ಕರಕುಚ್ಚಿಯಲ್ಲಿ ಶೇ.67, ಗುಬ್ಬಿಗಾದಲ್ಲಿ 73.94 ರಷ್ಟು ಮತದಾನ

ತರೀಕೆರೆ: ಕರಕುಚ್ಚಿ ಗ್ರಾಪಂನ ಕರಕುಚ್ಚಿ ಬ್ಲಾಕ್​-1ರ ಸದಸ್ಯ ಎಂ.ರಾಮಲಿಂಗಪ್ಪ ನಿಧನದಿಂದ ತೆರವಾಗಿದ್ದ ಸ್ಥಾನಕ್ಕೆ ಬುಧವಾರ ನಡೆದ ಉಪ ಚುನಾವಣೆಯಲ್ಲಿ ಶೇ.67.36 ಮತದಾನವಾಗಿದೆ.

ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಸ್ಥಾಪಿಸಿದ್ದ ಎರಡು ಮತಗಟ್ಟೆಗಳಲ್ಲಿ ನಿಗದಿಯಂತೆ ಬೆಳಗ್ಗೆ 7ಕ್ಕೆ ಮತದಾನ ಆರಂಭವಾಯಿತಾದರೂ ಮಧ್ಯಾಹ್ನದವರೆಗೆ ಮಂದಗತಿಯಲ್ಲಿ ಸಾಗಿತು. ಮಧ್ಯಾಹ್ನ 3 ಗಂಟೆ ಬಳಿಕ ಮತದಾನ ಬಿರುಸುಗೊಂಡಿತು. 1713 ಮತದಾರರ ಪೈಕಿ 1154 ಮತದಾರರು ಹಕ್ಕು ಚಲಾಯಿಸಿದ್ದಾರೆ. ಇದರಲ್ಲಿ 572 ಪುರುಷರು, 582 ಮಹಿಳಾ ಮತದಾರರಿದ್ದಾರೆ. ಕೆ.ಎಸ್.ಸೋಮಶೇಖರ್, ಯೋಗ್ಯಾನಾಯ್ಕ, ಕೆ.ಆರ್.ನಾಗರಾಜ್ ಹಾಗೂ ಪ್ರವೀಣ್​ಕುಮಾರ್ ಅವರ ಭವಿಷ್ಯ ಮತಪಟ್ಟಿಗೆ ಭದ್ರವಾಗಿದೆ.

ಮತಪೆಟ್ಟಿಗೆಗಳನ್ನು ಪಟ್ಟಣದ ಮಿನಿ ವಿಧಾನಸೌಧದ ತಾಲೂಕು ಖಜಾನೆಯ ಸ್ಟ್ರಾಂಗ್ ರೂಂನಲ್ಲಿ ಇರಿಸಲಾಗಿದೆ. ಜ.4ರಂದು ಮತ ಎಣಿಕೆ ನಡೆಯಲಿದೆ ಎಂದು ಚುನಾವಣಾಧಿಕಾರಿ ಟಿ.ಎಸ್.ಗಣೇಶ್ ತಿಳಿಸಿದರು.

ಗುಬ್ಬಿಗಾದಲ್ಲಿ ಶೇ.73.94 ಹಕ್ಕು ಚಲಾವಣೆ: ಎನ್.ಆರ್.ಪುರ ತಾಲೂಕಿನ ಗುಬ್ಬಿಗಾ ಗ್ರಾಪಂ ಉಪಾಧ್ಯಕ್ಷರಾಗಿದ್ದ ದಿನೇಶ್ ಅವರ ಅಕಾಲಿಕ ನಿಧನದಿಂದ ತೆರವಾಗಿದ್ದ ಸದಸ್ಯ ಸ್ಥಾನಕ್ಕೆ ಬುಧವಾರ ನಡೆದ ಉಪ ಚುನಾವಣೆಯಲ್ಲಿ ಶೇ.73.94ರಷ್ಟು ಮತದಾನ ದಾಖಲಾಗಿದೆ.

ಸಾಮಾನ್ಯ ವರ್ಗಕ್ಕೆ ಮೀಸಲಾಗಿರುವ ಗುಬ್ಬಿಗಾ ಗ್ರಾಮದಲ್ಲಿ ಒಟ್ಟು 1,025 ಮತದಾರರಿದ್ದಾರೆ. ಇದರಲ್ಲಿ 513 ಪುರುಷರು, 512 ಮಹಿಳೆಯರಿದ್ದಾರೆ. 758 ಜನ ಮತ ಚಲಾಯಿಸಿದ್ದು, ಇದರಲ್ಲಿ 365 ಪುರುಷರು, 393 ಮಹಿಳೆಯರಿದ್ದಾರೆ. ಜ.4ರಂದು ಮತ ಎಣಿಕೆ ನಡೆಯಲಿದೆ.

ಬಿಜೆಪಿ ಬೆಂಬಲಿತ ಅಭ್ಯರ್ಥಿ ಸಾಜು, ಕಾಂಗ್ರೆಸ್ ಬೆಂಬಲಿತ ಶಂಕರ್, ಜೆಡಿಎಸ್ ಬೆಂಬಲಿತ ಚಿನ್ನೇಗೌಡ ಅಂತಿಮ ಕಣದಲ್ಲಿ ಉಳಿದಿದ್ದರು. ಮೂರೂ ಪಕ್ಷದ ಮುಖಂಡರು ತಮ್ಮ ಕಾರ್ಯ ವ್ಯಾಪ್ತಿಯಲ್ಲಿ ಪ್ರಚಾರ ನಡೆಸಿದ್ದರು. ಮಾಜಿ ಶಾಸಕ ಡಿ.ಎನ್.ಜೀವರಾಜ್ ಪ್ರಚಾರದಿಂದ ದೂರ ಉಳಿದು, ಸಲಹೆ ಸೂಚನೆ ಮಾತ್ರ ನೀಡಿದ್ದಾರೆ. ಶಾಸಕ ಟಿ.ಡಿ.ರಾಜೇಗೌಡ ಅವರು ತುಸು ಬಿರುಸಿನ ಪ್ರಚಾರ ನಡೆಸಿದ್ದರು.