ಶಿರಸಿ: ಅಡಕೆ ಬೆಳೆ ಕ್ಷೇತ್ರ ವಿಸ್ತರಣೆ ಈಗ ನಿರೀಕ್ಷೆಗೂ ಮೀರಿದೆ. ರೈತರು ಕೇವಲ ಅಡಕೆಯೊಂದನ್ನೇ ಅವಲಂಬಿಸುವುದನ್ನು ಬಿಟ್ಟು ಉಪ ಬೆಳೆಯ ಬಗ್ಗೆಯೂ ಒತ್ತು ನೀಡಬೇಕಿದೆ ಎಂದು ಶಾಸಕ ಭೀಮಣ್ಣ ನಾಯ್ಕ ಹೇಳಿದರು.

ತಾಲೂಕಿನ ದೊಡ್ನಳ್ಳಿಯಲ್ಲಿ ಕೃಷಿ ಯಂತ್ರಧಾರೆ ಯೋಜನೆಯಡಿ ಕೃಷಿ ಉಪಕರಣಗಳ ನಿರ್ವಹಣೆಯನ್ನು ಇಲ್ಲಿಯ ಶಂಭುಲಿಂಗೇಶ್ವರ ರೈತ ಉತ್ಪಾದಕರ ಸಂಸ್ಥೆಗೆ ಮಂಗಳವಾರ ಹಸ್ತಾಂತರಿಸಿ ಅವರು ಮಾತನಾಡಿದರು. ಅಡಕೆ ಬೆಳೆಯುವ ಕ್ಷೇತ್ರ ಕೇವಲ ಕರ್ನಾಟಕಕ್ಕೆ, ಮಲೆನಾಡಿಗೆ ಸೀಮಿತವಾಗಿ ಉಳಿದಿಲ್ಲ. ಆಂಧ್ರಪ್ರದೇಶ, ತಮಿಳುನಾಡು ಇನ್ನಿತರ ರಾಜ್ಯಗಳಲ್ಲಿಯೂ ಅವ್ಯಾಹತವಾಗಿ ಬೆಳೆಯುತ್ತಿದ್ದಾರೆ. ಇದರ ಪರಿಣಾಮ ಅಡಕೆ ಬೆಳೆಗಾರರ ಮೇಲಾಗಲಿದೆ. ರೈತರು ಈಗಲೇ ಎಚ್ಚೆತ್ತುಕೊಳ್ಳಬೇಕಾದ ಅಗತ್ಯತೆ ಇದೆ ಎಂದರು.
ರೈತರ ಉತ್ಪನ್ನ ಜಾಸ್ತಿಗೊಳಿಸಲು ಸಹಕಾರಿ ಸಂಘಗಳು ಬೆನ್ನೆಲುಬಾಗಿ ನಿಲ್ಲಬೇಕು. ರೈತರ ಆದಾಯ ಜಾಸ್ತಿಯಾದರೆ ಅದೇ ಸಹಕಾರಿ ಸಂಘಗಳ ಯಶಸ್ಸು. ರೈತರ ಮಕ್ಕಳು ಎಂದಿಗೂ ಕೃಷಿಯಿಂದ ವಂಚಿತರಾಗಬಾರದು. ಶಿಕ್ಷಣದ ಜತೆ ಕೃಷಿಯನ್ನೂ ಮಾಡಲು ಉತ್ತೇಜಿಸಬೇಕು ಎಂದರು.
ರೈತರ ಪ್ರಗತಿಗೆ ಆದ್ಯತೆ ನೀಡಲಾಗಿದ್ದು, ಹಸು ಖರೀದಿಗೆ 29,300 ರೂ. ಸಬ್ಸಿಡಿ ನೀಡುತ್ತಿದೆ. ಈ ಮೂಲಕ ಹೈನೋದ್ಯಮಕ್ಕೆ ಸರ್ಕಾರ ಒತ್ತು ನೀಡುತ್ತಿದೆ ಎಂದರು.
ಕೃಷಿ ಇಲಾಖೆ ಉಪನಿರ್ದೇಶಕ ಎಚ್.ಕೆ. ನಟರಾಜ ಮಾತನಾಡಿ, ಕೃಷಿ ಯಂತ್ರಧಾರೆ ಯೋಜನೆ ಮೂಲಕ ಟ್ರಾಕ್ಟರ್, ಟಿಲ್ಲರ್ ಸೇರಿದಂತೆ ಯಂತ್ರೋಪಕರಣಗಳನ್ನು ಕಡಿಮೆ ಬಾಡಿಗೆ ದರದಲ್ಲಿ ರೈತರಿಗೆ ನೀಡಲಾಗುತ್ತಿದೆ. 2015ರಿಂದಲೂ ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಘ ಈ ಕಾರ್ಯ ನಡೆಸಿಕೊಂಡು ಬರುತ್ತಿತ್ತು ಎಂದರು.
ಶಂಭುಲಿಂಗೇಶ್ವರ ರೈತ ಉತ್ಪಾದಕರ ಸಂಸ್ಥೆ ಅಧ್ಯಕ್ಷ ಶ್ರೀಪಾದ ಹೆಗಡೆ, ನಗರ ಯೋಜನಾ ಪ್ರಾಧಿಕಾರದ ಅಧ್ಯಕ್ಷ ಜಗದೀಶ ಗೌಡ, ಎಸ್.ಎನ್. ಹೆಗಡೆ, ರಾಜೇಶ ಮಡಿವಾಳ, ಶ್ರುತಿ, ಮಧುಕರ ನಾಯ್ಕ ಇತರರಿದ್ದರು.