ಗಮನಸೆಳೆದ ಗಣವೇಷಧಾರಿಗಳ ಪಥ ಸಂಚಲನ

ತಾಳಿಕೋಟೆ: ರಾಷ್ಟ್ರೀಯ ಸ್ವಯಂ ಸೇವಕ ಸಂಘದ ನಗರ ಘಟಕದ ವಾರ್ಷಿಕೋತ್ಸವ ಅಂಗವಾಗಿ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಭಾನುವಾರ ಆಕರ್ಷಕ ಪಥ ಸಂಚಲನ ನಡೆಯಿತು.

100 ಕ್ಕೂ ಹೆಚ್ಚು ಗಣವೇಷಧಾರಿಗಳು ಪಟ್ಟಣದ ರಾಜವಾಡೆಯಿಂದ ಹೊರಟು, ಪಟ್ಟಣದ ಪ್ರಮುಖ ಬೀದಿಗಳಲ್ಲಿ ಸಂಚರಿಸಿ ಕನ್ನಡ ಶಾಲೆ ಮೈದಾನ ತಲುಪಿದರು. ನಂತರ ಗಣವೇಷಾಧಾರಿಗಳಿಂದ ಆಕರ್ಷಕ ಶಾರೀರಿಕ ಪ್ರದರ್ಶನ ನಡೆಯಿತು.

ಪಥ ಸಂಚಲನದ ದಾರಿಯುದ್ದಕ್ಕೂ ಮನೆ ಮನೆಗಳ ಮುಂದೆ ರಂಗೋಲಿ, ಭಗವಾಧ್ವಜಗಳು, ಸ್ವಾತಂತ್ರ್ಯ ಯೋಧರನ್ನು ನೆನಪಿಸುವ ಬಾಲ ವೇಷಧಾರಿಗಳು ಗಮನ ಸೆಳೆದರು. ವೀಕ್ಷಣೆಗಾಗಿ ರಸ್ತೆ ಬದಿಯ ಅಂಗಡಿಗಳ ಎದುರು ಸಾವಿರಾರು ಜನರು ಸೇರಿದ್ದರು. ಅಕ್ಕಪಕ್ಕದ ಅಂಗಡಿಗಳ ಮಾಳಿಗೆ, ಮೇಲ್ಮಹಡಿ ಮೇಲೆ ಜನರು ಕುಳಿತು ಪಥ ಸಂಚಲನ ವೀಕ್ಷಿಸಿದರು. ಪಥ ಸಂಚಲನದ ತಂಡಗಳು ಆಗಮಿಸುತ್ತಿದ್ದಂತೆ ಚಪ್ಪಾಳೆ ತಟ್ಟುವ ಮೂಲಕ ಸ್ವಾಗತ ಕೋರಲಾಯಿತು. ಪುಟ್ಟ ಮಕ್ಕಳೂ ಗಣವೇಷಧಾರಿಗಳಾಗಿದ್ದರೆ, ರಾಣಿ ಚನ್ನಮ್ಮ, ಒನಕೆ ಓಬವ್ವ, ಶಿವಾಜಿ ಮಹಾರಾಜರ ವೇಷಧಾರಿಗಳು ಗಮನ ಸೆಳೆದರು.

ನಂತರ ನಡೆದ ಬೌದ್ಧಿಕ ಕಾರ್ಯಕ್ರಮದಲ್ಲಿ ವಿಜಯಪುರ ವಿಭಾಗೀಯ ಶಾರೀರಿಕ ಪ್ರಮುಖ ಬಾಬು ಭಟ್ಕಳ ಮಾತನಾಡಿ, ದೇಶದಲ್ಲಿ ಸ್ವಾವಲಂಬನೆ ಇಲ್ಲದ ಜೀವನದಿಂದಾಗಿ ದೇಶ ಭಕ್ತಿಯ ಕೊರತೆ ಹೆಚ್ಚಾಗಿದೆ. ಸ್ವಾವಲಂಬನೆ ಇಲ್ಲದೆ ಹೋದರೆ ಸ್ವಾತಂತ್ರ್ಯ್ಕೂ ಬೆಲೆ ಇಲ್ಲದಂತಾಗುತ್ತದೆ. ನಾವು ಎಲ್ಲಿಯವರೆಗೂ ಸ್ವಾವಲಂಬನೆಯಾಗುವುದಿಲ್ಲವೋ ಅಲ್ಲಿವರೆಗೂ ಈ ದೇಶ ಬಡ ರಾಷ್ಟ್ರವಾಗಿ ಉಳಿಯುತ್ತದೆ ಎಂದರು.

ಗೊಂದಳಿ ಸಮಾಜದ ಅಧ್ಯಕ್ಷ ಶಿವಾಜಿ ಸೂರ್ಯವಂಶಿ ಅಧ್ಯಕ್ಷತೆ ವಹಿಸಿದ್ದರು. ದಿನಕರ ಜೋಶಿ, ಸಂಗಮೇಶ ಪಾಲ್ಕಿ, ಸಂಗಮೇಶ ಮದರಕಲ್ಲ, ಪ್ರದೀಪ ದೇಶಪಾಂಡೆ, ತಮ್ಮಣ್ಣ ದೇಶಪಾಂಡೆ, ಪ್ರದೀಪ ಬುಸಾರೆ, ಪ್ರಮೋದ ಅಗರವಾಲ ಇತರರು ಇದ್ದರು.

ಡಿವೈಎಸ್​ಪಿ ಮಹೇಶ್ವರಗೌಡ, ಸಿಪಿಐ ರವಿಕುಮಾರ ಕಪ್ಪತನ್ನವರ ನೇತೃತ್ವದಲ್ಲಿ ಪೊಲೀಸ್ ಬಂದೋಬಸ್ತ್ ಕೈಗೊಳ್ಳಲಾಯಿತು.