ಪುಲ್ವಾಮಾ ರೀತಿ ದಾಳಿಗೆ ಸಂಚು

ಶ್ರೀನಗರ: ಜಮ್ಮು- ಕಾಶ್ಮೀರದಲ್ಲಿ ಲೋಕಸಭೆಯ ಎರಡನೇ ಹಂತದ ಮತದಾನಕ್ಕೆ ಸಿದ್ಧತೆ ನಡೆಯುತ್ತಿರುವ ಸಮಯದಲ್ಲೇ ಪುಲ್ವಾಮಾ ಮಾದರಿಯಲ್ಲಿ ಮತ್ತೊಂದು ದಾಳಿಗೆ ಉಗ್ರರು ಸಿದ್ಧತೆ ನಡೆಸಿದ್ದಾರೆ ಎಂದು ಗುಪ್ತಚರ ಸಂಸ್ಥೆಗಳು ಎಚ್ಚರಿಕೆ ನೀಡಿವೆ. ಮೋಟಾರ್ ಸೈಕಲ್ ಬಳಸಿ ಹೆದ್ದಾರಿಯಲ್ಲಿ ವಾಹನಗಳ ಮೇಲೆ ಬಾಂಬ್ ದಾಳಿ ನಡೆಸಲು ಉಗ್ರರು ಸಿದ್ಧತೆ ನಡೆಸಿದ್ದಾರೆ. ಏ.18ರಂದು ನಡೆಯಲಿರುವ 2ನೇ ಹಂತದ ಮತದಾನಕ್ಕೂ ಮುನ್ನ ದಾಳಿ ನಡೆಸಿ, ಮತದಾನ ಪ್ರಮಾಣ ಕುಗ್ಗಿಸುವುದು ಉದ್ದೇಶ ಎಂದು ಹೇಳಲಾಗಿದೆ.

ಸ್ಥಳೀಯರ ಮೇಲೂ ದಾಳಿ?: ಭದ್ರತಾ ಪಡೆಗಳ ವಾಹನ ಮಾತ್ರವಲ್ಲ, ಸ್ಥಳೀಯರು ಪ್ರಯಾಣಿಸುವ ವಾಹನಗಳ ಮೇಲೂ ದಾಳಿ ನಡೆಯಬಹುದು. ಬತ್ವಾರಾ ಮತ್ತು ತಾತೂ ಪ್ರದೇಶದಲ್ಲಿ ದಾಳಿ ನಡೆಯುವ ಸಾಧ್ಯತೆ ಇದೆ ಎಂದು ಗುಪ್ತಚರ ವರದಿ ಎಚ್ಚರಿಸಿದೆ. ಈ ಹಿನ್ನೆಲೆಯಲ್ಲಿ ರಾಜ್ಯಾದ್ಯಂತ ಕಟ್ಟೆಚ್ಚರ ಘೋಷಿಸಲಾಗಿದೆ. ಏ.11ರ ಮೊದಲ ಹಂತದ ಮತದಾನದಲ್ಲಿ ಭಾರಿ ಸಂಖ್ಯೆಯಲ್ಲಿ (ಶೇ. 56) ಮತದಾರರು ಹಕ್ಕು ಚಲಾಯಿಸಿದ್ದರು. ಎರಡನೇ ಹಂತದ ಮತದಾನ ವೇಳೆ ಆತಂಕ ಸೃಷ್ಟಿಸುವುದು ಉಗ್ರರ ಉದ್ದೇಶವಾಗಿದೆ.

ಲೆಥ್​ಪೊರಾ ದಾಳಿ ಆರೋಪಿ ಬಂಧನ

2017ರ ಡಿಸೆಂಬರ್​ನಲ್ಲಿ ಪುಲ್ವಾಮಾದ ಲೆಥ್​ಪೊರಾದಲ್ಲಿ ಜೈಷ್-ಎ- ಮೊಹಮ್ಮದ್ ಉಗ್ರರು ನಡೆಸಿದ್ದ ದಾಳಿ ಪ್ರಕರಣದ ತನಿಖೆ ನಡೆಸುತ್ತಿರುವ ರಾಷ್ಟ್ರೀಯ ತನಿಖಾ ದಳ (ಎನ್​ಐಎ) ಇರ್ಷಾದ್ ಅಹ್ಮದ್ ರೇಶಿ ಎಂಬ ಆರೋಪಿ ಯನ್ನು ಬಂಧಿಸಿದೆ. ಪುಲ್ವಾಮಾ ಜಿಲ್ಲೆಯ ರತ್ನಿಪೊರಾ ನಿವಾಸಿಯಾದ ಈತ ಪ್ರಕರಣದಲ್ಲಿ ಬಂಧಿತನಾದ ಐದನೇ ಆರೋಪಿಯಾಗಿದ್ದಾನೆ. ಈತ ಜೈಷ್ ಕಮಾಂಡರ್ ನೂರ್ ಅಹ್ಮದ್ ತಾಂತ್ರೆಗೆ ಆಪ್ತ ಎಂದು ಎನ್​ಐಎ ಮೂಲಗಳು ಹೇಳಿವೆ.

One Reply to “ಪುಲ್ವಾಮಾ ರೀತಿ ದಾಳಿಗೆ ಸಂಚು”

Comments are closed.