ಕೋಲ್ಕತ: ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಐಪಿಎಲ್ 18ನೇ ಆವೃತ್ತಿಯಲ್ಲಿ ಶುಭಾರಂಭ ಕಂಡಿದೆ. ಸ್ಟಾರ್ ಬ್ಯಾಟರ್ ವಿರಾಟ್ ಕೊಹ್ಲಿ (59* ರನ್, 36 ಎಸೆತ, 4 ಬೌಂಡರಿ, 3 ಸಿಕ್ಸರ್) ಹಾಗೂ ಫಿಲ್ ಸಾಲ್ಟ್ (56 ರನ್, 31 ಎಸೆತ, 9 ಬೌಂಡರಿ, 2 ಸಿಕ್ಸರ್) ಒದಗಿಸಿದ ಬಿರುಸಿನ ಆರಂಭ ಹಾಗೂ ಕೃನಾಲ್ ಪಾಂಡ್ಯ (29ಕ್ಕೆ 3) ಬಿಗಿ ಬೌಲಿಂಗ್ ದಾಳಿಯ ಬಲದಿಂದ ರಜತ್ ಪಾಟೀದಾರ್ ಬಳಗ ಉದ್ಘಾಟನಾ ಪಂದ್ಯದಲ್ಲಿ ಹಾಲಿ ಚಾಂಪಿಯನ್ ಕೋಲ್ಕತ ನೈಟ್‌ರೈಡರ್ಸ್ ಎದುರು 7 ವಿಕೆಟ್‌ಗಳ ಗೆಲುವು ದಾಖಲಿಸಿದೆ.
ಯಶಸ್ವಿ 18ನೇ ಆವೃತ್ತಿಗೆ ಕಾಲಿಟ್ಟ ಐಪಿಎಲ್ ಟೂರ್ನಿಗೆ ಶನಿವಾರ ಅದ್ದೂರಿ ಚಾಲನೆ ನೀಡಲಾಯಿತು. ಪಂದ್ಯಕ್ಕೂ ಮುನ್ನ ಒಂದು ಗಂಟೆ ಕಾಲ ನಡೆದ ಸಮಾರಂಭದಲ್ಲಿ ಬಹುಭಾಷಾ ಗಾಯಕಿ ಶ್ರೇಯಾ ೋಷಾಲ್ ಗಾಯನದೊಂದಿಗೆ ಆರಂಭಗೊಂಡ ಸಾಂಸ್ಕೃತಿಕ ಕಾರ್ಯಕ್ರಮಕ್ಕೆ ಪಂಜಾಬಿ ಗಾಯಕ ಕರುಣ್ ಆಹುಜಾ ಜತೆಯಾದರು. ‘ವಂದೇ ಮಾತರಂ’ ಸೇರಿ ಇತರ ಗೀತೆಗಳನ್ನು ಹಾಡುವ ಮೂಲಕ ಅಭಿಮಾನಿಗಳ ಮನಸೊರೆಗೊಳಿಸಿದರು. ನಟಿ ದಿಶಾ ಪಟಾನಿ ನೃತ್ಯ ಪ್ರದರ್ಶನದೊಂದಿಗೆ ಮೆರುಗು ನೀಡಿದರು. ಸುಡುಮದ್ದುಗಳನ್ನು ಸಿಡಿಸುವ ಮೂಲಕ ಟೂರ್ನಿಗೆ ಅಧಿಕೃತ ಚಾಲನೆ ನೀಡಲಾಯಿತು.
ಶಾರುಖ್ ಜತೆ ಕೊಹ್ಲಿ ಡಾನ್ಸ್!
ಬಾಲಿವುಡ್ ಚಿತ್ರರಂಗದ ಕಿಂಗ್ ಖಾನ್ ಎಂದೇ ಕರೆಸಿಕೊಳ್ಳುವ ಕೆಕೆಆರ್ ತಂಡದ ಮಾಲೀಕ, ನಟ ಶಾರುಖ್ ಖಾನ್ ಹಾಗೂ ಕ್ರಿಕೆಟ್‌ನ ಕಿಂಗ್ ಎನಿಸಿಕೊಂಡಿರುವ ವಿರಾಟ್ ಕೊಹ್ಲಿ ಒಟ್ಟಾಗಿ ಡಾನ್ಸ್ ಮಾಡಿ ಉದ್ಘಾಟನಾ ಸಮಾರಂಭಕ್ಕೆ ಮತ್ತಷ್ಟು ಕಳೆ ನೀಡಿದರು. ಕಾರ್ಯಕ್ರಮದ ನಿರೂಪಣೆ ಮಾಡಿದ ಶಾರುಖ್ ಖಾನ್, ಕೊಹ್ಲಿ ಹಾಗೂ ಕೆಕೆಆರ್‌ನ ರಿಂಕು ಸಿಂಗ್ ಜತೆಯಾಗಿ ವೇದಿಕೆಯಲ್ಲಿ ಡಾನ್ಸ್ ಮಾಡಿ ಸಂಭ್ರಮಿಸಿದರು.
ಇದೇ ವೇಳೆ ಸತತ 18ನೇ ಐಪಿಎಲ್‌ನಲ್ಲಿ ಒಂದೇ ತಂಡದ ಪರ ಆಡುತ್ತಿರುವ ವಿರಾಟ್ ಕೊಹ್ಲಿಗೆ ಬಿಸಿಸಿಐ ವತಿಯಿಂದ ವಿಶೇಷ ಸ್ಮರಣಿಕೆ ನೀಡಿ ಗೌರವಿಸಲಾಯಿತು. ಕಾರ್ಯಕ್ರಮದಲ್ಲಿ ಬಿಸಿಸಿಐ ಅಧ್ಯಕ್ಷ ರೋಜರ್ ಬಿನ್ನಿ, ಉಪಾಧ್ಯಕ್ಷ ರಾಜೀವ್ ಶುಕ್ಲಾ, ಕಾರ್ಯದರ್ಶಿ ದೇವಜೀತ್ ಸೈಕಿಯಾ, ಐಪಿಎಲ್ ಮುಖ್ಯಸ್ಥ ಅರುಣ್ ಧುಮಾಲ್ ಉಪಸ್ಥಿತರಿದ್ದರು. ಐಸಿಸಿ ಅಧ್ಯಕ್ಷ ಜಯ್ ಷಾ, ಭಾರತ ತಂಡದ ಮಾಜಿ ನಾಯಕ ಹಾಗೂ ಬಿಸಿಸಿಐ ಮಾಜಿ ಅಧ್ಯಕ್ಷ ಸೌರವ್ ಗಂಗೂಲಿ ಮೈದಾನದಲ್ಲಿ ಹಾಜರಿದ್ದರು.