ನಂಬಿದವರನ್ನು ದೇವರು ಕೈಬಿಡಲ್ಲ

ತಾಳಿಕೋಟೆ: ಪಂಢರಪುರಕ್ಕೆ 32 ವರ್ಷಗಳಿಂದ ಪಾದಯಾತ್ರೆ ಮೂಲಕ ತೆರಳುತ್ತಿರುವ ಬಳ್ಳಾರಿ ಜಿಲ್ಲೆಯ ಕೂಡಲಗಿಯ ಪಾಂಡುರಂಗ ಭಜನಾ ಮಂಡಳಿಯವರು ಪಟ್ಟಣದ ವಾಸವಿ ಕಲ್ಯಾಣ ಮಂಟಪದಲ್ಲಿ ವಾಸ್ತವ್ಯ ಮಾಡಿದ ಸಮಯದಲ್ಲಿ ನಗರೇಶ್ವರ ದೇವಸ್ಥಾನದಲ್ಲಿ ಪ್ರವಚನ, ಪಾಂಡುರಂಗನ ಕೀರ್ತನೆ, ಭಜನೆಗಳು ಅಹೋರಾತ್ರಿ ನಡೆದವು.

ಪ್ರವಚನ ನೀಡಿದ ತುಮಕೂರು ಜಿಲ್ಲೆ ತಿಪಟೂರಿನ ಕೃಷ್ಣಮೂರ್ತಿ ಸ್ವಾಮೀಜಿ, ದೇವರು ಭಕ್ತರ ಪರಾಧೀನ. ನಂಬಿದವರನ್ನು ಕೈ ಬಿಡುವುದಿಲ್ಲ. ಭಕ್ತ ಕುಂಬಾರನ ಮನೆಯ ಕೂಲಿಯಾಗಿ ಕೆಲಸ ಮಾಡಿದವನು ಪಂಢರಿನಾಥ. ಅವನನ್ನು ಅನುದಿನ ಸ್ಮರಣೆ ಮಾಡುವುದರಿಂದ ಭವಲೋಕದಿಂದ ಮುಕ್ತರಾಗುತ್ತೇವೆ ಎಂದರು.

ಪಟ್ಟಣದಲ್ಲಿ ಆರ್ಯ ವೈಶ್ಯ ಸಮಾಜದವರು ಯತ್ರಾರ್ಥಿಗಳಿಗೆ ತಂಗುವ ವ್ಯವಸ್ಥೆ, ಊಟ, ಉಪಚಾರದ ವ್ಯವಸ್ಥೆಯನ್ನು ಪ್ರತಿ ವರ್ಷ ಮಾಡುತ್ತ ಬಂದಿದ್ದಾರೆ. ಸಮಾಜದ ಗಣ್ಯರಾದ ಡಾ.ಎನ್.ಎಲ್. ಶೆಟ್ಟಿ, ಸತ್ಯನಾರಾಯಣ ತಾಳಪಲ್ಲೆ, ವೆಂಕಣ್ಣ ತಾಳಪಲ್ಲೆ, ವಾಸುದೇವ ಹೆಬಸೂರ, ರವಿ ತಾಳಪಲ್ಲೆ, ಸಂದೀಪಶೆಟ್ಟಿ, ಬದರಿನಾರಾಯಣ ಕನಕಗಿರಿ, ಪ್ರಶಾಂತ ಜನಾದ್ರಿ, ಸತ್ಯನಾರಾಯಣ ಕನಕಗಿರಿ, ಗೋವಿಂದಶೆಟ್ಟಿ, ಅರ್ಚಕ ವಸಂತ ಜೋಶಿ ಇತರರು ಇದ್ದರು.