‘ಭಾರತ್’​ ಸಿನಿಮಾದಿಂದ ಹೊರನಡೆದಿದ್ದ ಪ್ರಿಯಾಂಕಾ ಚೋಪ್ರಾಗೆ ಸಲ್ಮಾನ್​ ಖಾನ್​ ಧನ್ಯವಾದ ಸಲ್ಲಿಸಲು ಕಾರಣ ಇದು…

ಮುಂಬೈ: ಜೂನ್​ನಲ್ಲಿ ಬಿಡುಗಡೆಯಾಗಲಿರುವ ಬಾಲಿವುಡ್​ ಸಿನಿಮಾ ಭಾರತ್​ ಸಿನಿಮಾದಲ್ಲಿ ಮೊದಲು ನಾಯಕಿ ಪಾತ್ರ ಒಲಿದಿದ್ದು ಪ್ರಿಯಾಂಕಾ ಚೋಪ್ರಾ ಅವರಿಗೆ. ಆದರೆ ಅವರು ಭಾರತ್​ ಸಿನಿಮಾದಿಂದ ಹೊರನಡೆದಿದ್ದರು. ಬಳಿಕ ಆ ಪಾತ್ರವನ್ನು ಕತ್ರೀನಾ ಕೈಫ್​ ನಿರ್ವಹಿಸಿದ್ದಾರೆ.

ಶೂಟಿಂಗ್ ಪ್ರಾರಂಭವಾಗಿ ಕೆಲವೇ ದಿನಗಳಲ್ಲಿ ಅವರು ನ್ಯೂಯಾರ್ಕ್​ನ ಗೆಳೆಯ ನಿಕ್​ ಜೊನಾಸ್​ ಅವರೊಂದಿಗೆ ಮದುವೆಯಾಗಬೇಕಿತ್ತು. ಹಾಗಾಗಿ ಹೊರನಡೆದಿದ್ದರು.

ಈ ಬಗ್ಗೆ ಇತ್ತೀಚೆಗೆ ನಡೆದ ಸಮಾರಂಭವೊಂದರಲ್ಲಿ ನಟ ಸಲ್ಮಾನ್​ ಖಾನ್, ಭಾರತ್​ ಸಿನಿಮಾಕ್ಕೆ ಕತ್ರೀನಾ ಕೈಫ್​ ಹೇಗೆ ಬಂದರು ಎಂಬುದನ್ನು ಸವಿಸ್ತಾರವಾಗಿ ಹೇಳಿ, ಕೊನೆಯಲ್ಲಿ ಪ್ರಿಯಾಂಕಾ ಚೋಪ್ರಾಗೆ ಧನ್ಯವಾದ ಹೇಳಿದ್ದರು. ಹಾಗೆ ಕೊನೆಯಲ್ಲಿ ಪ್ರಿಯಾಂಕಾಗೆ ಧನ್ಯವಾದ ಹೇಳಿದ್ದು ವ್ಯಂಗ್ಯಕ್ಕೆ ಎಂದು ಹಲವರು ಭಾವಿಸಿದ್ದರು. ಅಲ್ಲದೆ, ನಿಮ್ಮ ಹೇಳಿಕೆ ಬಗ್ಗೆ ಸ್ಪಷ್ಟನೆ ನೀಡಿ ಎಂದು ಕೂಡ ಸಲ್ಮಾನ್​ಗೆ ಆಗ್ರಹಿಸಿದ್ದರು.

ಮತ್ತೀಗ ಮಾಧ್ಯಮವೊಂದರ ಜತೆ ಮಾತನಾಡಿದ ಸಲ್ಮಾನ್​ ಖಾನ್​, ನಾನು ಪ್ರಿಯಾಂಕಾಗೆ ಯಾವತ್ತಿಗೂ ಕೃತಜ್ಞತೆ ಸಲ್ಲಿಸಲು ಬಯಸುತ್ತೇನೆ. ಆಗಷ್ಟೇ ಸಿನಿಮಾ ಶೂಟಿಂಗ್​ ನಡೆಸಲು ಸಿದ್ಧತೆ ಮಾಡಿಕೊಳ್ಳಲಾಗುತ್ತಿತ್ತು. ಇನ್ನೇನು ಚಿತ್ರೀಕರಣ ಐದು ದಿನ ಬಾಕಿ ಇದೆ ಎನ್ನುವಾಗ ಪ್ರಿಯಾಂಕಾ ಚೋಪ್ರಾ ನನ್ನ ಬಳಿ ಬಂದು ನನಗೆ ಈ ಸಿನಿಮಾದಲ್ಲಿ ಕೆಲಸ ಮಾಡಲು ಆಗುತ್ತಿಲ್ಲ ಎಂದು ಹೇಳಿ ಹೋದರು. ಹಾಗೊಮ್ಮೆ ಪ್ರಿಯಾಂಕಾ ಭಾರತ್​ ಸಿನಿಮಾ ತೊರೆಯದಿದ್ದರೆ ಕತ್ರೀನಾ ಕೈಫ್​ ಅವರನ್ನು ಕರೆದುಕೊಂಡು ಬರಲು ನಮಗೆ ಹೇಗೆ ಸಾಧ್ಯವಾಗುತ್ತಿತ್ತು? ಹಾಗಾಗಿ ಪ್ರಿಯಾಂಕಾಗೆ ಧನ್ಯವಾದ ಹೇಳಿದ್ದೇನೆ ಎಂದು ತಿಳಿಸಿದರು.

ಭಾರತ್​ದಲ್ಲಿ ಪ್ರಿಯಾಂಕಾ ಸತ್ವಭರಿತ, ಪ್ರಮುಖ ಪಾತ್ರ ನಿರ್ವಹಿಸಬೇಕಿತ್ತು. ಆದರೆ ಅದರ ಬದಲಿಗೆ ಅವರು ನೈಜ ಜೀವನದ ಪತ್ನಿ ಪಾತ್ರ ಆಯ್ಕೆ ಮಾಡಿಕೊಂಡು ಹೊರನಡೆದರು. ಅದೂ ಕೂಡ ಸುಂದರ ಪಾತ್ರವೇ. ಆದರೆ ಕತ್ರೀನಾ ಪತ್ನಿ ಪಾತ್ರದ ಬದಲಿಗೆ ಭಾರತ್​ದಲ್ಲಿ ಅಭಿನಯಿಸುತ್ತಿದ್ದಾರೆ ಎಂದು ಸಲ್ಮಾನ್​ ಹೇಳಿದರು.
ಭಾರತ್​ ಸಿನಿಮಾದ ಟ್ರೇಲರ್​ ಬಿಡುಗಡೆಯಾದಾಗಲೂ ಪ್ರಿಯಾಂಕಾ ನನಗೆ ಫೋನ್​ ಮಾಡಿ ಮಾತನಾಡಲಿಲ್ಲ. ಸಿನಿಮಾದಿಂದ ಹೊರಹೋಗಲು, ನನ್ನೊಂದಿಗೆ ಮಾತನಾಡದೆ ಇರಲು ಅವರಿಗೆ ಏನಾದರೂ ಸಕಾರಣವಿದ್ದರೆ ಆ ಬಗ್ಗೆ ನಾನೇನೂ ಪ್ರಶ್ನಿಸುವುದಿಲ್ಲ. ಏನಾಗುತ್ತದೆಯೋ, ಅದು ಒಳ್ಳೆಯದಕ್ಕೇ ಆಗುತ್ತದೆ ಎಂದು ನಂಬುವವನು ನಾನು ಎಂದು ತಿಳಿಸಿದರು.

ಮದುವೆ ಕಾರಣಕ್ಕೆ ಬಿಟ್ಟು ಹೊರಟಾಗ ನಾನು ಡೇಟ್​ಗಳನ್ನು ನಿಮಗೆ ತಕ್ಕಂತೆ ಹೊಂದಿಸಿಕೊಡುತ್ತೇನೆ ಎಂದು ಕೂಡ ಹೇಳಿದ್ದೆ. ಆದರೆ ಪ್ರಿಯಾಂಕಾ ಒಪ್ಪಲಿಲ್ಲ. ನನ್ನ ಮದುವೆ ಸಿದ್ಧತೆಗಳಿಗೆ ಎಷ್ಟು ಸಮಯ ಬೇಕಾಗುತ್ತದೆಂದು ಹೇಳಲು ಸಾಧ್ಯವಿಲ್ಲ. ಹಾಗಾಗಿ ಸಿನಿಮಾವನ್ನೇ ಬಿಡುತ್ತೇನೆ ಎಂದು ಉತ್ತರಿಸಿದರು. ಇಲ್ಲಿ ಅದೆಷ್ಟೋ ಜನ ಸಿನಿಮಾಕ್ಕಾಗಿ ಪತಿಯನ್ನೂ ಬಿಡಲು ಸಿದ್ಧರಿದ್ದಾರೆ. ಆದರೆ ಪ್ರಿಯಾಂಕಾ ಪತಿಗಾಗಿ ಸಿನಿಮಾ ಬಿಟ್ಟರು ಎಂದು ಸಲ್ಮಾನ್​ ಖಾನ್​ ಹೇಳಿದರು.