ಧನುರಾಸನದಲ್ಲಿ ತನುಶ್ರೀ ಪಿತ್ರೋಡಿ ವಿಶ್ವದಾಖಲೆ

<ಗೋಲ್ಡನ್ ಬುಕ್ ಆಫ್ ರೆಕಾರ್ಡ್‌ನಿಂದ ಪ್ರಮಾಣಪತ್ರ>

ಉಡುಪಿ: ಯೋಗಾಸನದಲ್ಲಿ ಎರಡು ಜಾಗತಿಕ ದಾಖಲೆ ಮಾಡಿರುವ 10ರ ಹರೆಯದ ತನುಶ್ರೀ ಪಿತ್ರೋಡಿ ಶನಿವಾರ ಧನುರಾಸನದಲ್ಲಿ ನಂಬರ್ ಆಫ್ ರೋಲ್ಸ್‌ನಲ್ಲಿ ವಿಶ್ವದಾಖಲೆ ಬರೆದಿದ್ದಾರೆ.

ನಗರದ ಸೇಂಟ್ ಸಿಸಿಲಿ ಸಮೂಹ ವಿದ್ಯಾಸಂಸ್ಥೆ ಕ್ರೀಡಾಂಗಣದಲ್ಲಿ ನಡೆದ ಯೋಗ ಪ್ರದರ್ಶನದಲ್ಲಿ ಈಕೆ 1 ನಿಮಿಷದಲ್ಲಿ 62 ಉರುಳು ಹಾಕಿದ್ದು, ಜತೆಗೆ 1.40 ನಿಮಿಷದಲ್ಲಿ 100 ಉರುಳುಗಳನ್ನು ಹಾಕುವ ಮೂಲಕ ಎರಡು ವಿಶ್ವದಾಖಲೆ ಮಾಡಿದ್ದಾರೆ. ಈ ಅಪೂರ್ವ ಸಾಧನೆಗಾಗಿ ಅವರಿಗೆ ಸ್ಥಳದಲ್ಲೇ ಗೋಲ್ಡನ್ ಬುಕ್ ಆಫ್ ರೆಕಾರ್ಡ್‌ನ ದಕ್ಷಿಣ ಏಷ್ಯಾ ನಿರ್ದೇಶಕ ಮನೀಶ್ ಬಿಶ್ನೋಯಿ ಪ್ರಮಾಣಪತ್ರ ಹಸ್ತಾಂತರಿಸಿದರು.

2017ರಲ್ಲಿ ತನುಶ್ರೀ ಈಗಾಗಲೇ ಯೋಗದ ನಿರಾಲಂಭ ಪೂರ್ಣ ಚಕ್ರಾಸನವನ್ನು ಒಂದೇ ನಿಮಿಷದಲ್ಲಿ 19 ಬಾರಿ ಮಾಡುವ ಮೂಲಕ ಗೋಲ್ಡನ್ ಬುಕ್ ಆಫ್ ರೆಕಾರ್ಡ್ ಸಾಧನೆ ಮಾಡಿದ್ದರು. 2018ರಲ್ಲಿ ದೇಹದ ಎದೆಯ ಭಾಗ ಹಾಗೂ ತಲೆಯನ್ನು ಸ್ಥಿರವಾಗಿ ಇರಿಸಿ ಉಳಿದ ಭಾಗವನ್ನು ನಿಮಿಷಕ್ಕೆ 41 ಬಾರಿ ತಿರುಗಿಸುವ (ಮೋಸ್ಟ್ ಫುಲ್ ಬಾಡಿ ರೆವೊಲ್ಯುಶನ್ ಮೈಟೈನಿಂಗ್ ಎ ಚೆಸ್ಟ್ ಸ್ಟಾಂಡ್ ಪೋಸಿಶನ್) ಮೂಲಕ ಗಿನ್ನೆಸ್ ದಾಖಲೆ ಬರೆದಿದ್ದರು. ಸತತ 3 ವರ್ಷದಲ್ಲಿ ನಾಲ್ಕು ಸಾಧನೆ ಮಾಡಿರುವ ತನುಶ್ರೀ ಉಡುಪಿ ಸೇಂಟ್ ಸಿಸಿಲೀಸ್ ಹಿರಿಯ ಪ್ರಾಥಮಿಕ ಕನ್ನಡ ಮಾಧ್ಯಮ ಶಾಲೆಯ 5ನೇ ತರಗತಿಯ ವಿದ್ಯಾರ್ಥಿನಿ.

ತಾಯಿ ಸಂಧ್ಯಾ ಮಾತನಾಡಿ, ಮಗಳ ಸಾಧನೆ ನಮಗೆ ಖುಷಿ ತಂದಿದೆ. ಅವಳು ಯೂಟ್ಯೂಬ್ ವೀಡಿಯೊ ನೋಡಿ ಅಭ್ಯಾಸ ಮಾಡುತ್ತಿದ್ದಳು. 52 ಗರಿಷ್ಠ ಉರುಳು ಹಾಕುತ್ತಿದ್ದವಳು ಈಗ 62 ಮುಟ್ಟಿರುವುದು ಸಂತಸ ನೀಡಿದೆ. ಈ ಸಾಧನೆ ಪುಲ್ವಾಮದಲ್ಲಿ ಹುತಾತ್ಮರಾದ ಯೋಧರಿಗೆ ಅರ್ಪಣೆ ಎಂದರು.

ಮಾಜಿ ಸಚಿವ ಪ್ರಮೋದ್ ಮಧ್ವರಾಜ್, ದ.ಕ. ಮತ್ತು ಉಡುಪಿ ಮೀನುಗಾರರ ಫೆಡರೇಶನ್ ಅಧ್ಯಕ್ಷ ಯಶ್‌ಪಾಲ್ ಸುವರ್ಣ, ಜಿಪಂ ಅಧ್ಯಕ್ಷ ದಿನಕರ ಬಾಬು, ಕಾರ‌್ಯಕ್ರಮದ ಆಯೋಜಕ ಬಡಗಬೆಟ್ಟು ಕೋ-ಆ ಬ್ಯಾಂಕ್ ಪ್ರಧಾನ ವ್ಯವಸ್ಥಾಪಕ ಜಯಕರ ಶೆಟ್ಟಿ ಇಂದ್ರಾಳಿ, ಯೋಗ ಗುರು ರಾಮಕೃಷ್ಣ ಕೊಡಂಚ, ತಂದೆ ಉದಯಕುಮಾರ್, ರಂಗಕರ್ಮಿ ನಾಗೇಶ್ ಉದ್ಯಾವರ, ವೆಂಕಟರಮಣ ಸ್ಪೋರ್ಟ್ಸ್ ಮತ್ತು ಕಲ್ಚರಲ್ ಕ್ಲಬ್ ಅಧ್ಯಕ್ಷ ಮಲ್ಲೇಶ ಕುಮಾರ್, ಧರ್ಮಗುರು ವಿಲಿಯಂ ಮಾರ್ಟಿಸ್, ನಾಗರಾಜ ಭಟ್ ಪಾಂಗಾಳ, ವಿಜಯಕುಮಾರ್ ಉದ್ಯಾವರ ಉಪಸ್ಥಿತರಿದ್ದರು.

ಅತ್ಯಂತ ಕಠಿಣ ಯೋಸಾನದಲ್ಲಿ ತನುಶ್ರೀ ಸಾಧನೆ ಮಾಡಿದ್ದಾರೆ. ಧನುರಾಸನದಲ್ಲಿ ಈವರೆಗೆ ಯಾರದ್ದೂ ದಾಖಲೆ ಇಲ್ಲ. ತನುಶ್ರೀ ಹೆಸರಿನೊಂದಿಗೆ ಹೊಸ ದಾಖಲೆ ಸೃಷ್ಟಿಯಾಗಿದೆ.
– ಮನೀಶ್ ಬಿಶ್ನೋಯಿ, ಗೋಲ್ಡನ್ ಬುಕ್ ಆಫ್ ರೆಕಾರ್ಡ್‌ನ ದಕ್ಷಿಣ ಏಷ್ಯಾ ನಿರ್ದೇಶಕ