ತೀರ್ಥಹಳ್ಳಿ: ಸರ್ಕಾರಿ ಜೆಸಿ ಆಸ್ಪತ್ರೆ ಸೇರಿ ತಾಲೂಕಿನಲ್ಲಿ ಕಾರ್ಯನಿರ್ವಹಿಸುತ್ತಿರುವ ಎಲ್ಲ ವೈದ್ಯರೂ ಕಳಕಳಿಯಿಂದ ಕಾರ್ಯನಿರ್ವಹಿಸುತ್ತಿದ್ದಾರೆ. ಆದರೆ ಸರ್ಕಾರಿ ಆಸ್ಪತ್ರೆ ವೈದ್ಯರೊಬ್ಬರ ಮೇಲೆ ನಡೆದಿರುವ ಹಲ್ಲೆ ಖಂಡನೀಯ. ಈ ಬಗ್ಗೆ ವೈದ್ಯರು ಆತಂಕಪಡುವ ಅಗತ್ಯವಿಲ್ಲ. ನಾವು ನಿಮ್ಮೊಂದಿಗಿದ್ದೇವೆ ಎಂದು ಶಾಸಕ ಆರಗ ಜ್ಞಾನೇಂದ್ರ ಆತ್ಮಸ್ಥೈರ್ಯ ತುಂಬಿದರು.
ಜೆಸಿ ಆಸ್ಪತ್ರೆಯಲ್ಲಿ ಹಿರಿಯ ವೈದ್ಯರ ಮೇಲೆ ವ್ಯಕ್ತಿಯೊಬ್ಬ ನಡೆಸಿರುವ ಹಲ್ಲೆಯನ್ನು ಖಂಡಿಸಿ ಇಂಡಿಯನ್ ಮೆಡಿಕಲ್ ಅಸೋಸಿಯೇಶನ್ ಹಾಗೂ ತಾಲೂಕು ಡಾಕ್ಟರ್ಸ್ ಅಸೋಸಿಯೇಶನ್ ಪದಾಧಿಕಾರಿಗಳು ನೀಡಿದ ಮನವಿ ಸ್ವೀಕರಿಸಿ ಮಾತನಾಡಿದ ಅವರು, ನೂರು ಹಾಸಿಗೆಯ ಜೆಸಿ ಆಸ್ಪತ್ರೆಗೆ ರೋಗಿಗಳ ಒತ್ತಡ ಹೆಚ್ಚಿದ್ದು ತಾಲೂಕು ಮಾತ್ರವಲ್ಲದೆ ನೆರೆಯ ತಾಲೂಕುಗಳಿಂದಲೂ ರೋಗಿಗಳು ಬರುತ್ತಿದ್ದಾರೆ. ಆಸ್ಪತ್ರೆಯಲ್ಲಿ ಸರಿಯಾದ ಭದ್ರತೆ ಇಲ್ಲದ ಕಾರಣ ಇಂತಹ ಘಟನೆ ನಡೆದಿದೆ ಎಂದರು.
ರಾತ್ರಿ ಪಾಳಿಯಲ್ಲಿ ಕಾರ್ಯನಿರ್ವಹಿಸುವಂತೆ ಓರ್ವ ಹೋಂಗಾರ್ಡ್ ನೇಮಿಸುವಂತೆ ಸಂಬಂಧಿಸಿದ ಹಿರಿಯ ಅಧಿಕಾರಿಗಳಿಗೆ ಮನವಿ ಮಾಡಲಾಗುವುದು. ಹಲ್ಲೆಗೊಳಗಾದ ವೈದ್ಯರು ಅತ್ಯಂತ ಶಾಂತ ಸ್ವಭಾವದವರು. ಕರೊನಾ ತೀವ್ರತೆ ಸಂದರ್ಭ ಉತ್ತಮವಾಗಿ ಕಾರ್ಯನಿರ್ವಹಿಸಿದ್ದಾರೆ ಎಂದು ಹೇಳಿದರು.
ಜೆಸಿ ಆಸ್ಪತ್ರೆ ವೈದ್ಯಾಧಿಕಾರಿ ಡಾ. ಗಣೇಶ್ ಭಟ್ ಮಾತನಾಡಿ, ಆಸ್ಪತ್ರೆಯಲ್ಲಿ ನಡೆದ ಘಟನೆಯಿಂದ ನಮ್ಮ ಸಿಬ್ಬಂದಿ ಭಯಗೊಂಡಿದ್ದಾರೆ. ರಾತ್ರಿ ಪಾಳಿ ಕೆಲಸ ಮಾಡುವವರಿಗೆ ಅದರಲ್ಲೂ ಮಹಿಳಾ ಸಿಬ್ಬಂದಿಗೆ ರಕ್ಷಣೆ ಅಗತ್ಯವಿದೆ. ಈ ಬಗ್ಗೆ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದರು.
ಪೊಲೀಸ್ ಇನ್ಸ್‌ಪೆಕ್ಟರ್ ಅಶ್ವತ್ಥ ಗೌಡ ಮಾತನಾಡಿ, ಘಟನೆಗೆ ಕಾರಣನಾದ ವ್ಯಕ್ತಿ ಮಾನಸಿಕ ದೌರ್ಬಲ್ಯ ಹೊಂದಿದವನಾಗಿದ್ದು ಸೂಕ್ತ ಕ್ರಮ ಕೈಗೊಳ್ಳಲಾಗಿದೆ. ಮುಂದೆ ಇಂತಹ ಘಟನೆ ನಡೆಯದಂತೆ ಸೂಕ್ತ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದರು.
ಹಿರಿಯ ಶುಶ್ರೂಷಕಿ ತನುಜಾ ನಾಯ್ಕ ಮಾತನಾಡಿ, ರಾತ್ರಿ ಪಾಳಿಯಲ್ಲಿ ನಾವು ಭಯದಲ್ಲೇ ಕೆಲಸ ಮಾಡಬೇಕಾದ ಅನಿವಾರ್ಯತೆ ಇದೆ. ತುರ್ತು ಚಿಕಿತ್ಸೆ ನೀಡುವ ಸಂದರ್ಭ ರೋಗಿಗಳ ಕಡೆಯವರಿಗೆ ನಮ್ಮ ಮಾತನ್ನು ಕೇಳುವ ವ್ಯವಧಾನವೇ ಇರುವುದಿಲ್ಲ. ಮನಬಂದಂತೆ ಮಾತನಾಡುತ್ತಾರೆ ಎಂದು ಕಳವಳ ವ್ಯಕ್ತಪಡಿಸಿದರು.
ಡಾ. ಟಿ.ನಾರಾಯಣಸ್ವಾಮಿ, ಡಾ. ಎಸ್.ಮನೋಹರ ರಾವ್, ಡಾ. ಬಿ.ಜಿ.ನಂದಕಿಶೋರ್, ಡಾ. ಗಣೇಶ್ ಕಾಮತ್, ಡಾ. ಪದ್ಮಜಾ ಜಯರಾಂ, ಡಾ. ಗಣೇಶ್ ನಾಯಕ್, ಡಾ. ಸದಾಶಿವ ನಿಲುವಾಸೆ, ಡಾ. ಅನಂತಮೂರ್ತಿ ಐತಾಳ್ ಇತರರಿದ್ದರು.