ಬಜಾರ್‌ದಲ್ಲಿ ಯುವಕನ ಬರ್ಬರ ಕೊಲೆ

ತಾಳಿಕೋಟೆ: ಪಟ್ಟಣದ ಕತ್ರಿ ಮುಖ್ಯ ಬಜಾರ್‌ದಲ್ಲಿ ಬೆಳಗ್ಗೆ ಹೋಟೆಲ್‌ಗೆ ಟೀ ಕುಡಿಯಲು ಕರೆದು ಹಾಡುಹಗಲೇ ಯುವಕನ ಬರ್ಬರ ಕೊಲೆ ಮಾಡಲಾಗಿದೆ.

ಬಾಗಲಕೋಟೆ ಟೀಚರ್ ಕಾಲನಿಯ ಯಾಜಹ್ಮದ ಚಾಂದಸಾಬ ಲೋಣಿ (26) ಮೃತ ದುರ್ದೈವಿ. ಈತನ ಸಂಬಂಧಿಯೊಬ್ಬರ ಮಗಳಿಗೆ ಕೊಲೆ ಮಾಡಿದ ಆರೋಪಿ ಪ್ರೀತಿಸುತ್ತೇನೆ ಎಂದು ದುಂಬಾಲು ಬಿದ್ದಿದ್ದ. ಆಗ ಮೃತ ಯಾಜಹ್ಮದ ಚಾಂದಸಾಬ ಲೋಣಿ ಬಾಗಲಕೋಟೆಯಿಂದ ಬಂದು ತಿಳಿ ಹೇಳಿದ್ದನು. ಇದನ್ನೇ ಮನಸ್ಸಿನಲ್ಲಿಟ್ಟು ಕೊಂಡಿದ್ದ ಆರೋಪಿ ಜುಬೇರ ಮೈನುದ್ದಿನ ಮುಲ್ಲಾ ಚಹಾ ಕುಡಿಯಲು ಹೋಟೆಲ್‌ಗೆ ಬರುವಂತೆ ಹೇಳಿ ಚಹಾ ಕುಡಿಯಲು ಕುಳಿತುಕೊಳ್ಳುತ್ತಿದ್ದಂತೆ ಮಾರಕಾಸದಿಂದ ದೇಹದ ಮೂರ‌್ನಾಲ್ಕು ಭಾಗದಲ್ಲಿ ಹಲ್ಲೆ ಮಾಡಿ ಪರಾರಿಯಾಗಿದ್ದಾನೆ.

ತೀವ್ರವಾಗಿ ಗಾಯಗೊಂಡ ಯಾಜಅಹ್ಮದನಿಗೆ ಕೂಡಲೇ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಪ್ರಾಥಮಿಕ ಚಿಕಿತ್ಸೆ ಕೊಡಿಸಿ ಜಿಲ್ಲಾಸ್ಪತ್ರೆಗೆ ಸಾಗಿಸುವ ಮಾರ್ಗ ಮಧ್ಯದಲ್ಲಿ ಸಾವನ್ನಪ್ಪಿದ್ದಾನೆ. ಕೊಲೆ ಆರೋಪಿ ನಂತರ ತಾನೇ ಪೊಲೀಸರಿಗೆ ಶರಣಾಗಿದ್ದು ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಸ್ಥಳಕ್ಕೆ ಡಿ.ವೈ.ಎಸ್‌ಪಿ ಮಹೇಶ್ವರಗೌಡ, ಸಿಪಿಐ ರವಿ ಕಪ್ಪತನ್ನವರ, ಎಸ್‌ಐ ಗೋವಿಂದಗೌಡ ಪಾಟೀಲ ಭೇಟಿ ನೀಡಿ ತನಿಖೆ ಕೈಗೊಂಡಿದ್ದಾರೆ.