯಾದ ಕಲ್​ಚಕ್ರದಲ್ಲಿ ಬಾಂಬ್ ಸ್ಪೋಟಿಸಿದ್ದ ಮುನೀರ್ ಮತ್ತು ಆತನ ಬಲಗೈ ಬಂಟ ಆದಿಲ್ ಕೋಲಾರದ ಮಾಲೂರಿಗೆ ಬಂದಿದ್ದರು. ಖಾಸಗಿ ಕಂಪನಿಯಲ್ಲಿ ಹೆಲ್ಪರ್ ಆಗಿ ಮುನೀರ್ ಕೆಲಸಕ್ಕೆ ಸೇರಿದ್ದ. ಕೇರಳದ ಮಲ್ಲಂಪುರಂನಲ್ಲಿ ಈತನ ಸಹಚರರನ್ನು ಎನ್​ಐಎ ತಂಡ ಬಂಧಿಸಿತ್ತು. ವಿಚಾರಣೆಯಲ್ಲಿ ತಮ್ಮ ಬಗ್ಗೆ ಎಲ್ಲಿ ಬಾಯಿಬಿಡುತ್ತಾರೋ ಎಂಬ ಭೀತಿಯಿಂದ ಮುನೀರ್-ಆದಿಲ್ ಕುಟುಂಬಸಮೇತರಾಗಿ ರಾಮನಗರಕ್ಕೆ ಬಂದು ನೆಲೆಸಿದ್ದರು.ಇದೇ ರೀತಿ ಹಲವು ಶಂಕಿತ ಉಗ್ರರು ಬೆಂಗಳೂರು ಹೊರವಲಯದಲ್ಲಿ ಅಡಗಿದ್ದರು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಹೊಸೂರು ರಸ್ತೆ, ತುಮಕೂರಲ್ಲಿದ್ದ ಉಗ್ರರು: 2014 ಡಿ.28ರಂದು ಚರ್ಚ್ ಸ್ಟ್ರೀಟ್​ನಲ್ಲಿ ಸಂಭವಿಸಿದ್ದ ಬಾಂಬ್ ಸ್ಫೋಟ ಪ್ರಕರಣದ ಆರೋಪಿ ಸಿಮಿ ಉಗ್ರ ಜಾವೇದ್ ರಫೀಕ್ ಅಲಿಯಾಸ್ ಆಲಂ ಜೆಬ್ ಆಫ್ರಿದಿ ಹೊಸೂರು ರಸ್ತೆಯ ಪರಪ್ಪನ ಅಗ್ರಹಾರದ ವಿನಾಯಕ ಲೇಔಟ್​ನಲ್ಲಿ ಪತ್ನಿ ಜತೆ ನೆಲೆಸಿದ್ದ. ವರ್ಷದ ಬಳಿಕ ಎನ್​ಐಎ ಅಧಿಕಾರಿಗಳು ಬಂಧಿಸಿದ್ದರು. 2008ರಲ್ಲಿ ನಡೆದಿದ್ದ ಅಹಮದಾಬಾದ್ ಸ್ಫೋಟ ಪ್ರಕರಣದಲ್ಲಿ ಬೇಕಾಗಿದ್ದ ರಫೀಕ್ 7 ವರ್ಷಗಳಿಂದ ಕಣ್ತಪ್ಪಿಸಿ ಓಡಾಡುತ್ತಿದ್ದದ್ದು ಬೆಳಕಿಗೆ ಬಂದಿತ್ತು. ಚಿನ್ನಸ್ವಾಮಿ ಕ್ರೀಡಾಂಗಣದ ಕಾಂಪೌಂಡ್ ಬಳಿ 2010ರಲ್ಲಿ ನಡೆದಿದ್ದ ಬಾಂಬ್ ಸ್ಫೋಟ ಪ್ರಕರಣದ ಮಾಸ್ಟರ್ ಮೈಂಡ್ ಇಂಡಿಯನ್ ಮುಜಾಹಿದ್ದೀನ್ ಸಂಘಟನೆ ಸಂಸ್ಥಾಪಕ ಉಗ್ರ ಯಾಸಿನ್ ಭಟ್ಕಳ್ ಸಹೋದರರು ತುಮಕೂರಲ್ಲಿ ಆಶ್ರಯ ಪಡೆದಿದ್ದರು.

ಆಸ್ಪತ್ರೆಯಲ್ಲಿ ಚಿಕಿತ್ಸೆ

ಮಾಲೂರಿನಲ್ಲಿ ನೆಲೆಸಿದ್ದ ಮುನೀರ್ 2016ರಲ್ಲಿ ವೈಟ್​ಫೀಲ್ಡ್ ಸತ್ಯಸಾಯಿಬಾಬಾ ಆಸ್ಪತ್ರೆಯಲ್ಲಿ ನರದೌರ್ಬಲ್ಯಕ್ಕೆ ಚಿಕಿತ್ಸೆ ಪಡೆದಿದ್ದ ಎಂದು ಎನ್​ಐಎ ತನಿಖೆಯಿಂದ ಬೆಳಕಿಗೆ ಬಂದಿದೆ. ಮುನೀರ್ ಮತ್ತು ಆದಿಲ್​ನನ್ನು ಟ್ರಾನ್ಸಿಟ್ ರಿಮ್ಯಾಂಡ್ ಮೇಲೆ ವಶಕ್ಕೆ ಪಡೆದಿದ್ದ ಅಧಿಕಾರಿಗಳು ಬುಧವಾರ ಇಬ್ಬರನ್ನೂ ಬಿಹಾರದ ಪಟನಾಕ್ಕೆ ಕರೆದೊಯ್ದಿದ್ದಾರೆ.

ಚಿಕ್ಕ ಕೆಲಸ, ದೊಡ್ಡ ಸಂಚು

ಉಗ್ರ ಸಂಘಟನೆಗಳಿಂದ ತಮ್ಮ ಬ್ಯಾಂಕ್ ಖಾತೆಗೆ ಲಕ್ಷಾಂತರ ರೂ. ಹಣ ಬಂದರೂ ಬಹುತೇಕ ಉಗ್ರರು ಸಣ್ಣ ಕೆಲಸ ಮಾಡಿಕೊಂಡೇ ವಿಧ್ವಂಸಕ ಕೃತ್ಯಕ್ಕೆ ಸಂಚು ರೂಪಿಸುತ್ತಾರೆ. ಚಿನ್ನಸ್ವಾಮಿ ಕ್ರೀಡಾಂಗಣ ಬಳಿಯ ಸ್ಪೋಟದ ಮಾಸ್ಟರ್ ಮೈಂಡ್ ಯಾಸಿನ್ ಭಟ್ಕಳ್ ತುಮಕೂರಿನಲ್ಲಿ ವಿದ್ಯಾರ್ಥಿ ಸೋಗಿನಲ್ಲಿ ನೆಲೆಸಿದ್ದ. ಇನ್ನು ಚರ್ಚ್​ಸಿ್ಟ್ರಟ್ ಸ್ಫೋಟ ಪ್ರಕರಣದ ಜಾವೇದ್ ರಫೀಕ್, ಎಸಿ ಮೆಕಾನಿಕ್ ಸೋಗಿನಲ್ಲಿ ಪತ್ನಿ ಜತೆ ಜೀವನ ನಡೆಸುತ್ತಿದ್ದ. ಭಾನುವಾರ ಸೆರೆಸಿಕ್ಕ ಮುನೀರ್ ಮಾಲೂರಿನಲ್ಲಿ ಖಾಸಗಿ ಕಂಪನಿಯಲ್ಲಿ ಹೆಲ್ಪರ್ ಆಗಿದ್ದ. ರಾಮನಗರದಲ್ಲಿ ಸೈಕಲ್​ನಲ್ಲಿ ಬಟ್ಟೆ ವ್ಯಾಪಾರ ಮಾಡುತ್ತಿದ್ದ. ಕೆಲಸದ ನೆಪದಲ್ಲಿ ಬೆಂಗಳೂರಿಗೆ ಬಂದು ಹೋಗಿ ಮಾಹಿತಿ ಕಲೆ ಹಾಕುತ್ತಾರೆ. ಜತೆಗೆ ಬಾಂಬ್ ತಯಾರಿಕಾ ಸಾಮಗ್ರಿಗಳನ್ನು ಖರೀದಿಸಿ ಮನೆಯಲ್ಲಿ ಸ್ಪೋಟಕ ತಯಾರಿಸಿ ಬೆಂಗಳೂರಿನಲ್ಲಿ ಸ್ಪೋಟಿಸುತ್ತಾರೆ. ಮುನೀರ್ ಬಳಿ ಪ್ರವಾಸಿ ತಾಣ, ದೇವಸ್ಥಾನ, ಕಟ್ಟಡಗಳ ಮ್ಯಾಪ್, ಜಿಲೆಟಿನ್ ಕಡ್ಡಿ ಪತ್ತೆಯಾಗಿದ್ದು ಇದಕ್ಕೆ ಸಾಕ್ಷಿ.