9 ದಿನ ನಾವು ಮಳೆ ನೀರು ಕುಡಿದು ಬದುಕಿದ್ದೆವು!

>

ಚಿಯಾಂಗ್ ರೈ (ಥಾಯ್ಲೆಂಡ್​): ಥಾಮ್​ ಲುಯಾಂಗ್​ ಗುಹೆಯಲ್ಲಿ ಸಿಲುಕಿದ್ದ ನಾವು ಮೊದಲ 9 ದಿನ ಮಳೆ ನೀರನ್ನೇ ಕುಡಿದು ಬದುಕಿದ್ದೆವು ಮತ್ತು ಅಲ್ಲಿಂದ ಹೊರಬರಲು ಪ್ರಯತ್ನ ನಡೆಸುತ್ತಿದ್ದೆವು ಎಂದು ವೈಲ್ಡ್​ ಬೋರ್​ ತಂಡದ ತರಬೇತುದಾರರ ಎಕಾಪೊಲ್ ಚಾಂಥವಾಂಗ್ ತಿಳಿಸಿದ್ದಾರೆ.

ಜೂನ್​ 23 ರಂದು ಗುಹೆಯೊಳಗೆ ಸಿಲುಕಿದ್ದ ವೈಲ್ಡ್​ ಬೋರ್​ ತಂಡದ 12 ಫುಟ್​ಬಾಲ್​ ಆಟಗಾರರನ್ನು ಮತ್ತು ತರಬೇತುದಾರರನ್ನು ಹಂತ ಹಂತವಾಗಿ ರಕ್ಷಿಸಲಾಗಿತ್ತು. ಜುಲೈ 10 ರಲ್ಲಿ ಎಲ್ಲರನ್ನೂ ರಕ್ಷಿಸಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಬುಧವಾರ ಎಲ್ಲರನ್ನೂ ಆಸ್ಪತ್ರೆಯಿಂದ ಡಿಸ್ಚಾರ್ಜ್​ ಮಾಡಲಾಯಿತು. ಈ ಸಂದರ್ಭದಲ್ಲಿ ಬಾಲಕರು ಪತ್ರಕರ್ತರೊಂದಿಗೆ ಗುಹೆಯಲ್ಲಿ ಕಳೆದ 2 ವಾರಗಳ ಅನುಭವವನ್ನು ಹಂಚಿಕೊಂಡರು.

ಬ್ರಿಟಿಷ್​ ಡೈವರ್​ಗಳು ನಮ್ಮ ಬಳಿ ಬರುವವರೆಗೆ ನಾವು ಗುಹೆಯ ಬಂಡೆಗಳಿಂದ ಕೆಳಗೆ ಸುರಿಯುತ್ತಿದ್ದ ಮಳೆ ನೀರನ್ನು ಕುಡಿದು ಬದುಕಿದ್ದೆವು. ಜತೆಗೆ ರಕ್ಷಣಾ ತಂಡ ಬರುವುದಕ್ಕೂ ಮೊದಲು ನಾವು ಗುಹೆಯಿಂದ ಹೊರಬರಲು ಪ್ರಯತ್ನ ನಡೆಸಿದ್ದೆವು. ಸುರಂಗ ಕೊರೆಯಲೂ ಯೋಚಿಸಿದ್ದೆವು. ನಾವು ಅಲ್ಲಿಂದ ಬದುಕಿ ಬಂದಿದ್ದೇ ಒಂದು ಪವಾಡ ಎಂದು ಎಕಾಪೊಲ್​ ಮಾಹಿತಿ ಹಂಚಿಕೊಂಡರು.

ವೈಲ್ಡ್​ ಬೋರ್​ ತಂಡದ 13 ಸದಸ್ಯರು ದೈಹಿಕವಾಗಿ ಮತ್ತು ಮಾನಸಿಕವಾಗಿ ಆರೋಗ್ಯವಂತರಾಗಿದ್ದಾರೆ ಎಂದು ವೈದ್ಯರು ಮಾಹಿತಿ ನೀಡಿದರು.

ಸುದ್ದಿಗೋಷ್ಠಿಯಲ್ಲಿ ಮಕ್ಕಳ ಮನಸ್ಸಿನ ಮೇಲೆ ಯಾವುದೇ ವಿಧದಲ್ಲಿ ಒತ್ತಡ ಬೀಳದಂತೆ ಅಧಿಕಾರಿಗಳು ಎಚ್ಚರಿಕೆ ವಹಿಸಿದ್ದರು. ಅದಕ್ಕಾಗಿ ಅವರು ಮಾಧ್ಯಮ ಪ್ರತಿನಿಧಿಗಳಿಂದ ಪ್ರಶ್ನೆಗಳನ್ನು ಸಂಗ್ರಹಿಸಿ ಮನೋವೈದ್ಯರಿಗೆ ಅದನ್ನು ಕಳುಹಿಸಿ ಅವರಿಂದ ಹಸಿರು ನಿಶಾನೆ ಸಿಕ್ಕ ಪ್ರಶ್ನೆಗಳನ್ನು ಮಾತ್ರ ಮಕ್ಕಳಿಗೆ ಕೇಳಲು ಅವಕಾಶ ನೀಡಲಾಯಿತು.

ಪತ್ರಕರ್ತರಿಂದ ದೂರವಿರಿಸಿ

ಮಕ್ಕಳನ್ನು ಕನಿಷ್ಠ ಒಂದು ತಿಂಗಳವರೆಗೆ ಪತ್ರಕರ್ತರ ಸಂಪರ್ಕಕ್ಕೆ ಸಿಗದಂತೆ ಕಾಪಾಡಿ ಎಂದು ಅವರ ಪಾಲಕರಿಗೆ ವೈದ್ಯರು ಸಲಹೆ ನೀಡಿದ್ದಾರೆ. (ಏಜೆನ್ಸೀಸ್​)