More

  ಕಲ್ಲಿನಿಂದ ಉದ್ಭವಿಸಿದ ಕಾಳಿಕಾಂಬ ದೇವಿ: ತಗ್ಗಹಳ್ಳಿಯಲ್ಲಿ ನೆಲೆಸಿರುವ ಶಕ್ತಿದೇವತೆ…!

  ಎಂ.ಪಿ. ವೆಂಕಟೇಶ್ ಮದ್ದೂರು
  ತಾಲೂಕಿನ ತಗ್ಗಹಳ್ಳಿ ಗ್ರಾಮದ ಪುರಾಣ ಪ್ರಸಿದ್ಧ ಶ್ರೀ ಕಾಳಿಕಾಂಬ ದೇವಿ ಭಕ್ತರ ಇಷ್ಟಾರ್ಥಗಳನ್ನು ಈಡೇರಿಸುವ ಮೂಲಕ ನಂಬಿದವರ ಪಾಲಿನ ದಯಾಮಯಿಯಾಗಿದ್ದಾಳೆ.
  ಇಲ್ಲಿಗೆ ಬಂದು ಶ್ರದ್ಧಾಭಕ್ತಿಯಿಂದ ಪೂಜೆ ಮಾಡಿದರೆ ವಿವಾಹ, ಸಂತಾನ ಪ್ರಾಪ್ತಿ, ವ್ಯಾಪಾರದಲ್ಲಿ ಲಾಭ, ವ್ಯಾಜ್ಯ ಸೇರಿದಂತೆ ಹಲವು ಸಮಸ್ಯೆಗಳಿಗೆ ಮುಕ್ತಿ ದೊರೆತು ಜೀವನದಲ್ಲಿ ನೆಮ್ಮದಿ ನೆಲೆಸುತ್ತದೆ ಎಂಬುವುದು ಭಕ್ತರ ನಂಬಿಕೆ. ಹೀಗಾಗಿಯೇ ಇಲ್ಲಿಗೆ ಮಂಡ್ಯ, ಮೈಸೂರು, ರಾಮನಗರ, ತುಮಕೂರು, ಚನ್ನರಾಯಪಟ್ಟಣ, ಹಾಸನ ಸೇರಿದಂತೆ ರಾಜ್ಯದ ವಿವಿಧ ಮೂಲೆಗಳಲ್ಲಿ ಭಕ್ತರು ಬಂದು ಹರಕೆ ಕಟ್ಟಿಕೊಳ್ಳುತ್ತಾರೆ. ಇಷ್ಟಾರ್ಥ ಈಡೇರಿದ ಬಳಿಕ ಅಭಿಷೇಕ, ವಿಶೇಷ ಪೂಜೆ, ರುದ್ರಾಭಿಷೇಕ, ದೇವಿಗೆ ಮಡಿಲು ತುಂಬುವುದು, ಮಾಂಗಲ್ಯ, ಸೀರೆ ನೀಡುವುದು ಸೇರಿದಂತೆ ಇತರ ಸೇವೆ ಮಾಡುತ್ತಾರೆ.
  ಪ್ರತಿ ಸೋಮವಾರ, ಶುಕ್ರವಾರ ಹಾಗೂ ಮಂಗಳವಾರ ದೇಗುಲದಲ್ಲಿ ವಿಶೇಷ ಪೂಜೆ ನಡೆಯಲಿದೆ. ಮಾರ್ಚ್ ಅಥವಾ ಏಪ್ರಿಲ್‌ನಲ್ಲಿ ಕೊಂಡೋತ್ಸವ, ರಥೋತ್ಸವ, ಜಾತ್ರಾ ಮಹೋತ್ಸವ ಸೇರಿದಂತೆ ಹಲವು ಧಾರ್ಮಿಕ ಕಾರ್ಯಕ್ರಮ ಮೂರು ದಿನ ಅದ್ದೂರಿಯಾಗಿ ನಡೆಯುತ್ತದೆ. ಈ ವೇಳೆ ತಗ್ಗಹಳ್ಳಿ ಸೇರಿದಂತೆ ಸುತ್ತಮುತ್ತಲಿನ ಹಲವಾರು ಗ್ರಾಮಗಳ ಗ್ರಾಮಸ್ಥರು ಹಬ್ಬದಲ್ಲಿ ಭಾಗಿಯಾಗುತ್ತಾರೆ. ಶಿವರಾತ್ರಿ ದಿನದಂದು ವಿಶೇಷ ಪೂಜೆ ನಡೆಯಲಿದ್ದು, ಮರುದಿನ ಸಾವಿರಾರು ಭಕ್ತರಿಗೆ ಅನ್ನಸಂತರ್ಪಣೆ ಹಮ್ಮಿಕೊಳ್ಳಲಾಗುತ್ತದೆ. ಕಾರ್ತಿಕ ಮಾಸದಲ್ಲಿ ವಿಶೇಷ ಪೂಜೆ ಹಾಗೂ ದೀಪೋತ್ಸವ, ವಿಜಯದಶಮಿಯಂದು ವಿಶೇಷ ಪೂಜಾ ಕೈಂಕರ್ಯ ನೆರವೇರಲಿದೆ.
  ಕೊಂಡೋತ್ಸವ ಅತ್ಯಂತ ವಿಶೇಷ: ಸಾಮಾನ್ಯವಾಗಿ ಕೊಂಡಕ್ಕೆ ಸೌದೆ ಹಾಕಿದ ನಂತರ ಬೆಂಕಿಯನ್ನು ಕಡ್ಡಿ ಪೊಟ್ಟಣ, ಕರ್ಪೂರ ದೀಪದಲ್ಲಿ ಬೆಂಕಿ ಹಚ್ಚಲಾಗುವುದು. ಆದರಿಲ್ಲಿ ಕಲ್ಲುಗಳನ್ನು ಒಂದಕ್ಕೊಂದು ಬಡಿದು ಬೆಂಕಿ ಬರುವಂತೆ ಮಾಡಿ ಕೊಂಡಕ್ಕೆ ಅಗ್ನಿ ಸ್ಪರ್ಶ ಮಾಡಲಾಗುತ್ತದೆ. ಜತೆಗೆ ಕೊಂಡ ಹಾಯುವ ಸಂದರ್ಭ ಕೊಂಡದ ಮೇಲೆ ತೇವ ಮಾಡಿದ ಮಡಿ ಬಟ್ಟೆಯನ್ನು ಹಾಕಲಾಗುತ್ತದೆ. ಮಡಿ ಬಟ್ಟೆ ಮೇಲೆ ಕೊಂಡವನ್ನು ದೇವರ ಪಟ ಹೊತ್ತ ಅರ್ಚಕ ಸೇರಿದಂತೆ 6 ಜನರು ಕೊಂಡ ಹಾಯುತ್ತಾರೆ. ಕೆಂಡದ ಮೇಲೆ ಹಾಕುವ ಮಡಿ ಬಟ್ಟೆಗೆ ಯಾವುದೇ ರೀತಿ ಹಾನಿಯಾಗದಿರುವುದು ಮತ್ತೊಂದು ವಿಶೇಷವಾಗಿದ್ದು, ಇದು ದೇವರ ಪವಾಡ ಎಂಬುದು ಇಲ್ಲಿನ ಭಕ್ತರ ನಂಬಿಕೆ. ಗ್ರಾಮದಲ್ಲಿ ಶ್ರೀ ಕಾಳಿಕಾಂಬ ದೇವಿ ಸಹೋದರ ಬೀರೇದೇವರ (ಮಂಟಿಲಿಂಗೇಶ್ವರ) ದೇವಸ್ಥಾನವಿದ್ದು, ಇಲ್ಲಿಯೂ ವಿಶೇಷ ಧಾರ್ಮಿಕ ಕಾರ್ಯಕ್ರಮ ನಡೆಯುತ್ತದೆ.

   

  ಕಲ್ಲಿನಿಂದ ಉದ್ಭವಿಸಿದ ಕಾಳಿಕಾಂಬ ದೇವಿ: ತಗ್ಗಹಳ್ಳಿಯಲ್ಲಿ ನೆಲೆಸಿರುವ ಶಕ್ತಿದೇವತೆ...!

  ದೇಗುಲದ ಐತಿಹ್ಯ: ಸುಮಾರು 600 ವರ್ಷಗಳ ಹಿಂದೆ ತಗ್ಗಹಳ್ಳಿ ಗ್ರಾಮದ ಅರಣ್ಯ ಪ್ರದೇಶದಿಂದ ಕೂಡಿತ್ತು. ನಾಗಮಂಗಲ ತಾಲೂಕಿನ ಚಿಣ್ಯದಿಂದ ವಲಸೆ ಬಂದ ಚಿನ್ನೊರು ಅವರು ವ್ಯಾಪಾರ ಮಾಡಲು ಹಳ್ಳಿಗಳಿಗೆ ತೆರಳುತ್ತಿದ್ದರು. ಮಧ್ಯಾಹ್ನವಾದ್ದರಿಂದ ವಿಶ್ರಾಂತಿ ತೆಗೆದುಕೊಳ್ಳಲು ಮತ್ತು ಅಡುಗೆ ಮಾಡುವ ಈ ಸ್ಥಳ ಸೂಕ್ತ ಎನಿಸಿದ ಕಾರಣ ಇವರ ಜತೆಗೆ ಕತ್ತೆ, ಕುದುರೆ ಕಟ್ಟಿಹಾಕಿ ಕೆಲವರು ವಿಶ್ರಾಂತಿ ಪಡೆಯಲು ಮುಂದಾದರೆ, ಇನ್ನೂ ಕೆಲವರು ಅಡುಗೆ ಸಿದ್ಧ ಮಾಡಲು ತಯಾರಾಗುತ್ತಾರೆ. ಈ ವೇಳೆ ಅಡುಗೆ ಮಾಡಲು ಕಲ್ಲುಗಳನ್ನು ಹುಡುಕ ತೊಡಗಿದಾಗ, ಒಂದು ಕಲ್ಲು ಈಗಿರುವ ದೇವರ ಸ್ಥಳದಲ್ಲಿ ಸಿಗುತ್ತದೆ. ಉಳಿದ 2 ಕಲ್ಲುಗಳನ್ನು ಬೇರೆ ಕಡೆ ಹುಡುಕಿ ತಂದು ಅಡುಗೆ ಮಾಡಲು ಸಿದ್ಧರಾಗುತ್ತಾರೆ. ಈ ವೇಳೆ ಅಡುಗೆ ಬೆಂಕಿಯಲ್ಲಿ ಬೇಯುತ್ತ್ತಿದ್ದಾಗ ಅಲ್ಲಿದ್ದ ಜನ, ಕತ್ತೆ, ಕುದುರೆಗಳು ಸ್ಥಳದಲ್ಲೇ ಮೂರ್ಛೆ ಹೋಗುತ್ತವೆ. ಇದನ್ನು ಗಮನಿಸಿದ ಸ್ಥಳೀಯರು ಏಕೆ ಹೀಗಾಯಿತು ಎಂದು ಪರಿಶೀಲನೆ ಮಾಡಲು ಮುಂದಾದಾಗ ಅಡುಗೆ ಮಾಡಲು ಬಳಸಿದ್ದ ಒಂದು ಕಲ್ಲು ಉದ್ಭವ ಮೂರ್ತಿಯಾಗಿತ್ತು. ಈ ಬಗ್ಗೆ ಅಲ್ಲಿನ ಜ್ಯೋತಿಷಿಗಳನ್ನು ಕೇಳಿದಾಗ, ದೇವರ ಮೂರ್ತಿ ಮೇಲೆ ಅಡುಗೆ ಮಾಡಲಾಗುತ್ತಿದ್ದು, ಅದನ್ನು ಕೆಳಗಿಳಿಸಿ ಉದ್ಭವಮೂರ್ತಿಗೆ ಪೂಜೆ ಸಲ್ಲಿಸುವಂತೆ ಹೇಳುತ್ತಾರೆ. ಉದ್ಭವಮೂರ್ತಿ ಪೂಜೆ ಸಲ್ಲಿಸಿದ ನಂತರ ಮೂರ್ಛೆ ಹೋಗಿದ್ದ ಜನ, ಕತ್ತೆಗಳು ಹಾಗೂ ಕುದುರೆಗಳು ಎಚ್ಚರಗೊಂಡವು ಎಂದು ಹೇಳಲಾಗುತ್ತದೆ.  ನಂತರ ಆ ಸ್ಥಳದಲ್ಲಿ ಸಣ್ಣದಾದ ಗುಡಿಸಲಿನಲ್ಲಿ ಶ್ರೀ ಕಾಳಿಕಾಂಬದೇವಿ ನೆಲೆಗೊಂಡು ನಂತರ ದಿನಗಳಲ್ಲಿ ಸುಂದರವಾದ ದೇಗುಲ ನಿರ್ಮಾಣಗೊಂಡಿತು ಎಂಬುದೇ ರೋಚಕ.

  ಕಲ್ಲಿನಿಂದ ಉದ್ಭವಿಸಿದ ಕಾಳಿಕಾಂಬ ದೇವಿ: ತಗ್ಗಹಳ್ಳಿಯಲ್ಲಿ ನೆಲೆಸಿರುವ ಶಕ್ತಿದೇವತೆ...!

  ಮಾರ್ಗ: ಮದ್ದೂರಿನಿಂದ 20 ಕಿಮೀ ದೂರದಲ್ಲಿ ದೇವಾಲಯವಿದ್ದು, ಕೊಪ್ಪ ಹಾಗೂ ಕೆಸ್ತೂರು ಮಾರ್ಗವಾಗಿ ಹೋದರೆ ದೇವಾಲಯ ಸಿಗಲಿದೆ. ಅಲ್ಲದೇ ಕೊಪ್ಪದಿಂದ 3 ಕಿ.ಮೀ. ದೂರದಲ್ಲಿ ಈ ದೇವಸ್ಥಾನವಿದೆ.

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts