ಕೆರೆಯಲ್ಲಿ ಮುಳುಗಿ ಮೂವರ ಸಾವು

ತರೀಕೆರೆ: ತಾಲೂಕಿನ ಹುಲಿತಿಮ್ಮಾಪುರ ಗ್ರಾಮದಲ್ಲಿ ಆಯುಧ ಪೂಜೆಗೆ ಬೈಕ್ ತೊಳೆಯಲು ತೆರಳಿದ್ದ ಸಹೋದರರು, ಸಂಬಂಧಿ ಸೇರಿ ಮೂವರು ಯುವಕರು ಕಟ್ಟೆ ಕೆರೆಯಲ್ಲಿ ಮುಳುಗಿ ಮೃತಪಟ್ಟಿದ್ದಾರೆ. ಸಹೋದರರಾದ ಹುಲಿತಿಮ್ಮಾಪುರ ಗ್ರಾಮದ ಹೇಮಂತ್(18) ವಿಜಯ್ಕುಮಾರ್(15) ಹಾಗೂ ಬರಗೇನಹಳ್ಳಿ ಗ್ರಾಮದ ಶಿವರಾಜ್ (18) ಮೃತ ದುರ್ದೈವಿಗಳು.

ಹೇಮಂತ್ ಮತ್ತು ವಿಜಯ್ಕುಮಾರ್ ಅಣ್ಣ ತಮ್ಮಂದಿರಾಗಿದ್ದು, ಶಿವರಾಜ್ ಹೇಮಂತ್​ನ ಸಹೋದರತ್ತೆ ಮಗನಾಗಿದ್ದಾನೆ. ಶಿವರಾಜ್ ದಸರಾ ರಜೆಗಾಗಿ ಹುಲಿತಿಮ್ಮಾಪುರದ ತನ್ನ ಮಾವನ ಮನೆಗೆ ಬಂದಿದ್ದ.

ಅ.18ರಂದು ಬೆಳಗ್ಗೆ 7 ಗಂಟೆಗೆ ಮೂವರು ಯುವಕರು ಹುಲಿತಿಮ್ಮಾಪುರ ಗ್ರಾಮದ ಕಟ್ಟೆ ಕೆರೆಯಲ್ಲಿ ಬೈಕ್ ತೊಳೆಯಲು ಹೋಗಿದ್ದರು. ಕೆರೆದಂಡೆ ಮೇಲೆ ಬೈಕ್ ತೊಳೆಯುವಾಗ ಹೇಮಂತ್ ಕಾಲು ಜಾರಿ ಕೆರೆಗೆ ಬಿದ್ದಿದ್ದಾನೆ. ಈ ವೇಳೆ ಹೇಮಂತ್​ನ ತಮ್ಮ ವಿಜಯ್ಕುಮಾರ್ ಅಣ್ಣನನ್ನು ರಕ್ಷಿಸಲು ಕೆರೆಗೆ ಇಳಿದು ಆತನೂ ಮುಳುಗಿದ್ದಾನೆ. ಹೀಗೆ ಒಬ್ಬರನ್ನು ರಕ್ಷಣೆ ಮಾಡಲು ಮತ್ತೊಬ್ಬರು ಪ್ರಯತ್ನಿಸಿ ಮೂವರೂ ಮುಳುಗಿ ಮೃತಪಟ್ಟಿದ್ದಾರೆ. ಈ ಮೂವರಿಗೂ ಈಜಲು ಬರುತ್ತಿರಲಿಲ್ಲ ಎಂದು ತಿಳಿದುಬಂದಿದೆ.

ಲಿಂಗದಹಳ್ಳಿ ಸಬ್​ಇನ್ಸ್​ಪೆಕ್ಟರ್ ರಫೀಕ್ ಮತ್ತಿತರ ಸಿಬ್ಬಂದಿ ಘಟನಾ ಸ್ಥಳ ಪರಿಶೀಲನೆ ನಡೆಸಿದರು. ಲಿಂಗದಹಳ್ಳಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.