ಬಗೆಹರಿಯಿತು ಟಿಇಟಿ ತಾರತಮ್ಯ

ಹುಬ್ಬಳ್ಳಿ: ಸಾರ್ವಜನಿಕ ಶಿಕ್ಷಣ ಇಲಾಖೆಯ ಕೇಂದ್ರೀಕೃತ ದಾಖಲಾತಿ ಘಟಕ ಈಚೆಗೆ ನಡೆಸಿದ ಶಿಕ್ಷಕರ ಅರ್ಹತಾ ಪರೀಕ್ಷೆ (ಟಿಇಟಿ) ಫಲಿತಾಂಶದಲ್ಲಿನ ಗೊಂದಲಗಳನ್ನು ನಿವಾರಿಸಿ, ಕೂದಲೆಳೆ ಅಂತರದಲ್ಲಿ ಅನರ್ಹರಾಗಿದ್ದ ಅನೇಕ ಅಭ್ಯರ್ಥಿಗಳಿಗೆ ಈಗ ಅರ್ಹತೆಯ ಪಟ್ಟ ನೀಡಿದೆ.

ಕನ್ನಡ ಹಾಗೂ ಇಂಗ್ಲಿಷ್ ಮಾಧ್ಯಮದ ಪ್ರಶ್ನೆಪತ್ರಿಕೆಗಳಲ್ಲೂ ಹಲವು ಪ್ರಶ್ನೆಗಳ ಕೀ ಉತ್ತರದಲ್ಲಿ ತಾರತಮ್ಯ ಮಾಡಲಾಗಿತ್ತು. ಸುತ್ತೋಲೆ ಪ್ರಕಾರ 150 ಅಂಕಗಳಿಗೆ ಶೇ. 60 (ಅಂದರೆ 90 ಅಂಕ) ಪಡೆದ ಸಾಮಾನ್ಯ ಅಭ್ಯರ್ಥಿ ಅರ್ಹರು, ಅದೇ ರೀತಿ 75 (ಶೇ. 55) ಅಂಕ ಪಡೆದ ಎಸ್ಸಿ-ಎಸ್ಟಿ, ಕೆಟಗರಿ- 1 ಅಭ್ಯರ್ಥಿಗಳು ಅರ್ಹರು ಎಂದು ತಿಳಿಸಲಾಗಿತ್ತು. ಆದರೆ, 93ನೇ ಪ್ರಶ್ನೆಗೆ ಕೊಟ್ಟ ಆಯ್ಕೆ ಉತ್ತರವೆಲ್ಲವೂ ತಪ್ಪಾಗಿದ್ದಕ್ಕೆ ಇಲಾಖೆ ನಿಯಮಾವಳಿಯಂತೆ ನಡೆದುಕೊಳ್ಳದೆ ಹಲವು ಅಭ್ಯರ್ಥಿಗಳನ್ನು ಅನರ್ಹರಾಗಿ ಮಾಡಿತ್ತು. ಈ ಬಗ್ಗೆ ರಾಜ್ಯಾದ್ಯಂತ ಅನೇಕ ಅಭ್ಯರ್ಥಿಗಳು ಆಕ್ಷೇಪ ವ್ಯಕ್ತಪಡಿಸಿ ಅಳಲು ತೋಡಿಕೊಂಡಿದ್ದರು.

ವಿಜಯವಾಣಿ ಈ ಬಗ್ಗೆ ‘ಟಿಇಟಿ ಅಭ್ಯರ್ಥಿಗಳಿಗೆ ಬರೆ’ ಶೀರ್ಷಿಕೆಯಡಿ ಬುಧವಾರ ಸಮಗ್ರ ವರದಿ ಮಾಡಿತ್ತು. ವರದಿಗೆ ಸ್ಪಂದಿಸಿರುವ ಇಲಾಖೆ ಒಂದು ಅಂಕದಲ್ಲಿ ಅನರ್ಹರಾದವರಿಗೆ ಅರ್ಹರು ಎಂದು ಆನ್​ಲೈನ್​ನಲ್ಲಿ ಸರಿಪಡಿಸಿದೆ.