ಕಿಕ್ಕೇರಿ: ಹೋಬಳಿಯ ಗಂಗೇನಹಳ್ಳಿ ಗ್ರಾಮದೇವತೆ ಪಿರಿಯಾಪಟ್ಟಣದಮ್ಮನವರ ವಾರ್ಷಿಕ ಪೂಜಾ ಮಹೋತ್ಸವ ವಿಜೃಂಭಣೆಯಿಂದ ನೆರವೇರಿತು.

ಮಹಿಳೆಯರು ಮೂಲದೇವರ ಗುಡಿಯಲ್ಲಿರುವ ದೇವಿಗೆ ನಿಂಬೆಹಣ್ಣಿನ ಆರತಿ ಎತ್ತಿ ದೀಪಾ ಪೂಜೆಯನ್ನು ಸಾಮೂಹಿಕವಾಗಿ ನೆರವೇರಿಸದ ನಂತರ ಹಬ್ಬಕ್ಕೆ ಚಾಲನೆ ದೊರೆಯಿತು. ಅರ್ಚಕರು ದೇವಿಯ ಗರ್ಭಗುಡಿ ಮುಂದೆ ಬಾಳೆಕಂದು ನೆಟ್ಟು ಛೇದಿಸಿ ದೃಷ್ಟಿ ತೆಗೆದು ಹಬ್ಬ ನಿರ್ವಿಘ್ನವಾಗಿ ನಡೆಯಲೆಂದು ದೇವಿಯಲ್ಲಿ ಪ್ರಾರ್ಥಿಸಿದರು.
ಮಂಗಳವಾದ್ಯ, ತಮಟೆ ನಾದ, ಬಾಣಬಿರುಸುಗಳು ಮೇಳೈಸಿದವು. ಇಡೀ ಗ್ರಾಮ ತಳಿರು-ತೋರಣ, ವಿದ್ಯುತ್ ದೀಪಾಲಂಕಾರ, ಶಾಮಿಯಾನ, ರಂಗೋಲಿಯ ಚಿತ್ತಾರಗಳಿಂದ ಝಗಮಿಸುತ್ತಿತ್ತು. ಎಲ್ಲರೂ ಒಟ್ಟಾಗಿ ಸೇರಿ ದೇವಿಗೆ ಕುರಿ ಬಲಿ ನೀಡಿ ನೈವೇದ್ಯ ಅರ್ಪಿಸಿದರು.
ಪೂಜಾ ಮಹೋತ್ಸವ ಅಂಗವಾಗಿ ಹೋಮ, ದೇವಿಗೆ ಪಂಚಾಮೃತ ಅಭಿಷೇಕ, ಧೂಪದೀಪಧಾರತಿ, ದೇವಿಯ ಸ್ತೋತ್ರಪಠಣೆ, ಜಾಗರಣೆ ನೆರವೇರಿತು. ಅಮಾನಿಕೆರೆಯಲ್ಲಿ ಪವಿತ್ರ ಗಂಗೆ ತಂದು ಪೂರ್ಣಕುಂಭದೊಂದಿಗೆ ಅರ್ಚಕರು ದೇವಿ ಅವಾಹನೆ ಮಾಡಿಕೊಂಡು ಸಾಗಿದರು. ಮಹಿಳೆಯರು ದೇವಿ ಜತೆಗೂಡಿ ಪೂರ್ಣಕುಂಭ ಮೆರವಣಿಗೆಯಲ್ಲಿ ಭಾಗಿಯಾದರು.
ಗಂಗಾಸ್ನಾನ, ಗಂಗಾಪೂಜೆ, ಪೂರ್ಣಕುಂಭ ಮೆರವಣಿಗೆ, ಮಡಿ ಪೂಜೆ, ಬಂಡಿ ಪೂಜೆ, ಅನ್ನ ಸಂತರ್ಪಣೆ ನಡೆಯಿತು. ಹಬ್ಬದ ಸಲುವಾಗಿ ಕೋಳಿ, ಕುರಿಗಳ ಬಲಿಯನ್ನು ದೇವಿಗೆ ಅರ್ಪಿಸಿ, ಅತಿಥಿಗಳಿಗೆ ಸತ್ಕಾರ ನೀಡಿದರು.