ಮನಸೂರೆಗೊಂಡ ಟಗರು ಕಾಳಗ

ತಂಬ್ರಹಳ್ಳಿ: ಸಮೀಪದ ಉಪನಾಯಕನಹಳ್ಳಿಯಲ್ಲಿ ಶ್ರೀ ಆಂಜನೇಯ ರಥೋತ್ಸವ ಪ್ರಯುಕ್ತ ಕುರಿಗಾಯಿ ಯುವಕ ಸಂಘದಿಂದ ಟಗರಿನ ಕಾಳಗ ಸ್ಪರ್ಧೆ ನಡೆಯಿತು.

ಹಾಲುಮತ ಸಮುದಾಯದ ತಾಲೂಕಾಧ್ಯಕ್ಷ ಬುಡ್ಡಿ ಬಸವರಾಜ ಚಾಲನೆ ನೀಡಿ ಮಾತನಾಡಿ, ಸರ್ಕಾರ ಕುರಿ ಸಾಕಣೆಗೆ ವಿಶೇಷ ಆದ್ಯತೆ ನೀಡಿ ಪ್ರೋತ್ಸಾಹ ನೀಡಬೇಕು. ಹಾಲುಮತ ಸಮುದಾಯದ ಮೂಲವೃತ್ತಿ ಕುರಿ ಸಾಕಣೆ. ಪ್ರಕೃತಿ ವಿಕೋಪಕ್ಕೆ ಬಲಿಯಾಗುವ ಕುರಿಗಳಿಗೆ ಪರಿಹಾರ ಘೋಷಣೆ ಮಾಡಬೇಕು ಎಂದು ಒತ್ತಾಯಿಸಿದರು.

ಕಾಳಗದಲ್ಲಿ 60ಕ್ಕೂ ಹೆಚ್ಚು ಟಗರು ಭಾಗವಹಿಸಿದ್ದವು. ಮೈಲಾರಿ, ದುರುಗಮ್ಮ, ಕಿಚ್ಚ, ರಾಯಣ್ಣ, ಹನುಮ, ಬುಲೆಟ್ ಬಸ್ಯ ಹೆಸರಿನ ಟಗರು ಅಂತಿಮ ಸುತ್ತು ಪ್ರವೇಶಿಸಿದ್ದವು. ಮುಂಡರಗಿ, ಹಡಗಲಿ, ದಾವಣಗೆರೆ, ಹರಿಹರ, ಹರಪನಹಳ್ಳಿ, ಹೊಸಪೇಟೆ, ಕೊಪ್ಪಳ ಸೇರಿ ವಿವಿಧ ತಾಲೂಕುಗಳಿಂದ ಬಂದಿದ್ದ ಟಗರುಗಳು ಕಾಳಗದಲ್ಲಿ ರೋಚಕ ಪ್ರದರ್ಶನ ನೀಡಿದವು. ಪ್ರೇಕ್ಷಕರು ಸಿಳ್ಳೆ, ಕೇಕೆ ಮತ್ತು ಘೋಷಣೆ ಕೂಗಿ ಸಂಭ್ರಮಿಸಿದರು. ಮುಖಂಡರಾದ ಮುಟುಗನಹಳ್ಳಿ ಕೊಟ್ರೇಶ್, ವಿ.ಮಂಜುನಾಥ, ಬಿ.ಎಂ.ರಾಜು, ಬಿ.ಗೋಣೆಪ್ಪ, ಎಚ್.ಆಂಜನೇಯಪ್ಪ, ಈರಪ್ಪ, ಡಿ.ಲೋಕೇಶ್, ಉಮೇಶ್, ಡಿ.ಕೃಷ್ಣ, ಎ.ಷಣ್ಮುಖ, ಅಂಜಿನಪ್ಪ, ಗೋಣೆಪ್ಪ, ಹುಲುಗಪ್ಪ ಇತರರಿದ್ದರು.