ಸೈನ್ಯ ಸೇರುವುದೇ ಗೌರವದ ಸಾಧನೆಯಾಗಲಿ

ತಾಳಿಕೋಟೆ: ಭಾರತಕ್ಕೆ ಸ್ವಾತಂತ್ರೃ ಬಂದಾಗಲೇ ಯುದ್ಧ ಸನ್ನಿವೇಶ ನಿರ್ಮಾಣವಾಗಿತ್ತು. ಅಂದಿನಿಂದ ಇಂದಿನವರೆಗೆ ದೇಶದಲ್ಲಿ ಯುದ್ಧ ಭೀತಿಯ ವಾತಾವರಣ ಇದ್ದರೂ ವೀರ ಸೈನಿಕರ ಕಾವಲಿನಿಂದ ದೇಶವಾಸಿಗಳು ನೆಮ್ಮದಿಯಾಗಿದ್ದೇವೆ ಎಂದು ಪ್ರೊ.ದಿನಕರ ಜೋಶಿ ಹೇಳಿದರು.

ಪಟ್ಟಣದ ನಿಮಿಷಾಂಬಾದೇವಿ ದೇವಸ್ಥಾನದಲ್ಲಿ ಸ್ವಾಭಿಮಾನಿ ಬಳಗ ಹಾಗೂ ವಿವಿಧ ಸಂಘಟನೆಗಳಿಂದ ಹಮ್ಮಿಕೊಂಡಿದ್ದ ನಿವೃತ್ತ ಯೋಧರ ಸನ್ಮಾನ ಸಮಾರಂಭದಲ್ಲಿ ಅವರು ಮಾತನಾಡಿದರು.

ಇಂದು ಸೈನಿಕರ ವಿರುದ್ಧ ಮಾತನಾಡುವುದು ್ಯಾಶನ್ ಆಗುತ್ತಿದೆ ಎಂದು ಖೇದ ವ್ಯಕ್ತಪಡಿಸಿದ ಅವರು, ಸೈನಿಕರಿಗೆ ಗೌರವ ಸಲ್ಲಿಸುವ ಕೆಲಸವಾಗಬೇಕು. ಮುಂದಿನ ಪೀಳಿಗೆ ಸೈನ್ಯ ಸೇರುವ, ದೇಶ ರಕ್ಷಣೆ ಹೊಣೆ ಹೊರಬೇಕು. ಯುವಕರಂತೆ ಯುವತಿಯರಿಗೂ ಸೈನ್ಯ ಸೇರಲು ಅವಕಾಶಗಳಿವೆ. ಸೈನ್ಯ ಸೇರುವುದೇ ಗೌರವದ ಸಾಧನೆಯಾಗಲಿ. ಪ್ರತಿ ಮನೆಯಲ್ಲೂ ಒಬ್ಬರು ಸೈನಿಕರಿರುವಂತಾಗಲಿ ಎಂದರು.

ಪುಲ್ವಾಮಾ ಘಟನೆಯಲ್ಲಿ ಹುತಾತ್ಮರ ಭಾವಚಿತ್ರಕ್ಕೆ ಗೌರವ ನಮನ ಸಲ್ಲಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು. ಪಟ್ಟಣದ 23 ನಿವೃತ್ತ ಸೈನಿಕರನ್ನು ಗೌರವಿಸಲಾಯಿತು. ನಿವೃತ್ತ ಸೈನಿಕರ ಸಂಘದ ಅಧ್ಯಕ್ಷ ಶ್ರೀಪಾಲ ಸಂಗ್ಮಿ, ಸಂಭಾಜಿ ಡಿಸಲೆ, ರಸೂಲ್ ಮುರಾಳ ಇದ್ದರು.

ಸ್ವಾಭಿಮಾನಿ ಬಳಗದ ಕಾಶಿನಾಥ ಸಜ್ಜನ, ಆರ್.ಎಸ್.ಪಾಟೀಲ, ಜೈಸಿಂಗ್ ಮೂಲಿಮನಿ, ಪ್ರಕಾಶ ಉಬಾಳೆ, ರಾಜು ಹಂಚಾಟೆ, ರಾಜು ವಿಜಾಪುರ, ಸಚಿನ್ ದಾಯಪುಲೆ, ಸಿದ್ದು ಅಸ್ಕಿ, ರವಿ ಕೋಳಕೂರ, ರಾಜು ಅಲ್ಲಾಪುರ, ಶಶಿಕಾಂತ ಮೂಕಿಹಾಳ, ಬಸವಕುಮಾರ ಸಿರ್ಸಿ, ರವಿ ಗೋನಾಳ, ವಸಂತ ಜೋಶಿ, ಸಂಗಮೇಶ ದೇಸಾಯಿ, ಸಂಗಮೇಶ ಪಾಲ್ಕಿ, ಯಲ್ಲು ದಾಯಪುಲೆ, ಆನಂದ ಮದರಕಲ್ಲ ಸೇರಿದಂತೆ ಮತ್ತಿತರರು ಇದ್ದರು.

ಸ್ವಾಭಿಮಾನ ಬಳಗದ ಜತೆಗೆ ಎಸ್.ಕೆ. ಪ್ರೌಢಶಾಲೆ ಶಿಕ್ಷಕ ಬಳಗ, ಸ್ವಂದನಾ ಸ್ನೇಹಿತರ ಬಳಗ, ಭಗತಸಿಂಗ್ ಯುವಕ ಮಂಡಳಿಯವರು ವೀರ ಸೈನಿಕರನ್ನು ಗೌರವಿಸಿದರು. ಪ್ರಶಾಂತ ಜನಾದ್ರಿ ನಿರೂಪಿಸಿದರು. ಶಫೀಕ್ ಮುರಾಳ ವಂದಿಸಿದರು.