ಜಿಂದಾಲ್ ಕಂಪನಿಗೆ ಭೂಮಿ ನೀಡುವ ಕ್ರಮ ಖಂಡನೀಯ

ಚಾಮರಾಜನಗರ: ರಾಜ್ಯ ಮೈತ್ರಿ ಸರ್ಕಾರವು ಜಿಂದಾಲ್ ಕಂಪನಿಗೆ 3,500 ಎಕರೆ ಭೂಮಿಯನ್ನು ನೀಡುತ್ತಿರುವ ಕ್ರಮವನ್ನು ಖಂಡಿಸಿ ಜಿಲ್ಲಾ ಕನ್ನಡಪರ ಸಂಘಟನೆಗಳ ಕಾರ್ಯಕರ್ತರು ನಗರದಲ್ಲಿ ಸೋಮವಾರ ಪ್ರತಿಭಟನೆ ನಡೆಸಿದರು.

ನಗರದ ಶ್ರೀಚಾಮರಾಜೇಶ್ವರ ದೇವಸ್ಥಾನದ ಮುಂಭಾಗದಲ್ಲಿ ಜಮಾಯಿಸಿದ ಪ್ರತಿಭಟನಾಕಾರರು ಅಲ್ಲಿಂದ ಮೆರವಣಿಗೆ ಮೂಲಕ ಭುವನೇಶ್ವರಿ ವೃತ್ತಕ್ಕೆ ತೆರಳಿ ರಸ್ತೆ ತಡೆದು ಕೆಲಕಾಲ ಪ್ರತಿಭಟನೆ ನಡೆಸಿದರು. ಮೈತ್ರಿ ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗಿ ಆಕ್ರೋಶ ವ್ಯಕ್ತಪಡಿಸಿದರು.

ಕರ್ನಾಟಕ ಸೇನಾ ಪಡೆಯ ಅಧ್ಯಕ್ಷ ಚಾ.ರಂ.ಶ್ರೀನಿವಾಸಗೌಡ ಮಾತನಾಡಿ, ರಾಜ್ಯ ಸರ್ಕಾರವು ಜಿಂದಾಲ್ ಕಂಪನಿಗೆ 3,500 ಎಕರೆ ಭೂಮಿಯನ್ನು ಒಂದು ಎಕರೆಗೆ 1.20 ಲಕ್ಷ ರೂ.ಗಳಂತೆ ನೀಡಲು ಹೊರಟಿರುವುದು ಖಂಡನೀಯ. ರೈತರಿಗೆ ಸಾಗುವಳಿಗೆ ಭೂಮಿಯನ್ನು ಕೊಡದೆ ಹಣವನ್ನು ಕೊಳ್ಳೆ ಹೊಡೆಯಲು ಹುನ್ನಾರ ನಡೆಸಿದೆ ಎಂದು ಆರೋಪಿಸಿದರು.

ರಾಜ್ಯದ ಪ್ರತಿ ಜಿಲ್ಲೆಯಲ್ಲಿಯೂ ಕನ್ನಡ ಭವನ ನಿರ್ಮಾಣ ಮಾಡಲು 10 ಎಕರೆ ಜಾಗವನ್ನು ಕೊಡಬೇಕು. ಇದಕ್ಕಾಗಿ ನಾವು ಒಂದು ಎಕರೆಗೆ 1.50 ಲಕ್ಷ ರೂ.ಗಳನ್ನು ಕೊಡುತ್ತೇವೆ. ಜಿಂದಾಲ್ ಕಂಪನಿಗೆ ಭೂಮಿ ಕೊಡಲು ಹೊರಟಿರುವ ನಿರ್ಧಾರವನ್ನು ಸರ್ಕಾರವು ಈ ಕೂಡಲೇ ವಾಪಸ್ ಪಡೆಯಬೇಕು ಎಂದು ಒತ್ತಾಯಿಸಿದರು.

ಜಿಲ್ಲಾ ಕನ್ನಡ ಸಂಘಟನೆಗಳ ಒಕ್ಕೂಟದ ಅಧ್ಯಕ್ಷ ಶಾ.ಮುರಳಿ ಮಾತನಾಡಿ, ರಾಜ್ಯ ಸರ್ಕಾರ ಉದ್ಯಮಿಗಳ ತಾಳಕ್ಕೆ ತಕ್ಕಂತೆ ಕುಣಿಯುವ ಮೂಲಕ ರಾಜ್ಯವನ್ನು ಕೊಳ್ಳೆ ಹೊಡೆಯುವ ಕೆಲಸ ಮಾಡುತ್ತಿದೆ. ಸರ್ಕಾರವು ಇದನ್ನೆಲ್ಲ ಬಿಟ್ಟು ಮೊದಲು ಬಡಜನರಿಗೆ ನೀಡಬೇಕಾಗಿರುವ ಸಾಗುವಳಿ ಪತ್ರವನ್ನು ನೀಡಬೇಕು ಎಂದು ಆಗ್ರಹಿಸಿದರು.

ನಂತರ ಪ್ರತಿಭಟನಾಕಾರರು ಜಿಲ್ಲಾಡಳಿತ ಭವನಕ್ಕೆ ತೆರಳಿ ಜಿಲ್ಲಾಧಿಕಾರಿ ಬಿ.ಬಿ.ಕಾವೇರಿ ಅವರ ಮೂಲಕ ಚಾಮರಾಜನಗರದಲ್ಲಿ ಕನ್ನಡ ಭವನ ನಿರ್ಮಾಣಕ್ಕೆ 10 ಎಕರೆ ಭೂಮಿಯನ್ನು ನೀಡಬೇಕು ಎಂದು 100 ರೂ.ಗಳ ಮುಂಗಡ ಡಿಡಿಯನ್ನು ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿಗೆ ಸಲ್ಲಿಸಿದರು.

ಪ್ರತಿಭಟನೆಯಲ್ಲಿ ಕರ್ನಾಟಕ ಕನ್ನಡ ರಕ್ಷಣಾ ವೇದಿಕೆ ಅಧ್ಯಕ್ಷ ಚಾ.ಗು.ನಾಗರಾಜು, ಕನ್ನಡ ಯುವ ಸೇನೆ ಅಧ್ಯಕ್ಷ ಚಾ.ಸಿ.ಸೋಮನಾಯಕ, ಪದಾಧಿಕಾರಿಗಳಾದ ತಾಂಡವಮೂರ್ತಿ, ವೀರಭದ್ರ, ಚಂದ್ರಪ್ಪ, ನಿಜಧ್ವನಿ ಗೋವಿಂದರಾಜು, ಅರುಣ್‌ಕುಮಾರ್‌ಗೌಡ, ಬಸವನಪುರ ರೇವಣ್ಣ, ಮೇಗಲಹುಂಡಿ ವರದರಾಜು, ಮಹೇಶ್, ಎಂಡಿಆರ್ ಸ್ವಾಮಿ, ಪಿ.ಮಹೇಶ್ ಇತರರಿದ್ದರು.

Leave a Reply

Your email address will not be published. Required fields are marked *