ಪ್ರತಿಭಟನಾ ವೇಳೆ ಶಾಂತಿ ಕಾಪಾಡಿದ್ದಕ್ಕೆ ಧನ್ಯವಾದಗಳು, ಕಾನೂನು ಸುವ್ಯವಸ್ಥೆಗೆ ಧಕ್ಕೆ ಆಗಿಲ್ಲವೆಂದ ಗೃಹ ಸಚಿವರು

ಬೆಂಗಳೂರು: ಇವತ್ತಿನ ಪ್ರತಿಭಟನೆ ಶಾಂತಿಯುತವಾಗಿ ನಡೆದಿದೆ. ಎಲ್ಲೂ ಅಹಿತಕರ ಘಟನೆಗಳು ನಡೆದಿಲ್ಲ. ಪ್ರತಿಭಟನೆಗೆ ಕರೆ ಕೊಟ್ಟವರು ಸಹ ಶಾಂತಿ ಕಾಪಾಡಿದ್ದಾರೆ. ಅವರಿಗೆ ಧನ್ಯವಾದಗಳು ಎಂದು ಗೃಹ ಸಚಿವ ಬಸವರಾಜ ಬೊಮ್ಮಾಯಿ ತಿಳಿಸಿದರು.

ವಿಧಾನಸೌಧದಲ್ಲಿ ಮಾತನಾಡಿದ ಅವರು, ನಮ್ಮ ಪೊಲೀಸ್ ಇಲಾಖೆ ಪ್ರತಿಭಟನೆ ಶಾಂತಿಯುತವಾಗಿ ನಡೆಯುವಂತೆ ನೋಡಿಕೊಂಡಿದೆ. ಇದು ನಮ್ಮ ಪೊಲೀಸ್ ಇಲಾಖೆಯ ದಕ್ಷತೆಯನ್ನು ತೋರಿಸುತ್ತದೆ. ಅಶೋಕ ಪಿಲ್ಲರ್ ಬಳಿ ಕಲ್ಲೆಸೆತ ಆಗಿದೆ ಎನ್ನುತ್ತಿದ್ದಾರೆ, ಆಗಿಲ್ಲ ಎನ್ನುತ್ತಿದ್ದಾರೆ. ಅದರ ಬಗ್ಗೆ ಪರಿಶೀಲಿಸುತ್ತೇನೆ. ಒಟ್ಟಿನಲ್ಲಿ ಪ್ರತಿಭಟನೆಯಿಂದ ಕಾನೂನು ಸುವ್ಯವಸ್ಥೆಗೆ ಧಕ್ಕೆ ಆಗಿಲ್ಲ. ಬಿಜೆಪಿಯಿಂದ ಒಕ್ಕಲಿಗ ನಾಯಕರ ಟಾರ್ಗೆಟ್ ಎಂಬ ಕಾಂಗ್ರೆಸ್‌ ಆರೋಪ ವಿಚಾರಕ್ಕೆ ಪ್ರತಿಕ್ರಿಯಿಸಿ, ಎಲ್ಲ ಸಮುದಾಯದವರೂ ಈಗ ಮೆಚ್ಯೂರ್ ಆಗಿದ್ದಾರೆ. ಯಾವ ಸಮುದಾಯವನ್ನೂ ತಪ್ಪು ದಾರಿಗೆ ಎಳೆಯಲು ಆಗಲ್ಲ ಎಂದರು.

ಸಮುದಾಯಗಳನ್ನು ತಪ್ಪು ದಾರಿಗೆ ಎಳೆಯುವ ಪ್ರಯತ್ನಗಳು ಆಗುತ್ತಿರುತ್ತವೆ. ಆದರೆ ಸಮಾಜ ಜಾಗೃತವಾಗಿದೆ. ಅಂತಹ ಪ್ರಯತ್ನಗಳಿಗೆ ಸಮಾಜ ಬಲಿಯಾಗುವುದಿಲ್ಲ. ಸಮಾಜ ಎಲ್ಲವನ್ನೂ ಎದುರಿಸುವ ಶಕ್ತಿ ಹೊಂದಿದೆ. ಬಿಜೆಪಿಗೆ ಒಕ್ಕಲಿಗ ಸಮುದಾಯದಿಂದ ಆಕ್ರೋಶ ಎದುರಾಗುವ ಪ್ರಶ್ನೆಯೇ ಇಲ್ಲ. ಯಾರೂ ಯಾರನ್ನೂ ಯಾರ ಮೇಲೂ ಎತ್ತಿ ಕಟ್ಟಲು ಸಾಧ್ಯವಿಲ್ಲ. ಸಮಾಜ ಜಾಗೃತವಾಗಿರುವುದರಿಂದ ಆ ಪ್ರಶ್ನೆಯೇ ಬರುವುದಿಲ್ಲ. ಸಂಚಾರ ದುಬಾರಿ ದಂಡದ ಬಗ್ಗೆ ಸಿಎಂ ಗಮನದಲ್ಲಿ ಇದೆ. ಆ ಎಲ್ಲದರ ಬಗ್ಗೆ ‌ಅಧಿಕಾರಿಗಳ ಜತೆ ಚರ್ಚೆ ನಡೆಸುತ್ತಾರೆ. ದುಬಾರಿ ದಂಡ ಕಡಿತದ ಬಗ್ಗೆ ಸಿಎಂ ‌ಚಿಂತನೆ ಮಾಡುತ್ತಿದ್ದಾರೆ. ಅದರ ಬಗ್ಗೆ ಅವರೇ ಸ್ಪಷ್ಟನೆ ಕೊಡಲಿದ್ದಾರೆ ಎಂದು ಹೇಳಿದರು.

ಗೋವಾ ಸಿಎಂ ‌ಭೇಟಿಗೂ ಮುನ್ನ ಕೇಂದ್ರ ‌ಸಚಿವರನ್ನು ಭೇಟಿ ಮಾಡಬೇಕಿದೆ. ಕಳೆದ ‌ಬಾರಿ ಕೇಂದ್ರ ನೀರಾವರಿ ಸಚಿವರಿಗೆ ಮನವಿ ಕೊಟ್ಟು ಬಂದಿದ್ದೇವೆ. ಅವರು ಮೂರು ರಾಜ್ಯದ ಸಿಎಂಗಳನ್ನು ಕರೆಯುತ್ತೇನೆ ಎಂದಿದ್ದಾರೆ. ನಾನು ಕೂಡ ನಿನ್ನೆ ಗೋವಾ ಸಿಎಂ ಜತೆ ಮಾತನಾಡಿದ್ದೇನೆ. ಮಹದಾಯಿ ‌ಜಲ ವಿವಾದ ಕುರಿತ ಈಗ ಇರುವ ವ್ಯವಸ್ಥೆಯಲ್ಲಿ ಸ್ವಲ್ಪ ಹೊಸದರ ಬಗ್ಗೆ ಚಿಂತನೆ ಮಾಡಬೇಕು ಎಂದಿದ್ದಾರೆ. ಈಗ ಏನು ಮಾಡಬೇಕಾದರೂ ಕೇಂದ್ರ ಸರ್ಕಾರದ ಅಂತಿಮ ಮುದ್ರೆ ಬೀಳಬೇಕಿದೆ. ಈಗಾಗಲೇ ‌ಸಿಎಂ ಕೂಡ ಎರಡು ‌ರಾಜ್ಯದ ಸಿಎಂಗಳ ಜತೆ ಮಾತನಾಡಿದ್ದಾರೆ. ಶೀಘ್ರದಲ್ಲೇ ‌ಮೂರು ರಾಜ್ಯದ ಸಿಎಂಗಳನ್ನು ಸಭೆ ಕರೆಯುವ ನಿರೀಕ್ಷೆ ಇದೆ ಎಂದು ತಿಳಿಸಿದರು. (ದಿಗ್ವಿಜಯ ನ್ಯೂಸ್)

Leave a Reply

Your email address will not be published. Required fields are marked *