ತೆರೆಯಲ್ಲೂ ಆಕ್ಸಿಡೆಂಟಲ್ ಪಿಎಂ ಮೌನಿ

| ರವೀಂದ್ರ ಎಸ್.ದೇಶಮುಖ್ ಬೆಂಗಳೂರು

ಡಾ.ಮನಮೋಹನ್ ಸಿಂಗ್ ಪ್ರಧಾನಿಯಾಗಿದ್ದ ಸಂದರ್ಭದಲ್ಲಿ ಜನಸಾಮಾನ್ಯರಿಗೆ ಕಾಡಿದ್ದ ಪ್ರಶ್ನೆಗಳೇ ಈ ಚಿತ್ರ ನೋಡಿದ ಮೇಲೂ ಕಾಡುತ್ತವೆ. ‘ಆಪ್ ಕುಛ್ ಬೋಲ್ತೆ ಕ್ಯೂ ನಂಹಿ?’ (ನೀವು ಯಾಕೆ ಏನನ್ನೂ ಮಾತಾಡೋದಿಲ್ಲ) ಎಂದು ಸಿಂಗ್ ಅವರಿಗೆ ಮನಮೋಹನರ ಪತ್ನಿ ಕೇಳಿದ ಪ್ರಶ್ನೆಯೇ ವೀಕ್ಷಕರ ಪ್ರಶ್ನೆಯೂ ಹೌದು. 2004-14ರ ಅವಧಿಯಲ್ಲಿ ಸಿಂಗ್ ಪ್ರಧಾನಿ ಆಗಿದ್ದರೂ, ಸೋನಿಯಾ ಸೂಪರ್ ಪ್ರೖೆಮ್ ಮಿನಿಸ್ಟರ್ ಆಗಿದ್ದರು ಎಂಬ ಸಂಗತಿ ರಾಜಕೀಯ ಅಂಗಳದಲ್ಲಿ ಚರ್ಚೆಗೆ ಗ್ರಾಸವಾದದ್ದೇ. ಆದರೆ, ಸೋನಿಯಾ-ರಾಹುಲ್ ಆಡಳಿತದಲ್ಲಿ ಏಕೆ, ಹೇಗೆ ಹಸ್ತಕ್ಷೇಪ ಮಾಡುತ್ತಿದ್ದರು, ‘ಉತ್ತಮ ವ್ಯಕ್ತಿತ್ವ’ದ ಮನಮೋಹನ್ ಅದನ್ನು ಏಕೆ ವಿರೋಧಿಸಲಿಲ್ಲ? ಮುಂತಾದ ಪ್ರಶ್ನೆಗಳಿಗೆ ಉತ್ತರ ದೊರೆಯದೆ, ಅವರು ‘ಕುಟುಂಬನಿಷ್ಠ’ರಾಗಿ ಉಳಿದುಬಿಟ್ಟರು ಎಂಬ ನಿಷ್ಕರ್ಷ ಹೊರಹೊಮ್ಮುತ್ತದೆ.

ಹೊಸದೇನೂ ಹೇಳದ, ಕುತೂಹಲ ಮೂಡಿಸದ ‘ದ ಆಕ್ಸಿಡೆಂಟಲ್ ಪ್ರೖೆಮ್ ಮಿನಿಸ್ಟರ್’ ಸಮರ್ಥ ಸಿನಿಮಾ ಆಗುವಲ್ಲಿ ಸೋತಿದೆ! ಟ್ರೇಲರ್ ಬಿಡುಗಡೆಯಿಂದಲೇ ವಿವಾದ ಹುಟ್ಟಿಸಿದ ಈ ಸಿನಿಮಾದಲ್ಲಿ ವಿವಾದಾತ್ಮಕ ಅಂಶಗಳೇನೂ ಇಲ್ಲ. ಮನಮೋಹನ್ ಸಿಂಗ್ ಪ್ರಧಾನಿಯಾಗಿದ್ದಾಗ ಅವರ ಮಾಧ್ಯಮ ಸಲಹೆಗಾರರಾಗಿದ್ದ ಸಂಜಯ್ ಬಾರು ರಚಿಸಿದ ಕೃತಿಯನ್ನು ಆಧರಿಸಿಯೇ ಈ ಚಿತ್ರ ತಯಾರಾಗಿದ್ದು, ಹಾಗಾಗಿಯೇ ಸಿನಿಮಾ ತುಂಬ ಬಾರು (ಅಕ್ಷಯ್ ಖನ್ನಾ) ಆವರಿಸಿಕೊಂಡಿದ್ದಾರೆ.

ಅನುಭವಿ ನಟ ಅನುಪಮ್ ಖೇರ್ ಥೇಟ್ ಮನಮೋಹನರನ್ನು ಹೋಲುವಂತೆ ನಟಿಸಿದ್ದಾರೆ. ಹಾವಭಾವ, ಮಾತಿನ ಧಾಟಿ, ನಡೆಯುವ ಶೈಲಿ… ಎಲ್ಲವೂ ಸಿಂಗ್​ರಿಗೆ ಹೋಲಿಕೆ ಆಗುತ್ತದೆ. ಇದಕ್ಕಾಗಿ ಖೇರ್ ತುಂಬ ಶ್ರಮ ಹಾಕಿದ್ದು, ಅವರ ನಟನೆಗಾದರೂ ಸಿನಿಮಾ ಒಮ್ಮೆ ನೋಡಬಹುದು. ರಾಜಕೀಯ ಅಂಗಳದಲ್ಲಿ ಯಾವೆಲ್ಲ ಚತುರಾಟಗಳು, ತಂತ್ರಗಳು ರೂಪುಗೊಳ್ಳುತ್ತವೆ? ಪ್ರಜಾಪ್ರಭುತ್ವದ ದೊಡ್ಡ ಮಂದಿರ ಹೇಗೆ ರಾಜನೀತಿಯ ಅಖಾಡವಾಗಿ ರೂಪುಗೊಳ್ಳುತ್ತದೆ? ಇಷ್ಟು ಬೃಹತ್ ದೇಶವನ್ನು ನಡೆಸುವ ಪ್ರಧಾನಮಂತ್ರಿ ಕಾರ್ಯಾಲಯದಲ್ಲಿ (ಪಿಎಂಒ) ಏನೆಲ್ಲ ನಡೆಯುತ್ತದೆ? ಸ್ಥಾಪಿತ ಹಿತಾಸಕ್ತಿಗಳು ಹೇಗೆಲ್ಲ ಕೆಲಸ ಮಾಡುತ್ತವೆ? ಅಷ್ಟೇ ಏಕೆ, ಸ್ವತಃ ಪ್ರಧಾನಿಯಾದವರು ಅನಿವಾರ್ಯತೆಗೆ, ಸಂದಿಗ್ಧಕ್ಕೆ ಸಿಲುಕುವ ಕಹಿಸತ್ಯಗಳು ಇಲ್ಲಿ ಅನಾವರಣಗೊಂಡಿದ್ದು, ಚಿತ್ರದ ಪ್ಲಸ್ ಪಾಯಿಂಟ್. ಪರಮಾಣು ಒಪ್ಪಂದದ ವೇಳೆ ಸಿಂಗ್ ಅವರ ಮೇಲೆ ಬಂದ ರಾಜಕೀಯ ಒತ್ತಡ, ಅದನ್ನು ಮೀರಿ ನಿಂತು ಅವರು ಒಪ್ಪಂದಕ್ಕೆ ಸಹಿ ಹಾಕಿದ ವಿದ್ಯಮಾನ, ಮಾಜಿ ಪ್ರಧಾನಿ ನರಸಿಂಹ ರಾವ್ ಅಂತ್ಯಸಂಸ್ಕಾರದ ವೇಳೆಯಲ್ಲೂ ರಾಜಕೀಯದ ಸದ್ದು, ಪ್ರಮುಖ ನಿರ್ಧಾರ ಕೈಗೊಳ್ಳುವಾಗ ಅಡ್ಡಿಯಾದ ‘ಕುಟುಂಬ’… ಹೀಗೆ ಕೆಲ ಸನ್ನಿವೇಶಗಳನ್ನು ಪರಿಣಾಮಕಾರಿಯಾಗಿ ತೋರಿಸಲಾಗಿದೆಯಾದರೂ, ಇನ್ನೂ ಹಲವು ಗಂಭೀರ ಘಟನೆಗಳನ್ನು ಕಟ್ಟಿಕೊಡಬಹುದಿತ್ತು. ಬುಷ್ ಜತೆ ಮಾತುಕತೆಗೆ ಸಿಂಗ್ ಒಳಪ್ರವೇಶಿಸುವಾಗ ನಟವರ್ ಸಿಂಗ್​ರನ್ನು ತಡೆದ ಸಂಜಯ್ ಬಾರು ಸಮಯಪ್ರಜ್ಞೆ ಗಮನ ಸೆಳೆಯುತ್ತದೆ. ಆದರೆ, ಬಾರು (ಅಕ್ಷಯ್ ಖನ್ನಾ) ಘಟನೆಗಳನ್ನು ವಿವರಿಸುತ್ತ ಹೋಗುವುದರಿಂದ ಸಿನಿಮಾ, ಅಲ್ಲಲ್ಲಿ ಡಾಕ್ಯುಮೆಂಟರಿಯಂತೆ ಭಾಸವಾಗುತ್ತದೆ. ಸೋನಿಯಾ ಗಾಂಧಿ ಪಾತ್ರದಲ್ಲಿ ಕಾಣಿಸಿಕೊಂಡಿರುವ ಜರ್ಮನ್ ಮೂಲದ ನಟಿ ಸುಸಾನೆ ಬರ್ನೆಟ್ ಪಾತ್ರಕ್ಕೆ ನ್ಯಾಯ ಒದಗಿಸಿದ್ದಾರೆ. ಪ್ರಿಯಾಂಕಾ (ಅಹಾನಾ ಕುಮ್ರಾ), ರಾಹುಲ್ (ಅರ್ಜುನ್ ಮಾಥೂರ್) ಪಾತ್ರಗಳು, ಮಿಮಿಕ್ರಿಯಂತೆ ಬಂದು ಹೋಗಿವೆಯಷ್ಟೇ. ಪ್ರಮುಖ ಘಟನೆಗಳನ್ನು ಹೇಳುವಾಗ ನೈಜ ದೃಶ್ಯಾವಳಿಗಳನ್ನೇ ಅಲ್ಲಲ್ಲಿ ಬಳಸಿಕೊಳ್ಳಲಾಗಿದೆ. ಅದೇನಿದ್ದರೂ, ಪಿಎಂಒ ಮೇಲೆ ಪ್ರಧಾನಿಗಿರಬೇಕಾದ ಹಿಡಿತವನ್ನು ಒಂದು ಕುಟುಂಬ ಸಾಧಿಸಿದ್ದು, ದೇಶಹಿತದ ವಿಷಯ ಬಂದಾಗ ಅದು ‘ಪಕ್ಷಹಿತ’ಕ್ಕೆ ಮಾರಕ ಎಂದು ಬಗೆದ ಸಂಗತಿಗಳನ್ನು ಸಿನಿಮಾ ಗಟ್ಟಿದನಿಯಲ್ಲಿ ಹೇಳಿದೆ. ಆದರೆ, ಯಾಕೆ ‘ಸಿಂಗ್ ಈಸ್ ಕಿಂಗ್’ ಎಂಬ ಸಮರ್ಥನೆಗಾಗಿ ಒಂದೆರಡು ದೃಶ್ಯಗಳನ್ನಾದರೂ ನೀಡಬೇಕಿತ್ತು.

Leave a Reply

Your email address will not be published. Required fields are marked *