More

  ಪುರುಷಸಿಂಹರಿಗೇ ಪುರಸ್ಕಾರ ಮೀಸಲು

   

  ಭಾರತೀಯರ ಕಳೆದ ಕೆಲ ಸಾವಿರ ವರ್ಷಗಳ ಇತಿಹಾಸವನ್ನು ಗಮನಿಸಿದಾಗ ನಮ್ಮ ಬಹಳಷ್ಟು ಸಮಸ್ಯೆಗಳಿಗೆ ಕಾರಣ ಧೈರ್ಯ, ವೀರ್ಯಗಳ, ಶೌರ್ಯಗಳ ಕೊರತೆ. ಬೇರೆಲ್ಲ ಸಮಸ್ಯೆಗಳಿಗೆ ಪರಿಹಾರವಿರುವಂತೆ ಸ್ವಾಮಿ ವಿವೇಕಾನಂದರ ಚಿಂತನೆಯಲ್ಲೇ ಇದರ ಪರಿಹಾರವೂ ಅಡಗಿದೆ. ಆ ಚಿಂತನೆಗಳನ್ನು ಅನುಷ್ಠಾನ ರೂಪದಲ್ಲಿ ತರುವುದು ಅಗತ್ಯ.

  ಹೊಂಬೆಳಕು‘ವೀರಾ ಭೋಗ್ಯಾ ವಸುಂಧರಾ’ ಎಂದು ಸನಾತನ ಧರ್ಮ ಸಾವಿರಾರು ವರ್ಷಗಳ ಹಿಂದೆಯೇ ಯಶಸ್ಸಿನ ಸೂತ್ರಗಳಲ್ಲಿ ಮುಖ್ಯವಾದದನ್ನು ಜಗತ್ತಿಗೆ ತಿಳಿಸಿಬಿಟ್ಟಿದೆ. ಇದರರ್ಥ ಇಷ್ಟೇ. ‘ಧೀರರೇ ಭೂಲೋಕವನ್ನು ಆಳಬಲ್ಲರು’ ಎಂದು. ಇಲ್ಲಿ ‘ಭೂಲೋಕ’ ಮತ್ತು ‘ಆಳುವುದು’ ಈ ಪದಗಳಿಗೆ ವಿವರಣೆ ಅಗತ್ಯ. ಯಾವುದೇ ಕಾಲದಲ್ಲಿ, ಯಾವುದೇ ಸಂದರ್ಭಗಳಲ್ಲಿ ಎನ್ನುವುದು ಭೂಲೋಕ ಅಥವಾ ‘ವಸುಂಧರಾ’ ಎಂಬ ಪದಗಳು ತಿಳಿಸಿದರೆ, ‘ಗೆಲ್ಲುವವರು, ವಿಜೃಂಭಿಸುವವರು ಪರಿಸ್ಥಿತಿಯನ್ನು ಹತೋಟಿಯಲ್ಲಿಟ್ಟುಕೊಳ್ಳುವವರು, ತಮಗೆ ಬೇಕಾದ ಹಾಗೆ ಸನ್ನಿವೇಶಗಳನ್ನು ಬದಲಾಯಿಸಿಕೊಳ್ಳಬಲ್ಲವರು’ ಎಂಬುದನ್ನು ಆಳುವವರು, ಭೋಗ್ಯಾ ಪದಗಳು ತಿಳಿಸುತ್ತವೆ. ಸವಾಲುಗಳಲ್ಲಿ ಎರಡು ವಿಧ. ಅವೇ ಜಡವಸ್ತುಗಳಿಂದ ಮೂಡಿಬಂದದ್ದು ಮತ್ತು ಚೈತನ್ಯಪೂರ್ಣ ಅಂಶಗಳಿಂದ ಮೂಡಿಬಂದದ್ದು.

  ಉಕ್ಕಿ ಹರಿಯುವ ನದಿ ಯಾವ ವ್ಯಕ್ತಿಗೂ ಒಂದೇ ರೀತಿಯ ಸವಾಲನ್ನೇ ಒಡ್ಡುತ್ತದೆ; ಆದರೆ ಕೆಲ ಆಟಗಾರರಿಂದ ಕೂಡಿದ ಒಂದು ಕ್ರೀಡಾ ತಂಡ ಬೇರೆ ಬೇರೆ ತಂಡಗಳಿಗೆ ಬೇರೆ ಬೇರೆ ರೀತಿಯ ಸವಾಲುಗಳನ್ನೊಡ್ಡುತ್ತದೆ. ದುರ್ಬಲ ತಂಡವೆಂದು ಪರಿಗಣಿಸಲ್ಪಟ್ಟವರ ಎದುರು ಪ್ರಬಲ ತಂಡವೊಂದು ತಿಣಕಾಡಿ ಗೆದ್ದರೆ ಪ್ರಬಲರಲ್ಲೇ ಪ್ರಬಲರೆಂದು ಸಾಬೀತಾದವರನ್ನು ಅವರು ಸುಲಭವಾಗಿ ಗೆಲ್ಲಬಹುದು. ಆಸ್ಟ್ರೇಲಿಯಾ ಅಫ್ಘಾನಿಸ್ತಾನದ ಮೇಲೆ ತಿಣಕಾಡಿ ಭಾರತವನ್ನು ಸುಲಭತುತ್ತಾಗಿಸಿಕೊಂಡಂತೆ. ಅತ್ಯಂತ ಪ್ರಬಲರು ತಮಗಿಂತಲೂ ದುರ್ಬಲರಾದ, ತಮ್ಮಿಂದ ಸೋಲಿಸಲ್ಪಟ್ಟ ತಂಡದಿಂದಲೇ ಸೋಲುಂಡು ಖಿನ್ನತೆಗೆ ಒಳಗಾಗಬಹುದು, ಭಾರತಕ್ಕಾದಂತೆ. ಆದರೆ ಸರಿಯಾಗಿ ವಿಶ್ಲೇಷಿಸಿದರೆ ಇಂಥ ಸಂದರ್ಭಗಳೇನೂ ಒದಗಿಯೇ ತೀರುತ್ತವೆ ಎಂದೇನೂ ಅಲ್ಲ.

  ಇತ್ತೀಚೆಗೆ ನಡೆದ ಏಕದಿನ ವಿಶ್ವಕಪ್ ಕ್ರಿಕೆಟ್ ಟೂರ್ನಿಯನ್ನೇ ತೆಗೆದುಕೊಳ್ಳಿ. ಭಾರತೀಯ ತಂಡವೇ ಮೊದಲಿನಿಂದಲೂ ಬಲಿಷ್ಠ ತಂಡ. ಆಸ್ಟ್ರೇಲಿಯಾವನ್ನು ಸುಲಭವಾಗಿಯೇ ಸೋಲಿಸಿದ್ದ ತಂಡವೂ ಹೌದು. ಅಷ್ಟೇ ಅಲ್ಲ ಆಸ್ಟ್ರೇಲಿಯಾವನ್ನೇ ದಕ್ಷಿಣ ಆಫ್ರಿಕಾ ತಂಡ (ಸೆಮಿಫೈನಲ್​ಗಿಂತ ಮುಂಚೆ) ಸೋಲಿಸಿತ್ತು. ಆಸ್ಟ್ರೇಲಿಯಾ ಆತ್ಮವಿಶ್ವಾಸವೇ ಇಲ್ಲದೆ ಕುಸಿದುಹೋಗಬೇಕಿತ್ತು. ಆಸ್ಟ್ರೇಲಿಯಾವನ್ನು ಜಯಿಸಿದ ತಂಡವೇ ನಮಗೆ ಲೆಕ್ಕಕ್ಕಿಲ್ಲ ಇನ್ನು ಆಸ್ಟ್ರೇಲಿಯಾ ಯಾವ ಲೆಕ್ಕ ಎಂದು ಭಾರತ ಆತ್ಮವಿಶ್ವಾಸದ ಉತ್ತುಂಗದಲ್ಲಿ ನಲಿಯಬಹುದಿತ್ತು. ಆದರೆ ಸಂದರ್ಭ ಬಂದಿದ್ದು ಇದರ ವಿರುದ್ಧವಾಗಿ. ಕಾರಣ ಇಷ್ಟೇ ಯಾವುದೇ ವೀರಾಗ್ರಣಿಗೆ, ಹೋರಾಡಬೇಕಾದ ಯೋಧನಿಗೆ, ಸವಾಲನ್ನು ಎದುರಿಸಬೇಕಾದ ಧೀರನಿಗೆ ಅವಶ್ಯವಾದದ್ದು ಸಾಮರಿಕ (ಸಮರಕ್ಕೆ ಬೇಕಾದ) ತರಬೇತಿಯಷ್ಟೇ ಅಲ್ಲ ; ಅದಕ್ಕಿಂತಲೂ ಮುಖ್ಯವಾದದ್ದು ಆತ್ಮವಿಶ್ವಾಸ ಮತ್ತು ಗೆದ್ದೇತೀರುವೆ ಎಂಬ ದೃಢನಂಬಿಕೆ.

  ‘ಸೋಲುವುದು ನನ್ನ ಜೀವನದಲ್ಲೇ ಇಲ್ಲ. ನನ್ನ ನಿಘಂಟಿನಲ್ಲೇ ಇಲ್ಲ. ಹಾಗೆಂದರೇನೆಂಬುದೇ ನನಗೆ ಗೊತ್ತಿಲ್ಲ ಮತ್ತು ಎದುರಾಳಿಯಂತೂ ನಮ್ಮಿಂದ ಒಮ್ಮೆ ಸೋತವರು ಅಷ್ಟೇ ಅಲ್ಲ ನಮ್ಮಿಂದ ಸೋತವರಿಂದಲೇ ಸೋತವರು. ಇವರು ಯಾವ ಲೆಕ್ಕ’ ಎಂಬ ಆತ್ಮವಿಶ್ವಾಸದ ದ್ವಿಗುಣತೆಯಿಂದ ಕೂಡಿದ ಮನಸ್ಥಿತಿ ಭಾರತೀಯರದಾಗಬೇಕಿತ್ತು. ಕಳೆದ ಐದು ಬೇರೆ ಬೇರೆ ಸಂದರ್ಭಗಳಲ್ಲಿ ಕೊನೆಯ ಹಂತದವರೆಗೂ ಬಂದು ನಿರ್ಣಾಯಕ ಹಂತದಲ್ಲೇ ಮತ್ತು ಅಲ್ಲಿ ಮಾತ್ರ ಇವರು ಸೋಲುತ್ತಾರೆ ಎಂದರೆ ಇವರಿಗೆ ಆಟ ಬರುವುದಿಲ್ಲ ಅಂತಲ್ಲ ; ಅದೊಂದು ರೀತಿಯ ಪರೀಕ್ಷಾ ಭಯವಿದ್ದಂತೆ. ಇದಕ್ಕೆ ಕಾರಣ ಸರಿಯಾದ ಮೈಂಡ್​ಸೆಟ್​ನ ಕೊರತೆ. ಧೈರ್ಯ, ಆತ್ಮವಿಶ್ವಾಸದ ಕೊರತೆ. ಭಾರತೀಯ ಕ್ರಿಕೆಟ್ ಆಟಗಾರರಿಗೆ ಮೊದಲಿನಿಂದಲೂ ಅಂಟಿರುವ ಜಾಡ್ಯ ಇದು.

  ಹೈಸ್ಕೂಲ್ ಮತ್ತು ಕಾಲೇಜಿನ ದಿನಗಳಲ್ಲಿ ಬಹಳಷ್ಟು ಕ್ರಿಕೆಟ್ ಆಡಿರುವ ನನಗೆ ಮೊನ್ನೆಯವರೆಗೂ ಕ್ರಿಕೆಟ್ ಎಂದರೆ ಪ್ರಾಣವೇ, ಕೆಲವೊಮ್ಮೆ ಈಗಲೂ ಆಡುತ್ತೇನೆ. ಬೌಲಿಂಗ್​ನಲ್ಲಿ ಲೈನ್​ಲೆಂತ್ ಇಂದಿಗೂ ತಪ್ಪುವುದಿಲ್ಲ. ಆದರೆ ಮೊದಲು ಕ್ರಿಕೆಟ್ ಪಂದ್ಯವನ್ನು ನೋಡಿದ್ದು ಎಪ್ಪತ್ತರ ದಶಕದಲ್ಲಿ. ಬಹುಶಃ 74ರಲ್ಲಿ. ಕೆ ್ಲವ್ ಲಾಯ್ಡ್ ನೇತೃತ್ವದಲ್ಲಿ ವೆಸ್ಟ್​ಇಂಡೀಸ್ ತಂಡ ಬೆಂಗಳೂರಿಗೆ ಬಂದಿದ್ದಾಗ. ಆಗಲೂ ಭಾರತೀಯ ತಂಡ ಇದೇ ದೌರ್ಬಲ್ಯದಿಂದಲೇ ಹೆಣಗಿತ್ತು. ಮೊದಲೆರಡು ಪಂದ್ಯಗಳಲ್ಲಿ ಸೋತರೂ ಕೊನೆಯ ಎರಡು ಪಂದ್ಯಗಳನ್ನು ಗೆದ್ದಿದ್ದ ಭಾರತ ಮುಂಬೈನಲ್ಲಿ ನಡೆದ ಐದನೇ ಪಂದ್ಯದಲ್ಲಿ ಸುಲಭವಾಗಿ ಗೆಲ್ಲುವ ಆತ್ಮವಿಶ್ವಾಸವನ್ನು ತೋರಬೇಕಿತ್ತು. ಮೊದಲೆರಡು ವಿಕೆಟ್​ಗಳು ಬೇಗನೇ ಪತನವಾಯಿತೋ ಇಲ್ಲವೋ ಬೇರೆಯವರೆಲ್ಲ ತರಗೆಲೆಗಳಂತೆ ಉದುರಿಹೋದರು. ಮೊನ್ನೆ ಆದದ್ದು ಹಾಗೆಯೇ. ಅನನುಭವಿ ಶುಭ್ಮನ್ ಗಿಲ್ ಬೇಗನೆ ಔಟಾದರೆ ರೋಹಿತ್ ಶರ್ಮಾ 31 ಎಸೆತಗಳಿಗೆ ನಲವತ್ತೇಳು ರನ್ ಗಳಿಸಿ ಔಟಾದರು. ಉಳಿದ ಘಟಾನುಘಟಿ ಹಿರಿಯ ಆಟಗಾರರು ತಮ್ಮ ಜೀವಮಾನದಲ್ಲೇ ಇದೇ ಮೊದಲ ಸಲ ಕ್ರಿಕೆಟ್ ಆಡುತ್ತಿರುವವರಂತೆ ಹೆದರಿಕೊಂಡು ರನ್ ಸರಾಸರಿಯನ್ನು ಮೂರಕ್ಕೋ ನಾಲ್ಕಕ್ಕೋ ಇಳಿಸಿ ಸಾಧಾರಣ ಮೊತ್ತವನ್ನೇ ಸ್ಕೋರಾಗಿಸಿಕೊಂಡು ಸೋತು ಆಮೇಲೆ ಅಳುತ್ತ ಕುಳಿತರು. ಇದರಿಂದ ಏನು ಪ್ರಯೋಜನ?

  ಕೋಟ್ಯಂತರ ಕ್ರಿಕೆಟ್​ಪ್ರೇಮಿಗಳ ಹೃದಯಗಳು ಅಂದು ಭಗ್ನವಾದವು. ಇದೇನು ಮೊದಲ ಸಲ ಫೈನಲ್​ಗೆ ಬಂದು ಪ್ರಶಸ್ತಿ ಕೈಜಾರುತ್ತಿರುವುದಲ್ಲ. ಕೆಲ ವರ್ಷಗಳ ಹಿಂದೆ ವೆಸ್ಟ್​ಇಂಡೀಸ್​ನಲ್ಲಿ ನಡೆದ ಏಕದಿನ ಪಂದ್ಯದಲ್ಲಿ ಭಾರತೀಯರ ಈ ದೌರ್ಬಲ್ಯವನ್ನು ಗಮನಿಸಿದ ಕ್ರಿಕೆಟಿಗ ವಿವಿಯನ್ ರಿಚರ್ಡ್ಸ್ ಐಛಜಿಚ್ಞಠ ಚ್ಟಛಿ ಚಿಚಚಿಜಿಛಿಠ ಜ್ಞಿ ಞಜ್ಞಿಛ ಅರ್ಥಾತ್ ‘ಮನೋದಾರ್ಢ್ಯದಲ್ಲಿ ಭಾರತೀಯರು ಮಕ್ಕಳಂತಿದ್ದಾರೆ’ ಎಂದು ಉದ್ಗರಿಸಿದ್ದರು. ಇವೆಲ್ಲ ಏನನ್ನು ಸೂಚಿಸುತ್ತವೆ? ಭಾರತೀಯ ಆಟಗಾರರಿಗೆ ಅವಶ್ಯಕವಾಗಿ ಬೇಕಾಗಿರುವುದು ಧೀರನಂತೆ ಸವಾಲುಗಳನ್ನು ಸ್ವೀಕರಿಸಿ ಗೆಲ್ಲುವುದು ಹೇಗೆ ಎಂಬುದನ್ನು ಕುರಿತು.

  ಸಂನ್ಯಾಸಿಗಳನ್ನು, ತಪಸ್ವಿಗಳನ್ನು, ಸಾಧುಗಳನ್ನು ಹೊರತುಪಡಿಸಿ ಬೇರೆಲ್ಲರಿಗೂ ಬೇಕಾದ ಪ್ರಮುಖ ಗುಣವೆಂದರೆ ಕ್ಷಾತ್ರವೀರ್ಯ, ಕ್ಷತ್ರಿಯಗುಣ. ಹೊರಜಗತ್ತು ಸ್ಪರ್ಧಾಜಗತ್ತು. ಇಲ್ಲಿ ಪ್ರತಿಯೊಂದಕ್ಕೂ ಸ್ಪರ್ಧೆ. ಜೊತೆಗೇ ಸವಾಲುಗಳು. ನ್ಯಾಯವಾಗಿ ಎದುರಿಸಬೇಕಾದ ಕೆಲವು ಸವಾಲುಗಳಿದ್ದರೆ ಅನ್ಯಾಯಜನ್ಯ ಸವಾಲುಗಳನ್ನು ಎದುರಿಸಬೇಕಾದ್ದು ಇನ್ನೊಂದು. ಸೀತೆಯನ್ನು ರಾಮ ಗೆದ್ದಿದ್ದು ನ್ಯಾಯವಾದ ಸವಾಲಾದರೆ ಕದಿಯಲ್ಪಟ್ಟ ಪತ್ನಿಯನ್ನು ಮತ್ತೆ ಪಡೆಯಬೇಕಾಗಿಬಂದದ್ದು ಅನ್ಯಾಯಜನ್ಯ. ಮಹಾಭಾರತ ಯುದ್ಧವೂ ಅನ್ಯಾಯಜನ್ಯವೇ. ಇಂಥ ಸಂದರ್ಭದಲ್ಲಿ ಗೃಹಸ್ಥ ಶಾಂತನಾಗಿ ಬದುಕಬೇಕೆಂದರೆ ಅವನು ಅತ್ಯುತ್ಸುಕತೆಯಿಂದ ಪಾಲಿಸಬೇಕಾದ ಧರ್ಮ, ‘ಶಕ್ತಿಯೇ ಜೀವನ ದೌರ್ಬಲ್ಯವೇ ಮರಣ’ ಎಂಬುದು. ಇದೇ ಕ್ಷಾತ್ರ. ಶೌರ್ಯ, ತೇಜಸ್ಸು, ಯುದ್ಧದಲ್ಲಿ ಪಲಾಯನ ಗೈಯದಿರುವುದು, ಧೃತಿ, ದಕ್ಷತೆ, ನಾಯಕತ್ವದ ಗುಣಗಳು, ಇವೇ ಕ್ಷಾತ್ರದ ಲಕ್ಷಣಗಳು.

  ಪ್ರಾರಂಭದಿಂದಲೇ ಕೆಲವು ಪಂದ್ಯಗಳನ್ನು ಸೋಲುತ್ತ, ಕೆಲವನ್ನು ಗೆಲ್ಲುತ್ತ ಬಂದಂಥ ತಂಡ ಈ ಮಾತುಗಳನ್ನು ಹೇಳಲಿ. ಆದರೆ ಮೊದಲ ದಿನದಿಂದ ಕೊನೆಯವರೆಗೂ ಇನ್ನಿಲ್ಲದ ರೀತಿಯಲ್ಲಿ ವಿಜಯದ ಕೇಕೆ ಹಾಕಿಕೊಂಡು ಬಂದ ತಂಡ ಈ ರೀತಿಯಾಗಿ ಭಾವಿಸಬಾರದು! ಇಲ್ಲವೇ ಟಾಸ್ ಸೋತಿದ್ದೇ ಸೋಲಿಗೆ ಕಾರಣ ಎನ್ನುವುದು ಇನ್ನೊಂದು ದಡ್ಡತನ. ನಮ್ಮ ಭವಿಷ್ಯವನ್ನು ಚದುರಂಗದಾಟವಾಗಿಸಿಕೊಳ್ಳಬಾರದು. ಹಾಗೆ ಮಾಡುವವರು ಆತ್ಮವಿಶ್ವಾಸವಿಹೀನರಾದ ಪಲಾಯನವಾದಿ ಹೇಡಿಗಳು. ಟಾಸ್ ಗೆದ್ದರೂ ಫೀಲ್ಡಿಂಗನ್ನು ಆರಿಸಿಕೊಂಡಾಗ ಆಸ್ಟ್ರೇಲಿಯಾ ಜಯ ಕೈತಪ್ಪಿತು ಎಂದೇ ಭಾವಿಸಿದ್ದರಂತೆ ಖ್ಯಾತ ಆಸ್ಟ್ರೇಲಿಯನ್ ಮಾಜಿ ಕ್ಯಾಪ್ಟನ್ ಆಲನ್ ಬಾರ್ಡರ್. ಆದರೆ ಆಸ್ಟ್ರೇಲಿಯಾ ಆತ್ಮವಿಶ್ವಾಸಕ್ಕೆ ಹೆಸರಾದ ತಂಡ. ಅದರ ನಾಯಕ ಹಿಂದಿನ ದಿನವೇ ಹೇಳಿದ್ದ, ‘ಭಾರತೀಯ ಪ್ರೇಕ್ಷಕರನ್ನು ಹೇಗೆ ಮೂಕರನ್ನಾಗಿಸುತ್ತೇವೆ ನೋಡುತ್ತಿರಿ’ ಎಂದು. ವಿರಾಟ್ ಕೊಹ್ಲಿ ಔಟಾದಾಗ ಇಡೀ ಕ್ರೀಡಾಂಗಣ ಲೈಬ್ರರಿಯಷ್ಟೇ ನಿಃಶಬ್ದವಾಗಿತ್ತು. ಹೀಗೆ ನಿರೀಕ್ಷಿಸದಿದ್ದ ನಿರ್ಧಾರವನ್ನೇ ತೆಗೆದುಕೊಂಡರೂ ವಿಜಯದ ಕೇಕೆ ಹಾಕಿ ಸಮರ್ಥಿಸಿಕೊಳ್ಳಬಲ್ಲವನೇ ಧೀರ; ಆತ್ಮವಿಶ್ವಾಸ ಉಳ್ಳವನು!

  ಕ್ರಿಕೆಟ್ ಒತ್ತಟ್ಟಿಗಿರಲಿ ಭಾರತೀಯರ ಕಳೆದ ಕೆಲ ಸಾವಿರ ವರ್ಷಗಳ ಇತಿಹಾಸವನ್ನು ಗಮನಿಸಿದಾಗ ನಮ್ಮ ಬಹಳಷ್ಟು ಸಮಸ್ಯೆಗಳಿಗೆ ಕಾರಣ ಧೈರ್ಯ, ವೀರ್ಯಗಳ, ಶೌರ್ಯಗಳ ಕೊರತೆ. ಬೇರೆಲ್ಲ ಸಮಸ್ಯೆಗಳಿಗೆ ಪರಿಹಾರವಿರುವಂತೆ ಸ್ವಾಮಿ ವಿವೇಕಾನಂದರ ಚಿಂತನೆಯಲ್ಲೇ ಇದರ ಪರಿಹಾರವೂ ಅಡಗಿದೆ. ‘ಕಬ್ಬಿಣದ ಮಾಂಸಖಂಡಗಳು, ಉಕ್ಕಿನ ನರಮಂಡಲ, ವಿದ್ಯುಚ್ಛಕ್ತಿಯಂಥ ಇಚ್ಛಾಶಕ್ತಿ, ಅಂಜದ, ಅಳುಕದ ಪೌರುಷವೇ ಮೂರ್ತಿವೆತ್ತಂಥ ಸ್ವಾರ್ಥರಹಿತ ಯುವಶಕ್ತಿ ಮಾತ್ರ ಯಾವುದೇ ದೇಶದ ಭರವಸೆ’ ಎಂದು ಅದೆಷ್ಟು ಸಲ, ಅದೆಷ್ಟು ಬೇರೆ ಬೇರೆ ರೀತಿಯಲ್ಲಿ ನುಡಿದಿದ್ದರು ಅವರು. ಜನಾಂಗೀಯವಾಗಿ ಆರ್ಯ ಯುವಕ ಪೂರ್ಣಪ್ರಮಾಣದಲ್ಲಿ ಆಶಿಷ್ಠ, ದೃಢಿಷ್ಠ, ಬಲಿಷ್ಠನೇ ಆಗಿದ್ದ ಎಂದು ತೈತ್ತರೀಯ ಉಪನಿಷತ್ ಹೇಳುತ್ತದೆ. ‘ಭಾರತೀಯರೇ ಬೆಂಕಿಯಂತೆ ಬದುಕಿ’ ಎನ್ನುವುದು ಕೃಷ್ಣ ಯಜುರ್ವೆದ ಈಗಾಗಲೇ ಕರೆ ಕೊಟ್ಟಿತ್ತು.

  ಅರ್ಜುನ, ಕರ್ಣ, ಭೀಮ ದುರ್ಯೋಧನರಂಥವರು ಹುಟ್ಟಿದ್ದು ಇಲ್ಲಿಯೇ. ಮಾಂಸಲ ಶರೀರ, ಬಲಿಷ್ಠ ಶರೀರ ಕ್ರೀಡಾಪಟುವಿಗೆ ಅನಿವಾರ್ಯ. ಜೊತೆಗೇ ಚುರುಕುತನ. ಯಾವ ಸಂದರ್ಭದಲ್ಲೂ ಸೋಲೊಪ್ಪಿಕೊಳ್ಳದ ‘ಉದ್ಧಟತನ’ ಎಂದು ಕರೆಯಬಹುದಾದಷ್ಟು ಛಲ ಇವೂ ಅನಿವಾರ್ಯ. ಯುವಸಮುದಾಯವೊಂದು ಬ್ರಿಟಿಷ್ ಪ್ರಧಾನಿ ವಿನ್​ಸ್ಟನ್ ರ್ಚಚಿಲ್ಲರನ್ನು ಒಂದೇ ವಾಕ್ಯದಲ್ಲಿ ತಮಗೆ ಸಂದೇಶ ಕೊಡುವಂತೆ ಕೇಳಿದಾಗ ಅವರು ಹೇಳಿದ್ದು ‘ಘಛಿಡಛ್ಟಿ ಘಛಿಡಛ್ಟಿ ಘಛಿಡಛ್ಟಿ ಜಜಿಡಛಿ ್ಠ’ ಎಂದು. ಯುವಜನತೆ ಬದುಕಬೇಕಾದ್ದೇ ಹೀಗೆ.

  ನಾನು ಆಗಾಗ್ಗೆ ಹೇಳುವುದುಂಟು. ್ಗuಜ ಅಂದರೆ ಎಂಗೆಂಗೋ ಬದುಕುವುದಲ್ಲ ಎಂದು. ಭಗೀರಥನಿಗೆ ಗಂಗೆ ಸಿಕ್ಕಿದ್ದು, ನಚಿಕೇತನಿಗೆ ಆತ್ಮಜ್ಞಾನ ಸಿದ್ಧಿಸಿದ್ದು, ಸಿದ್ಧಾರ್ಥನಿಗೆ ಜ್ಞಾನೋದಯವಾಗಿದ್ದು ವಿಷಮಪರಿಸ್ಥಿತಿಗಳನ್ನು ತಮ್ಮ ಅಂಕೆಯಲ್ಲಿಟ್ಟುಕೊಳ್ಳುವ ಸಾಮರ್ಥ್ಯದಿಂದಲೇ! ಎಲ್ಲವೂ ಅನುಕೂಲವಾಗಿರುವ ಯಾವ ಸನ್ನಿವೇಶವೂ ವೀರನನ್ನು ಸೃಷ್ಟಿಸಿಲ್ಲ. ವಿಷಮ ಪರಿಸ್ಥಿತಿಗಳೇ ಧೀರರನ್ನು ಹುಟ್ಟು ಹಾಕುವುದು. ಧೀರ ಬಯಸುವುದೇ ಸವಾಲುಗಳನ್ನು. ಮಹಾನ್ ನಾಯಕನೊಬ್ಬನನ್ನು ಅಸಾಧ್ಯವೆನಿಸಿದ್ದ ಸಂದರ್ಭದಲ್ಲೂ ಅವರು ಗೆದ್ದ ಪ್ರಸಂಗವನ್ನು ಪ್ರಸ್ತಾಪಿಸುತ್ತ ಪತ್ರಕರ್ತರೊಬ್ಬರು ಪ್ರಶ್ನಿಸಿದರಂತೆ, ‘ಯಾವಾಗಲೂ ಸರಿಯಾದ ನಿರ್ಧಾರಗಳನ್ನೇ ತೆಗೆದುಕೊಳ್ಳುತ್ತೀರಲ್ಲ! ಅದು ಹೇಗೆ?’ ಎಂದು. ಆಗ ಅವರು ಕೊಟ್ಟ ಉತ್ತರ ಭಾರತೀಯ ಕ್ರೀಡಾಪಟುಗಳ ಕಣ್ಣು ತೆರೆಸುವಂತಿದೆ. ‘ಐ ಛಟ್ಞ’ಠಿ ಠಿಚkಛಿ ್ಟಜಜಠಿ ಛಛ್ಚಿಜಿಠಜಿಟ್ಞಠ, ಐ ಠಿಚkಛಿ ಚ ಛಛ್ಚಿಜಿಠಜಿಟ್ಞ ಞಚkಛಿ ಜಿಠಿ ್ಟಜಜಠಿ’. ಅರ್ಥಾತ್, ‘ನಾನು ಸರಿಯಾದ ನಿರ್ಧಾರಗಳನ್ನೇನೂ ತೆಗೆದುಕೊಳ್ಳುವುದಿಲ್ಲ. ಒಂದು ನಿರ್ಧಾರವನ್ನು ತೆಗೆದುಕೊಳ್ಳುತ್ತೇನೆ ಮತ್ತು ಅದನ್ನು ಸರಿಯಾಗಿಸಿಕೊಳ್ಳುತ್ತೇನೆ’ ಎಂದು. ಇದರರ್ಥ, ‘ನನ್ನ ನಿರ್ಧಾರವನ್ನು ಸರಿಯಾಗಿಸುವಂಥ ಪರಿಸ್ಥಿತಿಗಳನ್ನು ನಾನೇ ನಿರ್ವಿುಸಿಕೊಳ್ಳುತ್ತೇನೆ’ ಎಂದು. ಇದೇ ಪ್ರಾರಂಭದಲ್ಲಿ ಪ್ರಸ್ತಾಪಿಸಿದ ‘ವೀರಾ ಭೋಗ್ಯಾ ವಸುಂಧರಾ’ ಎಂಬಲ್ಲಿನ ವೀರಾ ಶಬ್ದದ ಅರ್ಥ.

  ಯಾವುದೇ ವ್ಯಕ್ತಿಯನ್ನು ವಿಶೇಷವಾಗಿ ಸ್ಪರ್ಧಾಲೋಕಕ್ಕೆ ತರಬೇತುಗೊಳಿಸುವ ಸಂದರ್ಭದಲ್ಲಿ ನಮ್ಮ ಗಮನವಿರಬೇಕಾದ್ದು ನಾವು ಹೇಳಿಕೊಡಬೇಕಾದ್ದು ಗೆಲ್ಲಲೇಬೇಕೆಂಬ ಪ್ರಚಂಡ ಇಚ್ಛೆಯನ್ನು ಗಳಿಸುವುದು ಹೇಗೆ ಎಂಬುದನ್ನು. ಇಚ್ಛಾಶಕ್ತಿಯ ಮುಂದೆ ಪರ್ವತಗಳು ಪುಡಿಪುಡಿಯಾಗುತ್ತವೆ, ಸಮುದ್ರಗಳು ಒಣಗುತ್ತವೆ, ಇಡೀ ಪ್ರಕೃತಿಯೇ ಬಾಗಿ ನಮಿಸುತ್ತದೆ. ಭಾರತೀಯ ಜೀವನ ಸಂಹಿತೆಯಲ್ಲಿ, ಸನಾತನ ಧರ್ಮದಲ್ಲಿ ಪ್ರಕೃತಿಯನ್ನು ಗೆಲ್ಲುವುದೇ, ಇಡೀ ಪ್ರಕೃತಿಯನ್ನು ನಿಯಂತ್ರಿಸುವುದೇ ಮಾನವ ಜನ್ಮದ ಗುರಿ. ಆ ಸಾಮರ್ಥ್ಯಕ್ಕೆ ಬೇಕಾದ ತರಬೇತಿಯೇ ಧರ್ಮ.

  (ಲೇಖಕರು ಖ್ಯಾತ ಪ್ರವಚನಕಾರರು, ಗದಗ ಮತ್ತು ವಿಜಯಪುರ ರಾಮಕೃಷ್ಣ-ವಿವೇಕಾನಂದ ಆಶ್ರಮದ ಅಧ್ಯಕ್ಷರು)

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts