ಈಜುವ ವೇಳೆ ಬಾಲಕಿಯ ದೇಹ ಪ್ರವೇಶಿಸಿದ ಮಿದುಳು ತಿನ್ನುವ ಅಮೀಬಾ: ಸೋಂಕಿಗೆ ತುತ್ತಾಗಿ ಪ್ರಾಣಬಿಟ್ಟ ಪೋರಿ!

ನ್ಯೂಯಾರ್ಕ್​: ಅಮೆರಿಕದ ಟೆಕ್ಸಾಸ್​ನ ಹತ್ತು ವರ್ಷದ ಬಾಲಕಿ ಮಿದುಳು ತಿನ್ನುವ ಅಪರೂಪದ ಪರಾವಲಂಬಿ ಜೀವಿ ಅಮೀಬಾ ಸೋಂಕಿಗೆ ಒಳಗಾಗಿ ವಾರಕ್ಕಿಂತ ಹೆಚ್ಚಿನ ಕಾಲ ಅದರ ವಿರುದ್ಧ ಹೋರಾಡಿ ಕೊನೆಗೂ ಸಾವಿಗೀಡಾಗಿರುವುದಾಗಿ ಆಕೆಯ ಕುಟುಂಬ ಹಾಗೂ ಶಾಲಾ ಮೂಲಗಳು ಮಾಹಿತಿ ನೀಡಿವೆ.

ಲಿಲ್ಲಿ ಮಾ ಅವಂತ್​ ಮೃತ ಬಾಲಕಿ. ಕಾರ್ಮಿಕ ದಿನದ ವಾರಾಂತ್ಯ ಹಿನ್ನೆಲೆಯಲ್ಲಿ ತಮ್ಮ ಮನೆ ಸಮೀಪದ ಬ್ರೆಜೋಸ್​ ನದಿಯ ಪಕ್ಕ ಈಜಲು ತೆರಳಿದ್ದಳು. ಬಳಿಕ ಅಸ್ವಸ್ಥಳಾಗಿದ್ದ ಅವಳನ್ನು ಫೋರ್ಟ್​ವರ್ತ್​ನಲ್ಲಿರುವ ಆರೋಗ್ಯ ಕೇಂದ್ರಕ್ಕೆ ಸೆ.8ರಂದು ದಾಖಲಿಸಲಾಗಿತ್ತು. ಬಳಿಕ ನಡೆದ ಪರೀಕ್ಷೆಯಲ್ಲಿ ನಾಗ್ಲೆರಿಯಾ ಫೌಲೆರಿ ಹೆಸರಿನ ಬೆಚ್ಚಗಿನ ನೀರಿನಲ್ಲಿ ಕಂಡುಬರುವ ಅಪರೂಪದ ಜೀವಂತ ಏಕಕೋಶ ಜೀವಿ ಮಿದುಳು ತಿನ್ನುವ ಅಮೀಬಾ ಬಾಲಕಿಯ ದೇಹದಲ್ಲಿ ಪತ್ತೆಯಾಗಿರುವುದಾಗಿ ರೋಗ ನಿಯಂತ್ರಣ ಮತ್ತು ತಡೆಗಟ್ಟುವಿಕೆ ಕೇಂದ್ರ(ಸಿಡಿಸಿ) ತಿಳಿಸಿದೆ.

ವಾಲಿ ಮಿಲ್ಸ್​ ಎಲಿಮೆಂಟರಿ ಶಾಲೆಯಲ್ಲಿ ಐದನೇ ತರಗತಿಯ ವಿದ್ಯಾರ್ಥಿನಿಯಾಗಿದ್ದ ಲಿಲ್ಲಿ ಕೊನೆಗೂ ಸಾವಿಗೀಡಾಗಿರುವ ಬಗ್ಗೆ ಶಾಲೆಯು ತನ್ನ ಫೇಸ್​ಬುಕ್​ನಲ್ಲಿ ಖಚಿತಪಡಿಸಿದೆ. ಲಿಲ್ಲಿ ಅವಂತ್​ಳನ್ನು ಕಳೆದುಕೊಂಡಿದ್ದು, ದುಃಖಕರವಾಗಿದೆ. ಲಿಲ್ಲಿ ಒಬ್ಬ ಉತ್ತಮ ವಿದ್ಯಾರ್ಥಿನಿಯಾಗಿದ್ದಳು. ಅದರಲ್ಲೂ ಬಹಳ ಮುಖ್ಯವಾಗಿ ಲಿಲ್ಲಿ ನಂಬಿಕೆಗೂ ಮೀರಿದ ವ್ಯಕ್ತಿಯಾಗಿದ್ದಳು. ಅಲ್ಲದೆ, ಎಲ್ಲರಿಗೂ ಸ್ನೇಹಿತೆಯಂತೆ ಇದ್ದಳು. ಅವಳ ಆತ್ಮಕ್ಕೆ ಶಾಂತಿ ಸಿಗಲೆಂದು ಶಾಲೆ ಬರೆದುಕೊಂಡಿದೆ.

ನಾಗ್ಲೆರಿಯಾ ಫೌಲೆರಿ ಅಮೀಬಾ ವ್ಯಕ್ತಿಯ ದೇಹದೊಳಗೆ ಮೂಗಿನ ಮೂಲಕ ಪ್ರವೇಶಿಸಿ, ಮಿದುಳನ್ನು ತಲುಪುತ್ತದೆ. ಬಳಿಕ ಮಿದುಳಿನ ಅಂಗಾಗಳನ್ನು ನಾಶಗೊಳಿಸುತ್ತದೆ ಎಂದು ಸಿಡಿಸಿ ಮಾಹಿತಿ ನೀಡಿದೆ. 2009 ಮತ್ತು 2018ರ ನಡುವೆ ನಾಗ್ಲೆರಿಯಾ ಫೌಲೆರಿ ಸೋಂಕಿನ 34 ಪ್ರಕರಣಗಳು ವರದಿಯಾಗಿವೆ. 1962 ಮತ್ತು 2018ರ ನಡುವೆ 145 ಪ್ರಕರಣಗಳ ಬೆಳಕಿಗೆ ಬಂದಿದ್ದು, ಇದರಲ್ಲಿ ನಾಲ್ವರು ಮಾತ್ರ ಬದುಕುಳಿದಿದ್ದಾರೆ ಎಂದು ಸಿಡಿಸಿ ತಿಳಿಸಿದೆ. (ಏಜೆನ್ಸೀಸ್​)

Leave a Reply

Your email address will not be published. Required fields are marked *