ವಿಜಯವಾಣಿ ಸುದ್ದಿಜಾಲ ಉಳ್ಳಾಲ

ಭೂಸೇನೆ, ನೌಕಾಪಡೆ, ವಾಯುಪಡೆ ಹಾಗೂ ಇತರ ಪ್ಯಾರಾಮಿಲಿಟರಿ ಪಡೆಗಳು ದೇಶ ರಕ್ಷಣೆಗಾಗಿ ದುಡಿಯುತ್ತಿದ್ದು ಅವರ ಸೇವೆಗೆ ಗೌರವ ಹಾಗೂ ಬೆಂಬಲ ನೀಡಿ, ಅವರ ಜತೆಗೆ ನಿಂತುಕೊಳ್ಳುವುದು ಪ್ರತಿಯೊಬ್ಬರ ಕರ್ತವ್ಯ ಎಂದು ನಿಟ್ಟೆ ವಿಶ್ವವಿದ್ಯಾಲಯ ಕುಲಾಧಿಪತಿ ಎನ್.ವಿನಯ್ ಹೆಗ್ಡೆ ಅಭಿಪ್ರಾಯಪಟ್ಟರು.
ಪಾಕ್ ಉಗ್ರರು ಪಹಾಲ್ಗಾಮ್‌ನಲ್ಲಿ ನಡೆಸಿದ ಕೃತ್ಯಕ್ಕೆ ಪ್ರತೀಕಾರವಾಗಿ ಭಾರತೀಯ ಸೈನಿಕರು ತೋರಿದ ಸಾಹಸಕ್ಕೆ ದೇರಳಕಟ್ಟೆ ನಿಟ್ಟೆ ವಿವಿ ವತಿಯಿಂದ ಕ್ಷೇಮ ಆಸ್ಪತ್ರೆ ಕ್ಯಾಂಪಸ್‌ನಲ್ಲಿರುವ ಗ್ಲಾಸ್ ಹೌಸ್‌ನಲ್ಲಿ ಮಂಗಳವಾರ ಕೃತಜ್ಞತಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಸೈನಿಕರು ಶಿಸ್ತು, ಧೈರ್ಯ ಮತ್ತು ನಿಷ್ಠೆಯಿಂದ ಸೇವೆ ಸಲ್ಲಿಸುತ್ತಿದ್ದು ಅನೇಕರು ತಮ್ಮ ಪ್ರಾಣವನ್ನೇ ಕಳೆದುಕೊಂಡಿದ್ದಾರೆ. ಸೈನಿಕ ಅಧ್ಯಯನ ಮತ್ತು ತೀವ್ರ ತರಬೇತಿಗಳ ಮೂಲಕ ಅವರು ಯಾವಾಗಲೂ ದೇಶ ಸೇವೆಗೆ ಸಿದ್ಧರಾಗಿರುತ್ತಾರೆ. ದೇಶದ ಭದ್ರತೆ, ಕಲ್ಯಾಣ ಮತ್ತು ಗೌರವವೇ ಅವರ ಸೇವೆ ಎಂದರು.
ಸಹಕುಲಾಧಿಪತಿ ಡಾ.ಎಂ.ಶಾಂತರಾಮ ಶೆಟ್ಟಿ, ಕುಲಪತಿ ಡಾ.ಎಂ.ಎಸ್.ಮೂಡಿತ್ತಾಯ, ಕುಲಸಚಿವ ಡಾ.ಹರ್ಷ ಹಾಲಹಳ್ಳಿ, ಕ್ಷೇಮ ಡೀನ್ ಡಾ.ಸಂದೀಪ್ ರೈ, ಡಾ.ಜಯಪ್ರಕಾಶ್ ಶೆಟ್ಟಿ, ನಿವೃತ್ತ ಕುಲಪತಿ ಡಾ.ಸತೀಶ್ ಕುಮಾರ್ ಭಂಡಾರಿ, ನಿಟ್ಟೆ ವಿವಿ ಅಧಿಕಾರಿ ಪ್ರಸನ್ನ ಹೆಗ್ಡೆ, ಎ.ಬಿ.ಶೆಟ್ಟಿ ಸ್ಮಾರಕ ದಂತ ಮಹಾವಿದ್ಯಾಲಯ ಡೀನ್ ಡಾ.ಮಿತ್ರಾ ಎನ್.ಹೆಗ್ಡೆ, ವಾಯುಸೇನೆ ಸಿಎಂಡಿಇಗಳಾದ ಎಸ್.ಕೆ.ಪೈ ಹಾಗೂ ವಿ.ಕೆ.ಶಶೀಂದ್ರನ್, ಕರ್ನಲ್ ಬಿ.ಎಸ್.ಘಿವಾರಿ, ಡಾ.ರಘುನಾಥ ಉಪ್ಪೋರ್, ಡಾ.ರಾಘವೇಂದ್ರ ಹುಚ್ಚನವರ್, ಗೌರವ ಕ್ಯಾಪ್ಟನ್ ಅಮ್ರೀಕ ಸಿಂಗ್, ಗೌರವ ಲೆಫ್ಟಿನೆಂಟ್ ವ್ಯಾಲಿ ಪಿರೇರಾ, ಸುಬೇದಾರ್ ದಯಾನಂದ, ಹವಾಲ್ದಾರ್ ಸುಜಯ್ ಪಿರೇರಾ, ಹವಾಲ್ದಾರ್ ಭಾಸ್ಕರ್, ಹವಾಲ್ದಾರ್ ರಂಜಿತ್, ಎನ್.ಕೆ.ಸುರೇಶ್, ಎನ್.ಕೆ.ರಾಧಾಕೃಷ್ಣ ಪಿ.ವಿ. ಹಾಗೂ ಪ್ರಸಾದ್ ಉಪಸ್ಥಿತರಿದ್ದರು.
ನಾಗರಿಕರ ಬೆಂಬಲವಿಲ್ಲದೆ ಯಾವುದೇ ಸೈನಿಕ ಪಡೆ ಯಶಸ್ಸು ಸಾಧಿಸಲು ಸಾಧ್ಯವಿಲ್ಲ. ಭಾರತೀಯ ಸೇನೆ ಸಾಹಸಮಯ ಹೋರಾಟದ ಮೂಲಕ ಶತ್ರು ರಾಷ್ಟ್ರವನ್ನು ಹೆಡೆಮುರಿ ಕಟ್ಟಿ ಸರಿಯಾದ ಪಾಠ ಕಲಿಸಿದೆ. ಸದ್ಯಕ್ಕೆ ವಿರಾಮ ಅಷ್ಟೇ, ಯುದ್ಧ ನಿಲ್ಲದು ಎಂದು ಪ್ರಧಾನಿ ಹೇಳಿದ್ದಾರೆ. ಭಾರತದ ಮುಂದೆ ಕದನ ವಿರಾಮಕ್ಕೆ ಅಂಗಲಾಚಿದ್ದ ಪಾಕ್, ಮುಂದಿನ ದಿನಗಳಲ್ಲಾದರೂ ಶಾಂತಿಯುತವಾಗಿ ಮುಂದುವರಿಯುತ್ತದೆಯೇ ಎಂದು ಕಾದು ನೋಡಬೇಕಿದೆ.
ನಿಟ್ಟೆ ವಿಶ್ವವಿದ್ಯಾಲಯ ಕುಲಾಧಿಪತಿ ಎನ್.ವಿನಯ್ ಹೆಗ್ಡೆ
ತಲೆಹೊರೆ ಕಾರ್ಮಿಕರ ಹಿತಕ್ಕೆ ಧಕ್ಕೆ ಸಲ್ಲ : ಧೋರಣೆ ಕೈಬಿಡಲು ಸರ್ಕಾರಕ್ಕೆ ಬಿಎಂಎಸ್ ಆಗ್ರಹ