ದೇವಾಂಗ ಸಮುದಾಯದ ಮೆರವಣಿಗೆ

ತರೀಕೆರೆ: ಪಟ್ಟಣದ ಎಪಿಎಂಸಿ ಆವರಣದಲ್ಲಿ ಏರ್ಪಡಿಸಿದ್ದ ರಾಜ್ಯಮಟ್ಟದ ದೇವಾಂಗ (ನೇಕಾರ) ಬೃಹತ್ ಸಮಾವೇಶದ ಅಂಗವಾಗಿ ಮಂಗಳವಾರ ಸಮುದಾಯದವರು ಹಂಪಿ ಹೇಮಕೂಟ ಪೀಠಾಧ್ಯಕ್ಷ ಶ್ರೀ ದಯಾನಂದ ಸ್ವಾಮೀಜಿ ಅವರ ನೇತೃತ್ವದಲ್ಲಿ ಬೃಹತ್ ಮೆರವಣಿಗೆ ನಡೆಸಿದರು.

ಶ್ರೀ ಬನಶಂಕರಿ ದೇಗುಲದಲ್ಲಿ ಮೆರವಣಿಗೆಗೆ ಶಾಸಕ ಡಿ.ಎಸ್.ಸುರೇಶ್ ವಿಧ್ಯುಕ್ತವಾಗಿ ಚಾಲನೆ ನೀಡಿದರು. ಮಂಗಳವಾದ್ಯ ಹಾಗೂ ವಿವಿಧ ಕಲಾ ಪ್ರಕಾರಗಳ ಸಹಿತ ಪೂರ್ಣಕುಂಭ ಹೊತ್ತ ನೂರಾರು ಮಹಿಳೆಯರು ಸಾಲುಗಟ್ಟಿ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ನಡೆಸಿದರು.

ತಮಿಳುನಾಡಿನಿಂದ ಆಗಮಿಸಿದ್ದ ಚೌಡೇಶ್ವರಿ ಅಲಗು ಸೇವೆ ಕಲಾ ತಂಡ, ಮಂಗಳೂರಿನ ಚಂಡೆವಾದ್ಯ ತಂಡ, ರಾಮದುರ್ಗದ ನೇಕಾರ ಬಂಧುಗಳು ಪ್ರದರ್ಶಿಸಿದ ನೇಕಾರಿಕೆ ಮಗ್ಗ ಪ್ರಾತ್ಯಕ್ಷಿಕೆ ನೋಡಗರನ್ನು ಗಮನ ಸೆಳೆಯುವಂತಿತ್ತು. ಮೆರವಣಿಗೆ ಉದ್ದಕ್ಕೂ ಸಮುದಾಯದ ಮಹಿಳೆಯರು ನ್ಯತ್ಯ ಮಾಡಿದರು.