ಭದ್ರಗಿರಿ ಕ್ಷೇತ್ರದಲ್ಲಿ ದೀಪೋತ್ಸವ

ತರೀಕೆರೆ: ತಾಲೂಕಿನ ಎಂ.ಸಿ.ಹಳ್ಳಿ ಗ್ರಾಮದ ಭದ್ರಗಿರಿ ಶ್ರೀ ಶಿವಸುಬ್ರಹ್ಮಣ್ಯ ಸ್ವಾಮಿ ದೇವಸ್ಥಾನದಲ್ಲಿ ತಿರು ಕಾರ್ತಿಕ ದೀಪೋತ್ಸವ ಶುಕ್ರವಾರ ವಿಜೃಂಭಣೆಯಿಂದ ಜರುಗಿತು.

ಶುಕ್ರವಾರ ಬೆಳಗಿನ ಜಾವ 4ಕ್ಕೆ ಸ್ವಾಮಿಯ ವಿಶ್ವರೂಪ ದರ್ಶನದ ಮೂಲಕ ವಿವಿಧ ಪೂಜೆಗಳು ಆರಂಭಗೊಂಡು, ಅಲಂಕೃತ ಸ್ವಾಮಿಯ ಮೂಲ ದೇವರಿಗೆ ಪಂಚಾಮೃತ ಸೇರಿ ಸುಗಂಧ ದ್ರವ್ಯಾದಿಗಳಿಂದ ಅಭಿಷೇಕ ಮಾಡಲಾಯಿತು. ಮಧ್ಯಾಹ್ನ 12ಕ್ಕೆ ನೈವೇದ್ಯ ಮತ್ತು ಪೂಜೆ ನೆರವೇರಿಸಲಾಯಿತು.

ಸಂಜೆ 5ಕ್ಕೆ ತಾಲೂಕಿನ ಕೃಷ್ಣಾಪುರ ಗ್ರಾಮದ ನೇತಾಜಿ ಎಂಬ ಹತ್ತು ವರ್ಷದ ಬಾಲಕಿ ಕೈಯಲ್ಲಿ ತಿರು ಕಾರ್ತಿಕ ದೀಪೋತ್ಸವ ಕಾರ್ಯಕ್ರಮಕ್ಕೆ ವಿಶೇಷ ಪೂಜೆ ನೆರವೇರಿಸುವ ಮೂಲಕ ಚಾಲನೆ ನೀಡಲಾಯಿತು. ಬಾಲಕಿಗೆ ದೇವಿ ಸ್ವರೂಪದಲ್ಲಿ ಅಲಂಕಾರಗೊಳಿಸಿ, ತಲೆ ಮೇಲೆ ದೀಪಕ್ಕೆ ಸುರಿಯುವ ತುಪ್ಪವನ್ನು ಹೊರಿಸಿ ದೇವಸ್ಥಾನದ ಸುತ್ತ ಪ್ರದಕ್ಷಿಣೆ ಹಾಕಿಸಿದರು. ಕಳಶದ ಮೂಲಕ ಹೊತ್ತೊಯ್ದ ತುಪ್ಪವನ್ನು 135 ಲೀಟರ್ ಸಾಮರ್ಥ್ಯದ ಪಂಚಲೋಹದ ದೀಪಕ್ಕೆ ಸುರಿಯಲಾಯಿತು.

ದೇವಸ್ಥಾನದ ಪ್ರಧಾನ ಅರ್ಚಕ ಮರುಗೇಶ್​ಸ್ವಾಮಿ ನೇತೃತ್ವದಲ್ಲಿ ಜರುಗಿದ ತಿರು ಕಾರ್ತಿಕ ದೀಪೋತ್ಸವದ ಜ್ಯೋತಿ ದರ್ಶನ ಸಂಜೆ ಆಯಿತು. ದೀಪೋತ್ಸವಕ್ಕೆ ಸೇಲಂ, ಕೊಯಮತ್ತೂರು, ಬೆಂಗಳೂರು, ತಮಿಳುನಾಡು, ಕೇರಳ, ಅಣ್ಣಾಮಲೈ ಮತ್ತಿತರೆ ಕಡೆಯಿಂದ ಭಕ್ತರು ಆಗಮಿಸಿದ್ದರು. ದೇವಸ್ಥಾನದ ಆಡಳಿತಾಧಿಕಾರಿ ಎ.ಚಂದ್ರಘೊಷನ್, ಸದಸ್ಯರಾದ ಬೊಮ್ಮರಾಜ್, ಡಾ. ವಿಕ್ರಂ, ಹಾ.ರಾಮಪ್ಪ ಇತರರಿದ್ದರು.