ದಿ ಆ್ಯಕ್ಸಿಡೆಂಟಲ್​ ಪ್ರೈಮ್​ಮಿನಿಸ್ಟರ್​ ವಿವಾದ ಸೃಷ್ಟಿಸುತ್ತದೆ ಎಂಬುದು ಶೂಟಿಂಗ್​ನಲ್ಲೇ ಗೊತ್ತಿತ್ತು: ಅಕ್ಷಯ್​ ಖನ್ನಾ

ನವದೆಹಲಿ: ಈಗಾಗಲೇ ವಿವಾದ ಸೃಷ್ಟಿಸಿರುವ ದಿ ಆ್ಯಕ್ಸಿಡೆಂಟಲ್​ ಪ್ರೈಮ್​ ಮಿನಿಸ್ಟರ್​ ಸಿನಿಮಾ ಇನ್ನು ಕೆಲವೇ ದಿನಗಳಲ್ಲಿ ಬಿಡುಗಡೆಯಾಗಲಿದೆ. ಸಿನಿಮಾದಲ್ಲಿ ಅಕ್ಷಯ್​​ ಖನ್ನಾ ಮನಮೋಹನ್​ ಸಿಂಗ್​ ಅವರ ಮಾಧ್ಯಮ ಸಲಹೆಗಾರ ಸಂಜಯ್​ ಬರು ಪಾತ್ರ ನಿಭಾಯಿಸಿದ್ದು ಈಗಾಗಲೇ ಚಿತ್ರದ ಪ್ರಮೋಶನ್​ನಲ್ಲಿ ತೊಡಗಿಕೊಂಡಿದ್ದಾರೆ. ಈಗ ಸಂದರ್ಶನದಲ್ಲಿ ಅವರು ಆಡಿದ ಮಾತು ಕುತೂಹಲಕ್ಕೆ ಕಾರಣವಾಗಿದೆ.

ಸಿನಿಮಾ ಬಗ್ಗೆ ಅಕ್ಷಯ್​ ಖನ್ನಾ ಮಾತನಾಡಿದ್ದು, ಸಿನಿಮಾ ಶೂಟಿಂಗ್​ ಮಾಡುತ್ತಿದ್ದಾಗಲೇ ಇದು ವಿವಾದ ಸೃಷ್ಟಿಸುತ್ತದೆ ಎಂದು ನನಗೆ ಅನ್ನಿಸಿತ್ತು. ಒಂದೊಮ್ಮೆ ಸಿನಿಮಾ ಟ್ರೇಲರ್​ ಬಿಡುಗಡೆಯಾದಾಗ ಅದು ಯಾವುದೇ ಕಾಂಟ್ರವರ್ಸಿಗೆ ಕಾರಣವಾಗದೆ ಇದ್ದಿದ್ದರೆ ನನಗೆ ಆಶ್ಚರ್ಯವಾಗುತ್ತಿತ್ತು ಎಂದೂ ತಿಳಿಸಿದ್ದಾರೆ.
ಪುಸ್ತಕ ಬರೆದ ಸಂಜಯ್​ ಬರು ಅವರನ್ನು ಭೇಟಿಯಾಗಬಾರದು. ಅವರು ಸಾರ್ವಜನಿಕವಾಗಿ ಅಷ್ಟೊಂದು ಪ್ರಸಿದ್ಧವಾಗಿಲ್ಲದ ಕಾರಣ ನಮಗೆ ಬೇಕಾದಂತೆ ಆ ಪಾತ್ರವನ್ನು ಜನರ ಮನಸಲ್ಲಿ ಅಚ್ಚೊತ್ತಬಹುದು ಎಂದು ಶೂಟಿಂಗ್​ ಪ್ರಾರಂಭಕ್ಕೂ ಮೊದಲೇ ನನಗೆ ನಿರ್ದೇಶಕ ರತ್ನಾಕರ್​ ಗುಟ್ಟೆ ಹೇಳಿದ್ದರು ಎಂದು ಅಕ್ಷಯ್​ ಖನ್ನಾ ಹೇಳಿಕೊಂಡಿದ್ದಾರೆ.

ತನ್ನ ವೃತ್ತಿ ಬಗ್ಗೆ ಮಾತನಾಡಿದ ಅಕ್ಷಯ್​ ಖನ್ನಾ, ನಾನು ಈ ಸ್ಥಾನಕ್ಕೆ ಏರಿದ್ದು ತುಂಬ ಖುಷಿ ಕೊಟ್ಟಿದೆ. ದಿ ಆ್ಯಕ್ಸಿಡೆಂಟಲ್​ ಪ್ರೈಮ್​ ಮಿನಿಸ್ಟರ್​ ಸಿನಿಮಾವನ್ನು ನಾನು ಈಗಾಗಲೇ ನೋಡಿದ್ದೇನೆ. ಅದರ ಸಾಮರ್ಥ್ಯ ಏನು ಎಂಬುದು ನನಗೆ ಗೊತ್ತು ಎಂದಿದ್ದಾರೆ.