ಮತ್ತೆ ನಾಲ್ಕು ಬಾಲಕರ ರಕ್ಷಣೆ

ಫೆಚಾಬುರಿ(ಥಾಯ್ಲೆಂಡ್): ಕಳೆದ 15 ದಿನಗಳಿಂದ ಗುಹೆಯೊಳಗೆ ಸಿಲುಕಿದ್ದ 12 ಬಾಲಕರು ಮತ್ತು ಫುಟ್ಬಾಲ್ ತರಬೇತುದಾರನ ರಕ್ಷಣೆ ಕಾರ್ಯಾಚರಣೆಯ 2ನೇ ದಿನ, ನಾಲ್ಕು ಬಾಲಕರನ್ನು ಗುಹೆಯಿಂದ ಸುರಕ್ಷಿತವಾಗಿ ಹೊರಕ್ಕೆ ಕರೆತರಲಾಗಿದೆ. ಈ ಮೂಲಕ 8 ಬಾಲಕರು ಗುಹೆಯಿಂದ ಸುರಕ್ಷಿತವಾಗಿ ಹೊರಬಂದಿದ್ದಾರೆ. ಇನ್ನೂ 4 ಬಾಲಕರು ಮತ್ತು ತರಬೇತುದಾರ ಗುಹೆಯೊಳಗೆ ಉಳಿದಿದ್ದಾರೆ. ಮಂಗಳವಾರ ಅವರನ್ನು ಹೊರತರುವ ಸಾಧ್ಯತೆಯಿದೆ. ಸೋಮವಾರ ಬೆಳಗ್ಗೆ ರಕ್ಷಿಸಲ್ಪಟ್ಟಿರುವ ಬಾಲಕರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಜೂನ್ 23ರಂದು ಪ್ರವಾಸಕ್ಕೆ ತೆರಳಿದ್ದ ವೈಲ್ಡ್ ಬೋರ್ ಹೆಸರಿನ ಫುಟ್ಬಾಲ್ ತಂಡದ 12 ಬಾಲಕರು ಮತ್ತು ಒಬ್ಬ ತರಬೇತುದಾರ ಮಳೆಯಿಂದ ರಕ್ಷಣೆ ಪಡೆಯಲು ಥಾಮ್ ಲುಯಾಂಗ್ ಗುಹೆ ಪ್ರವೇಶಿಸಿದ್ದರು. ಮಳೆ ಹೆಚ್ಚಾದ ಕಾರಣ 4.5 ಕಿ.ಮೀ ಗುಹೆಯೊಳಗೆ ತೆರಳಿ ಬಂಡೆಯೊಂದರ ಮೇಲೆ ಆಶ್ರಯ ಪಡೆದಿದ್ದರು.