ಸಾಹಿತ್ಯ ಸಮ್ಮೇಳನ ಯಶಸ್ವಿಗೆ ಕೈಜೋಡಿಸಿ

ತಾಳಿಕೋಟೆ: ಪಟ್ಟಣದಲ್ಲಿ ನಡೆಯಲಿರುವ ಜಿಲ್ಲಾ 16ನೇ ಕನ್ನಡ ಸಾಹಿತ್ಯ ಸಮ್ಮೇಳನ ಸಾಹಿತಿಗಳ ಪರಿಚಯ ಮತ್ತು ನಾಡಿನ ನೆಲ, ಜಲ, ಭಾಷೆ ಬಗ್ಗೆ ಅಭಿಮಾನ ಮೂಡಿಸುವ ಕಾರ್ಯಕ್ರಮವಾಗಿದ್ದು, ಅದರ ಯಶಸ್ವಿಗೆ ಎಲ್ಲರೂ ಕೈಜೋಡಿಸಬೇಕು ಎಂದು ಜಿಪಂ ಸದಸ್ಯ ಬಸನಗೌಡ ವಣಕ್ಯಾಳ ಹೇಳಿದರು.

ಪಟ್ಟಣದ ಎಸ್.ಕೆ. ಕಾಲೇಜಿನ ವಿರಕ್ತ ಶ್ರೀ ಸಭಾಭವನದಲ್ಲಿ ಜಿಲ್ಲಾ ಸಾಹಿತ್ಯ ಸಮ್ಮೇಳನದ ಲಾಂಛನವನ್ನು ಶನಿವಾರ ಬಿಡುಗಡೆಗೊಳಿಸಿ ಮಾತನಾಡಿದರು.

ನೂತನ ತಾಳಿಕೋಟೆ ತಾಲೂಕು ಧಾರ್ಮಿಕ, ಸಾಂಸ್ಕೃತಿಕವಾಗಿ ಶ್ರೀಮಂತಿಕೆ ಹೊಂದಿದೆ. ಶರಣರು, ಸಂತರ ನಾಡಾಗಿದೆ. ಸಮ್ಮೇಳನ ಯಶಸ್ವಿಗೆ ವೈಯಕ್ತಿಕವಾಗಿ ಒಂದು ಲಕ್ಷ ರೂ. ನೀಡುವುದಾಗಿ ತಿಳಿಸಿದರು. ತಾಲೂಕು ಸಾಹಿತ್ಯ ಪರಿಷತ್ ಅಧ್ಯಕ್ಷೆ ಸುಮಂಗಲಾ ಕೋಳೂರ ಮಾತನಾಡಿ, ಸಮ್ಮೇಳನದ ಚಟುವಟಿಕೆ ಬಿರುಸಿನಿಂದ ಸಾಗಬೇಕಿದ್ದು, ತಾಲೂಕಿನ ಎಲ್ಲ ಕನ್ನಡಪರ ಸಂಘಟನೆಗಳು, ಜನಪ್ರತಿನಿಧಿಗಳು ಹಾಗೂ ತಾಲೂಕು ಆಡಳಿತ ಸಂಪೂರ್ಣ ಸಹಕಾರ ನೀಡಬೇಕು. ವಿವಿಧ ಸಮಿತಿಗಳ ಪದಾಧಿಕಾರಿಗಳು ಸಕ್ರಿಯರಾಗಿ ಕಾರ್ಯನಿರ್ವಹಿಸಬೇಕು ಎಂದು ಮನವಿ ಮಾಡಿದರು.

ಮುದ್ದೇಬಿಹಾಳ ತಾಲೂಕು ಸಾಹಿತ್ಯ ಪರಿಷತ್ ಅಧ್ಯಕ್ಷ ಎಂ.ಬಿ.ನಾವದಗಿ, ಪುರಸಭೆ ಸ್ಥಾಯಿ ಸಮಿತಿ ಅಧ್ಯಕ್ಷ ಪ್ರಭುಗೌಡ ಮದರಕಲ್ಲ, ನಿವೃತ್ತ ಪ್ರಾಚಾರ್ಯ ಡಾ.ಜಿ.ಎಂ. ವಾರಿ ಮಾತನಾಡಿದರು. ಲಾಂಛನ ರಚಿಸಿದ ಚಿತ್ರಕಲಾವಿದ ಾರುಖ ಘಟ್ನೂರ, ಛಾಯಾಗ್ರಾಹಕ ದೇವೇಂದ್ರ ಬಡಿಗೇರ ಅವರನ್ನು ಸನ್ಮಾನಿಸಲಾಯಿತು.

ಪುರಸಭೆ ಅಧ್ಯಕ್ಷೆ ಅಕ್ಕಮಹಾದೇವಿ ಕಟ್ಟಿಮನಿ, ತಾಪಂ ಅಧ್ಯಕ್ಷೆ ಚನ್ನಮ್ಮ ತಂಗಡಗಿ, ಸಮ್ಮೇಳನದ ಕಾರ್ಯಾಧ್ಯಕ್ಷ ದತ್ತಾತ್ರೇಯ ಹೆಬಸೂರ, ಮುರಿಗೆಪ್ಪ ಸರಶೆಟ್ಟಿ, ಅಶೋಕ ಬಳಗಾನೂರ, ನಿಕಟಪೂರ್ವ ಅಧ್ಯಕ್ಷೆ ಶಾಂತಾಬಾಯಿ ನೂಲಿಕರ, ರಾಜಶೇಖರ ಹಿರೇಮಠ, ಮಹೇಶ ಕಿತ್ತೂರ ಇತರರು ಇದ್ದರು. ಎಸ್‌ಕೆ ಬಿ.ಇಡಿ ಕಾಲೇಜಿನ ವಿದ್ಯಾರ್ಥಿಗಳು ಪ್ರಾರ್ಥಿಸಿದರು. ಗುಂಡೂರಾವ್ ಧನಪಾಲ ಸ್ವಾಗತಿಸಿದರು. ಅಪ್ಪಾಸಾಹೇಬಗೌಡ ಮೂಲಿಮನಿ ಲಾಂಛನದ ಮಾಹಿತಿ ನೀಡಿದರು. ಅಶೋಕ ಹಂಚಲಿ ನಿರೂಪಿಸಿದರು. ಶ್ರೀಕಾಂತ ಪತ್ತಾರ ವಂದಿಸಿದರು.