More

  ಮೇಟಗಳ್ಳಿಯಲ್ಲಿ ಅನಿಲ ದುರ್ವಾಸನೆಯಿಂದ ಉಸಿರುಗಟ್ಟುವ ವಾತಾವರಣ

  ಆರ್. ಕೃಷ್ಣ ಮೈಸೂರು
  ನಗರದಲ್ಲಿ ಮತ್ತೊಂದು ಅನಿಲ ದುರಂತ ಆಗುವ ಮುನ್ನವೇ ಜಿಲ್ಲಾಡಳಿತ ಎಚ್ಚೆತ್ತುಕೊಳ್ಳಬೇಕಿದೆ.
  ಕೆಸರೆಯ ಗುಜರಿಯಲ್ಲಿ ಅನಿಲ ಸೋರಿಕೆಯಿಂದ ಹಲವಾರು ಜನರು ಅಸ್ವಸ್ಥಗೊಂಡು ಆಸ್ಪತ್ರೆ ಸೇರಿರುವ ಪ್ರಕರಣ ಮಾಸುವ ಮುನ್ನವೇ ಮೇಟಗಳ್ಳಿ ಕೈಗಾರಿಕಾ ಪ್ರದೇಶದಲ್ಲಿ ಅನಿಲ ದುರ್ವಾಸನೆ ನಿವಾಸಿಗಳ ಮೂಗಿಗೆ ಬಡಿಯುತ್ತಿದೆ.
  ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿ ಕಚೇರಿ ಇರುವ ಮೇಟಗಳ್ಳಿ ಕೈಗಾರಿಕಾ ಪ್ರದೇಶದ ಕೆಆರ್‌ಎಸ್ ರಸ್ತೆಯ ಸುತ್ತಮುತ್ತ ಪ್ರದೇಶದಲ್ಲಿ ಈ ಸಮಸ್ಯೆ ಕಂಡುಬಂದಿದ್ದು, ನಿವಾಸಿಗಳನ್ನು ಆತಂಕಗೊಂಡಿದ್ದಾರೆ.
  ಬೆಳಗಿನ ಜಾವ ಅಥವಾ ತಡರಾತ್ರಿ ಸಹಿಸಲು ಅಸಾಧ್ಯವಾದ ಎಲ್‌ಪಿಜಿ ಅನಿಲದಂತಹ ವಾಸನೆ ಬರುತ್ತಿದ್ದು, ನಿವಾಸಿಗಳಲ್ಲಿ ಉಸಿರುಗಟ್ಟಿಸುವಂತಹ ವಾತಾವರಣ ನಿರ್ಮಾಣವಾಗುತ್ತಿದೆ.
  ಬ್ರಿಗೇಡ್ ಸಿಂಪೋನಿ ಅಪಾರ್ಟ್‌ಮೆಂಟ್ ಹಿಂದೆ ಹರಿದು ಹೋಗುತ್ತಿರುವ ಚರಂಡಿಯಿಂದ ಇಂತಹ ದುರ್ವಾಸನೆ ಬರುತ್ತಿದ್ದು, ಕೈಗಾರಿಕೆಗಳಿಂದ ನೇರವಾಗಿ ಬಿಡುವ ಕೆಮಿಕಲ್ಸ್ ಇದಕ್ಕೆ ಕಾರಣ ಎನ್ನಲಾಗುತ್ತಿದೆ.
  ಅಪಾರ್ಟ್‌ಮೆಂಟ್‌ನಲ್ಲಿ ವೈದ್ಯರೂ ವಾಸಿಸುತ್ತಿದ್ದು, ನಿಗೂಢ ವಾಸನೆ ಅಪಾಯಕಾರಿ ಎನ್ನುವ ಮಾಹಿತಿ ನೀಡಿದ್ದಾರೆ. ಅಲ್ಲದೆ ವಾಯುಮಾಲಿನ್ಯ ಪ್ರಖರತೆ ಗಮನಿಸಿದರೆ ಇದರಲ್ಲಿ ವಿಷಕಾರಿ ಅಂಶಗಳು ಇರುವ ಸಾಧ್ಯತೆ ಇದೆ ಎಂದು ಅನುಮಾನ ವ್ಯಕ್ತಪಡಿಸುತ್ತಾರೆ.
  ಸಮೀಪವೇ ರಾಸಾಯನಿಕ, ಔಷಧ ಸೇರಿದಂತೆ ಹಲವು ರೀತಿಯ ಕಾರ್ಖಾನೆಗಳು ಕಾರ್ಯನಿರ್ವಹಿಸುತ್ತಿದ್ದು, ತನ್ನಲ್ಲಿನ ತ್ಯಾಜ್ಯವನ್ನು ನಿಯಮ ಮೀರಿ ತಡರಾತ್ರಿ ಅಥವಾ ಬೆಳಗಿನ ಜಾವ ನೇರವಾಗಿ ಚರಂಡಿಗೆ ಬಿಡುಗಡೆ ಮಾಡುವುದರಿಂದ ಈ ಸಮಸ್ಯೆ ಉಂಟಾಗುತ್ತಿದೆ ಎನ್ನಲಾಗುತ್ತಿದೆ.
  ಕೆಲ ವರ್ಷಗಳ ಹಿಂದೆ ಕಾರ್ಖಾನೆ ತ್ಯಾಜ್ಯ ರಸ್ತೆಯಲ್ಲೇ ಹರಿದು, ರಸ್ತೆ ಮಧ್ಯದಲ್ಲೇ ಬೆಂಕಿಹೊತ್ತಿಕೊಂಡಿತ್ತು. ಮಾಲಿನ್ಯ ನಿಯಂತ್ರಣ ಮಂಡಳಿ ಅಧಿಕಾರಿಗಳು ನೋಟಿಸ್ ನೀಡಿದಾಗ ಕೆಲ ದಿನ ಸಮಸ್ಯೆ ನಿವಾರಣೆಯಾಗುತ್ತದೆ. ನಂತರ ಯಥಾಪ್ರಕಾರವಾಗುತ್ತದೆ. ಆದ್ದರಿಂದ ಈ ಬಗ್ಗೆ ಸಂಬಂಧಪಟ್ಟವರು ಕಠಿಣ ಕ್ರಮ ಕೈಗೊಂಡು ಸಮಸ್ಯೆಗೆ ಶಾಶ್ವತ ಪರಿಹಾರ ನೀಡಬೇಕು ಎಂದು ನಿವಾಸಿಗಳು ಒತ್ತಾಯಿಸಿದ್ದಾರೆ.
  ಈ ಪ್ರದೇಶದಲ್ಲಿ ಅಪಾರ್ಟ್‌ಮೆಂಟ್ ಅಲ್ಲದೆ, ಸರ್ಕಾರಿ ಕಚೇರಿ, ಆಸ್ಪತ್ರೆ, ಹೋಟೆಲ್, ತಾಂತ್ರಿಕ, ಸ್ನಾತಕೋತ್ತರ, ಪದವಿ ಕಾಲೇಜುಗಳು ಇವೆ. ಸಾವಿರಾರು ನೌಕರರು, ವಿದ್ಯಾರ್ಥಿ, ಸಿಬ್ಬಂದಿ ಇರುವಂತಹ ಜನನಿಬಿಡ ಪ್ರದೇಶದಲ್ಲಿ ಇಂತಹ ವಾಸನೆ ಆಗಾಗ ಬರುತ್ತಿದ್ದು, ಅಪಾಯಕ್ಕೆ ಆಹ್ವಾನ ನೀಡುವಂತಿದೆ ಎನ್ನುವ ಆತಂಕ ವ್ಯಕ್ತಪಡಿಸಿದ್ದಾರೆ.
  ಅಪಾರ್ಟ್‌ಮೆಂಟ್, ಕಾಲೇಜುಗಳೆಲ್ಲವೂ ಮೇಟಗಳ್ಳಿ ಕೈಗಾರಿಕಾ ಪ್ರದೇಶದಲ್ಲಿದ್ದು, ಯಾವುದೋ ಕಾರ್ಖಾನೆ ರಾಸಾಯನಿಕ ತ್ಯಾಜ್ಯವನ್ನು ರಾತ್ರಿ ವೇಳೆಯಲ್ಲಿ ಬಿಡುಗಡೆ ಮಾಡುವ ಗುಮಾನಿ ಇದೆ.
  ಅಪಾರ್ಟ್‌ಮೆಂಟ್‌ನಲ್ಲಿ ಎ, ಬಿ ಮತ್ತು ಸಿ ಮೂರು ವಿಭಾಗದಿಂದ 300 ಮನೆಗಳಿವೆ. ಹೆಚ್ಚಿನ ಸಂಖ್ಯೆಯಲ್ಲಿ ಮಕ್ಕಳು, ವೃದ್ಧರು ಸೇರಿದಂತೆ ಸುಮಾರು ಸಾವಿರಕ್ಕೂ ಹೆಚ್ಚು ಜನ ಈ ಅಪಾರ್ಟ್‌ಮೆಂಟ್‌ನಲ್ಲಿ ವಾಸಿಸುತ್ತಿದ್ದಾರೆ. ತಡರಾತ್ರಿ, ಬೆಳಗಿನ ಜಾವ ದಿಢೀರ್ ಬರುವ ಈ ನಿಗೂಢ ವಾಸನೆ ವೃದ್ಧರಿಗೆ ಉಸಿರುಗಟ್ಟಿಸಿದರೆ, ಮಕ್ಕಳಿಗೆ ಕಿರಿಕಿರಿ ಅನುಭವಿಸುತ್ತಿದ್ದಾರೆ.
  ಮೇಟಗಳ್ಳಿ ಕೈಗಾರಿಕಾ ಪ್ರದೇಶವಾದರೂ ಕೈಗಾರಿಗಳು ತ್ಯಾಜ್ಯವನ್ನು ಮನಬಂದಂತೆ ವಿಸರ್ಜಿಸುವಂತಿಲ್ಲ. ಕೈಗಾರಿಕೆ, ರಾಸಾಯನಿಕ ತ್ಯಾಜ್ಯ ವಿಲೇವಾರಿಗೆ ನಿಯಮಗಳಿದ್ದು, ಅವುಗಳನ್ನು ಪಾಲಿಸಬೇಕು ಎನ್ನುವ ನಿಯಮವನ್ನು ಗಾಳಿಗೆ ತೂರಲಾಗುತ್ತಿದೆ ಎನ್ನುವ ದೂರು ನಿವಾಸಿಗಳದ್ದಾಗಿದೆ.
  ಐದಾರು ವರ್ಷಗಳಿಂದ ಈ ಸಮಸ್ಯೆ ಇದೆ. ಈ ಹಿಂದೆ ದೂರು ನೀಡಿದಾಗ ಒಂದು ವರ್ಷದಿಂದ ಈ ಸಮಸ್ಯೆ ಇರಲಿಲ್ಲ. ಆದರೆ ಇದೀಗ ಮತ್ತೆ ಆರಂಭವಾಗಿದೆ. ಅಪಾರ್ಟ್‌ಮೆಂಟ್‌ನಲ್ಲಿ ಸಾವಿರಕ್ಕೂ ಹೆಚ್ಚು ಜನ ವಾಸವಿದ್ದು, ಮಕ್ಕಳು, ಹಿರಿಯ ನಾಗರಿಕರೂ ಇದ್ದಾರೆ. ಅನಾಹುತವಾಗುವ ಮುನ್ನ ಸಂಬಂಧಪಟ್ಟವರು ಈ ಬಗ್ಗೆ ಗಮನಹರಿಸಬೇಕು ಎನ್ನುವ ಒತ್ತಾಯ ನಿವಾಸಿಗಳದ್ದಾಗಿದೆ.

  See also  ಯುದ್ಧ ಸ್ಮಾರಕದ ಅಭಿವೃದ್ಧಿ ಕಾಮಗಾರಿಗೆ ಚಾಲನೆ

  ಹಲವು ದಿನಗಳಿಂದ ದುರ್ವಾಸನೆ ಬರುತ್ತಿರುವ ಕುರಿತು ನಿವಾಸಿಗಳಿಂದ ದೂರು ಬರುತ್ತಿದೆ. ಆದರೆ ವಾಸನೆ ಯಾವುದರಿಂದ ಎಲ್ಲಿಂದ ಬರುತ್ತಿದೆ ಎನ್ನುವುದನ್ನು ಪತ್ತೆ ಮಾಡಲಾಗುತ್ತಿದೆ. ಯಾವುದೇ ರಾಸಾಯನಿಕವನ್ನು ಚರಂಡಿಗೆ ಬಿಡದಂತೆ ಪರಿಸರ ಮಾಲಿನ್ಯ ನಿಯಮ ಕಾಪಾಡುವಂತೆ ಕೈಗಾರಿಕೆಗಳಿಗೆ ಈಗಾಗಲೇ ನೋಟಿಸ್ ನೀಡಿ ಎಚ್ಚರಿಸಲಾಗಿದೆ. ಶೀಘ್ರ ಈ ಸಮಸ್ಯೆ ನಿವಾರಿಸಲಾಗುವುದು.
  ಹರಿಶಂಕರ್ ಪರಿಸರ ಅಧಿಕಾರಿ, ಕರ್ನಾಟಕ ರಾಜ್ಯ, ಮಾಲಿನ್ಯ ನಿಯಂತ್ರಣ ಮಂಡಳಿ, ಮೈಸೂರು.

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts