ಸಿಂಗ್ ಮೌನವಾಗಿದ್ದರು ಸಿನಿಮಾ ಮಾತನಾಡುತ್ತಿದೆ!

ಒಂದು ಕಮರ್ಷಿಯಲ್ ಸಿನಿಮಾಕ್ಕಾಗಿ ಕಾತರಿಸುವ ರೀತಿಯಲ್ಲಿಯೇ ‘ದಿ ಆಕ್ಸಿಡೆಂಟಲ್ ಪ್ರೖೆಮ್ ಮಿನಿಸ್ಟರ್’ ಚಿತ್ರವನ್ನು ಕಣ್ತುಂಬಿಕೊಳ್ಳಲು ಕಾದಿದ್ದಾರೆ ಸಿನಿಪ್ರಿಯರು. 2004ರಿಂದ 2014ರವರೆಗೆ ಭಾರತದ ಪ್ರಧಾನ ಮಂತ್ರಿಯಾಗಿದ್ದ ಮನಮೋಹನ್ ಸಿಂಗ್ ಅಧಿಕಾರಾವಧಿ ಕುರಿತಾಗಿಯೇ ಈ ಸಿನಿಮಾ ಮೂಡಿಬಂದಿದೆ. ಮನಮೋಹನ್ ಸಿಂಗ್ ಅವರಿಗೆ ಮಾಧ್ಯಮ ಸಲಹೆಗಾರರಾಗಿದ್ದ ಸಂಜಯ್ ಬಾರು ಬರೆದ ಕೃತಿಯನ್ನು ಆಧರಿಸಿ ಚಿತ್ರ ತಯಾರಾಗಿದೆ. ಹೊಸ ನಿರ್ದೇಶಕ ವಿಜಯ್ ರತ್ನಾಕರ್ ಗುಟ್ಟೆ ಆಕ್ಷನ್-ಕಟ್ ಹೇಳಿದ್ದಾರೆ. ಮನಮೋಹನ್ ಪಾತ್ರದಲ್ಲಿ ಅನುಪಮ್ ಖೇರ್ ಕಾಣಿಸಿಕೊಂಡಿದ್ದು, ಹಲವು ಕಾರಣಗಳಿಗಾಗಿ ಕುತೂಹಲ ಕೆರಳಿಸಿದೆ.

ನೈಜ ಘಟನೆ ಆಧಾರಿತ ಚಿತ್ರ ಎಂದಾಗ ರಿಯಲ್ ಲೈಫ್ ವ್ಯಕ್ತಿಗಳನ್ನು ಹೋಲುವ ಪಾತ್ರಧಾರಿಗಳನ್ನೇ ಆಯ್ಕೆ ಮಾಡಿಕೊಳ್ಳುವುದು ಸುಲಭದ ಕೆಲಸವಲ್ಲ. ಅದಕ್ಕಾಗಿ ನಿರ್ದೇಶಕರು ಸತತ 8 ತಿಂಗಳು ಕಷ್ಟಪಟ್ಟಿದ್ದಾರೆ. ಅದರಲ್ಲಿ ಬಹುತೇಕ ಅವರು ಯಶಸ್ವಿಯಾಗಿದ್ದಾರೆ ಎಂಬುದು ಟ್ರೇಲರ್​ನಲ್ಲಿಯೇ ಸಾಬೀತಾಗಿದೆ. ಸ್ವತಃ ಮನಮೋಹನ್ ಸಿಂಗ್ ನಟಿಸಿದ್ದಾರೇನೋ ಎಂಬಷ್ಟು ನಾಜೂಕಾಗಿ ಮೂಡಿಬಂದಿದೆ ಅನುಪಮ್ ಖೇರ್ ಗೆಟಪ್. ಸೋನಿಯಾ ಗಾಂಧಿ ಪಾತ್ರದಲ್ಲಿ ಜರ್ಮನಿ ಮೂಲದ ನಟಿ ಸುಸಾನೆ ಬರ್ನೆಟ್, ಅಟಲ್ ಬಿಹಾರಿ ವಾಜಪೇಯಿ ಪಾತ್ರಕ್ಕೆ ಬಿಹಾರದ ಓರ್ವ ಪಾನಿಪುರಿ ವ್ಯಾಪಾರಿ, ಪ್ರಿಯಾಂಕಾ ಗಾಂಧಿ ಪೋಷಾಕಿಗೆ ಅಹಾನಾ ಕುಮ್ರಾ, ರಾಹುಲ್ ಗಾಂಧಿ ಪಾತ್ರಕ್ಕೆ ಅರ್ಜುನ್ ಮಾಥೂರ್.. ಹೀಗೆ ಅಪರೂಪದ ಕಲಾವಿದರನ್ನು ಆಯ್ದುಕೊಳ್ಳುವಲ್ಲಿ ನಿರ್ದೇಶಕರು ತುಂಬ ಕಾಳಜಿ ವಹಿಸಿದ್ದಾರೆ. ಪರಿಣಾಮ, ಬಹುತೇಕ ಪಾತ್ರಗಳು ನೈಜವಾಗಿ ಕಾಣಿಸುತ್ತಿವೆ. ಮನಮೋಹನ್ ಸಿಂಗ್ ಮಾಧ್ಯಮ ಸಲಹೆಗಾರ ಸಂಜಯ್ ಬಾರು ಪಾತ್ರಕ್ಕೆ ಅಕ್ಷಯ್ ಖನ್ನಾ ಬಣ್ಣಹಚ್ಚಿದ್ದಾರೆ.

ಚಿತ್ರದಲ್ಲಿ ಏನುಂಟು, ಏನಿಲ್ಲ?

10 ವರ್ಷಗಳು ಪ್ರಧಾನ ಮಂತ್ರಿ ಆಗಿದ್ದಾಗ ಹಲವಾರು ಟೀಕೆಗಳನ್ನು ಮನಮೋಹನ್ ಸಿಂಗ್ ಎದುರಿಸಬೇಕಾಯಿತು. ಸೋನಿಯಾ ಗಾಂಧಿ ಪರಿವಾರದವರ ಹಿಡಿತದಲ್ಲಿ ಸಿಂಗ್ ಇದ್ದರೇ? ಅವರಿಗೆ ಹೆಚ್ಚಿನ ಅಧಿಕಾರ ಇರಲಿಲ್ಲವೇ? ಬಹುತೇಕ ಸಂದರ್ಭಗಳಲ್ಲಿ ಅವರು ಯಾಕೆ ಮಹಾಮೌನ ವಹಿಸುತ್ತಿದ್ದರು? ಆ ಸಂದರ್ಭದಲ್ಲಿ ಆದ ಹಗರಣಗಳಲ್ಲಿ ಅವರ ಪಾತ್ರವಿದೆಯೇ? ಇವೇ ಮುಂತಾದ ಪ್ರಶ್ನೆಗಳಿಗೆ ಚಿತ್ರದಲ್ಲಿ ಉತ್ತರ ಇದೆ ಎನ್ನಲಾಗಿದೆ. ಈ ಎಲ್ಲ ಘಟನೆಗಳನ್ನು ಬೇರೆಲ್ಲರಿಗಿಂತ ಹತ್ತಿರದಿಂದ ಕಂಡವರೇ ಸಂಜಯ್ ಬಾರು. ಅವರ ದೃಷ್ಟಿಕೋನದಲ್ಲೇ ಸಿನಿಮಾ ಸಾಗಲಿದೆ. ಹಾಗಿದ್ದರೂ ಯಾವುದೇ ರೀತಿಯಲ್ಲಿ ಮನಮೋಹನ್ ಸಿಂಗ್ ವ್ಯಕ್ತಿತ್ವಕ್ಕೆ ಧಕ್ಕೆ ಆಗುವ ರೀತಿಯಲ್ಲಿ ಸಿನಿಮಾ ಮೂಡಿಬಂದಿಲ್ಲ ಎನ್ನುತ್ತಿದೆ ಚಿತ್ರತಂಡ.

ವಿರೋಧಿಸುವುದು ಎಷ್ಟು ಸರಿ?

‘ದಿ ಆಕ್ಸಿಡೆಂಟಲ್ ಪ್ರೖೆಮ್ ಮಿನಿಸ್ಟರ್’ ತೆರೆಗೆ ಬರಲು ಸಿದ್ಧವಾಗಿದೆ ಎಂದು ಗೊತ್ತಾಗುತ್ತಿದ್ದಂತೆಯೇ ಕೆಲವರು ಅದನ್ನು ವಿರೋಧಿಸಲು ಶುರುಮಾಡಿದರು. ಚಿತ್ರದ ಬಿಡುಗಡೆಗೆ ತಡೆ ನೀಡಬೇಕು ಎಂದು ನ್ಯಾಯಾಲಯದ ಮೆಟ್ಟಿಲು ಕೂಡ ಏರಿದರು. ಅಂಥವರ ವಾದವನ್ನು ಕೋರ್ಟ್ ತಿರಸ್ಕರಿಸಿದೆ ಎಂಬುದು ಬೇರೆ ಮಾತು. ಈ ಹಿನ್ನೆಲೆಯಲ್ಲಿ ನಿಜಕ್ಕೂ ವಿರೋಧಿಸುವ ಅಂಶವಾದರೂ ಈ ಚಿತ್ರದಲ್ಲಿ ಏನಿದೆ ಎಂದು ಕೇಳುತ್ತಾರೆ ಅನುಪಮ್ ‘ಮನಮೋಹನ್ ಸಿಂಗ್ ಅವರ ಮಾಧ್ಯಮ ಸಲಹೆಗಾರರೇ ಬರೆದ ಪುಸ್ತಕವನ್ನು ಆಧರಿಸಿ ನಾವು ಸಿನಿಮಾ ಮಾಡಿದ್ದೇವೆ. ಕಟ್ಟುಕಥೆಯನ್ನು ತೋರಿಸುತ್ತಿಲ್ಲ. ಯಾರೋ ಮೂರನೆಯವರು ಹೇಳಿದ ಮಾತನ್ನು ಕೇಳಿಕೊಂಡು ಚಿತ್ರಕಥೆ ಹೆಣೆದಿಲ್ಲ. 5 ವರ್ಷಗಳ ಹಿಂದೆ ಪ್ರಕಟವಾದ ಆ ಪುಸ್ತಕಕ್ಕೆ ಇಲ್ಲದ ವಿರೋಧ ಈಗ ಈ ಚಿತ್ರಕ್ಕೆ ಯಾಕೆ’ ಎಂದು ಜನರ ಮುಂದೆ ಪ್ರಶ್ನೆಯನ್ನಿಡುತ್ತಾರೆ.

ಇದೇ ಸೂಕ್ತ ಸಮಯ!

ಇನ್ನೇನು ಕೆಲವೇ ತಿಂಗಳಲ್ಲಿ ಲೋಕಸಭಾ ಚುನಾವಣೆ ಬರಲಿದೆ. ಅದಕ್ಕೆ ಮುಂಚಿತವಾಗಿ ‘ದಿ ಆಕ್ಸಿಡೆಂಟಲ್ ಪ್ರೖೆಮ್ ಮಿನಿಸ್ಟರ್’ ಸಿನಿಮಾ ತೆರೆಕಾಣುತ್ತಿದೆ ಎಂದರೆ ಅದರಲ್ಲಿ ಏನಾದರೂ ರಾಜಕೀಯ ಹುನ್ನಾರ ಇರಬಹುದೇ? ಈ ಪ್ರಶ್ನೆಗೆ ತಮ್ಮದೇ ರೀತಿಯಲ್ಲಿ ಉತ್ತರಿಸುತ್ತಾರೆ ನಟ ಅನುಪಮ್ ‘ರಾಷ್ಟ್ರಭಕ್ತಿಯ ಸಿನಿಮಾ ಸ್ವಾತಂತ್ರೊ್ಯೕತ್ಸವ ಅಥವಾ ಗಣರಾಜ್ಯೋತ್ಸವದ ಸಂದರ್ಭದಲ್ಲಿ ತೆರೆಕಾಣುತ್ತದೆ ಎಂದಾದರೆ, ರಾಜಕೀಯ ವಿಷಯವುಳ್ಳ ಸಿನಿಮಾ ಚುನಾವಣೆ ಸಮೀಪಿಸುತ್ತಿರುವಾಗ ಯಾಕೆ ರಿಲೀಸ್ ಆಗಬಾರದು? ನನ್ನ ಪ್ರಕಾರ ಈ ಚಿತ್ರವನ್ನು ಜನರು ನೋಡಲು ಇದೇ ಸರಿಯಾದ ಸಮಯ’ ಎನ್ನುತ್ತಾರೆ. ಅಲ್ಲದೆ, ರಾಜಕೀಯ ವ್ಯಕ್ತಿಗಳ ಜೀವನದ ಬಗ್ಗೆ ಸಿನಿಮಾ ಮಾಡಿದಾಗ ಭಾರತದಲ್ಲಿ ಈ ಪರಿ ವಿರೋಧ ವ್ಯಕ್ತವಾಗುವುದು ಏಕೆ ಎಂಬ ಪ್ರಶ್ನೆಯೂ ಅವರನ್ನು ಕಾಡುತ್ತಿದೆಯಂತೆ. ವಿದೇಶಿ ಚಿತ್ರಕರ್ವಿುಗಳು ಇಂಥ ಸಿನಿಮಾ ಮಾಡಿದಾಗ ಪುರಸ್ಕಾರಗಳು ಸಿಗುತ್ತವೆ. ಅಬ್ರಹಾಂ ಲಿಂಕನ್ ಕುರಿತ ಚಿತ್ರದಲ್ಲಿ ಲಿಂಕನ್ ಪಾತ್ರ ಮಾಡಿದ್ದಕ್ಕಾಗಿ ನಟ ಡೇನಿಯಲ್ ಡೇ-ಲಿವಿಸ್​ಗೆ ಆಸ್ಕರ್ ಪ್ರಶಸ್ತಿ ಬಂತು. ಗಾಂಧಿ ಪಾತ್ರದಲ್ಲಿ ನಟಿಸಿದ ಬೆನ್ ಕಿನ್ಸ್​ಲೇ ಅವರಿಗೆ ಆಸ್ಕರ್ ಪ್ರಶಸ್ತಿ ಸಿಕ್ಕಿತು. ಆದರೆ ಭಾರತದಲ್ಲಿ ಅಂಥ ವಾತಾವರಣ ಇಲ್ಲ ಎಂದು ಬೇಸರ ವ್ಯಕ್ತಪಡಿಸುವ ಅನುಪಮ್ ‘ಮೊದಲು ಸಿನಿಮಾ ನೋಡಿ, ನಂತರ ಅಭಿಪ್ರಾಯ ತಿಳಿಸಿ’ ಎಂದು ಜನರಿಗೆ ಕಿವಿಮಾತು ಹೇಳುತ್ತಾರೆ.

Leave a Reply

Your email address will not be published. Required fields are marked *