15 ಕೋಟಿ ರೈತರಿಗೆ ಕಿಸಾನ್ ಸಮ್ಮಾನ್ ಲಾಭ

ತರೀಕೆರೆ: ಕೇಂದ್ರ ಸರ್ಕಾರದ ಕಿಸಾನ್ ಸಮ್ಮಾನ್ ಯೋಜನೆಯಿಂದ ದೇಶದ 15 ಕೋಟಿ ರೈತರಿಗೆ ಅನುಕೂಲವಾಗಲಿದ್ದು, ಈ ಮಹತ್ವಾಕಾಂಕ್ಷಿ ಯೋಜನೆ ಸಲುವಾಗಿ ಕೇಂದ್ರ 3.50 ಲಕ್ಷ ಕೋಟಿ ರೂ. ಹಣ ಮೀಸಲಿರಿಸಿದೆ ಎಂದು ಸಂಸದೆ ಶೋಭಾ ಕರಂದ್ಲಾಜೆ ತಿಳಿಸಿದರು.

ಶುಕ್ರವಾರ ತಾಲೂಕಿನ ನಾಗೇನಹಳ್ಳಿ, ಮೇದಿಹಳ್ಳಿ ಹಾಗೂ ಹುಣಸಘಟ್ಟ ಗ್ರಾಮದಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಶಂಕುಸ್ಥಾಪನೆ ನೆರವೇರಿಸಿದ ಮಾತನಾಡಿ, ಈಗಾಗಲೇ ಪ್ರಯೋಜನ ಪಡೆಯಲಿರುವ ರೈತರ ಮಾಹಿತಿ ಕೃಷಿ ಅಧಿಕಾರಿಗಳ ಕೈಸೇರಿದ್ದು, ಅನೇಕ ಕಾರಣಗಳಿಂದ ಕೈಬಿಟ್ಟಿರುವ ಅರ್ಹ ರೈತರು ತಮ್ಮ ಹೆಸರನ್ನು ಸೇರಿಸಲು ಅವಕಾಶವಿದೆ ಎಂದು ಹೇಳಿದರು.

ಕಳೆದ ನಾಲ್ಕೂವರೆ ವರ್ಷದ ಅವಧಿಯಲ್ಲಿ ಕ್ಷೇತ್ರದ ಅಭಿವೃದ್ಧಿಗೆ ಸಾಕಷ್ಟು ಶ್ರಮಿಸಲಾಗಿದೆ. ಅನೇಕ ರೋಗಗಳಿಗೆ ಚಿಕಿತ್ಸೆ ಪಡೆಯುತ್ತಿರುವ 114 ಮಂದಿಗೆ ಪ್ರಧಾನ ಮಂತ್ರಿ ಪರಿಹಾರ ನಿಧಿ ಕೊಡಿಸಲಾಗಿದೆ. ಉಜ್ವಲ ಯೋಜನೆಯಡಿ ಉಡುಪಿ-ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಒಟ್ಟು 43,587 ಅರ್ಹ ಫಲಾನುಭವಿಗಳಿಗೆ ಉಚಿತ ಗ್ಯಾಸ್ ವಿತರಣೆ ಮಾಡಲಾಗಿದೆ. ದೇಶದಾದ್ಯಂತ 11 ಕೋಟಿ ಫಲಾನುಭವಿಗಳು ಇದರ ಸಮರ್ಪಕ ಬಳಕೆ ಮಾಡುತ್ತಿದ್ದಾರೆ ಎಂದು ಮಾಹಿತಿ ನೀಡಿದರು.