ಬಂದರು, ತೈಲ ಟ್ಯಾಂಕರ್​, ವಾಣಿಜ್ಯ ಹಡಗುಗಳ ಮೇಲೆ ದಾಳಿ ನಡೆಸಲು ಉಗ್ರರ ಸ್ಕೆಚ್​

ನವದೆಹಲಿ: ಪಾಕಿಸ್ತಾನದಲ್ಲಿರುವ ಲಷ್ಕರ್​ ಎ ತೋಯೆಬಾ ಉಗ್ರರು ತೈಲ ಟ್ಯಾಂಕರ್​ಗಳು ಮತ್ತು ವಾಣಿಜ್ಯ ಹಡಗುಗಳನ್ನು ಹೈಜಾಕ್​ ಮಾಡಿ ಅದರ ಮೂಲಕ ಭಾರತದ ಬಂದರುಗಳ ಮೇಲೆ ದಾಳಿ ನಡೆಸಲು ಯೋಜನೆ ರೂಪಿಸುತ್ತಿದ್ದಾರೆ ಎಂಬ ಆಘಾತಕಾರಿ ವಿಷಯ ಬಹಿರಂಗವಾಗಿದೆ.

ಈ ವರ್ಷದ ಜೂನ್​ನಿಂದ ಲಷ್ಕರ್​ ಎ ತೋಯೆಬಾ ಉಗ್ರರು ಸಮುದ್ರದಲ್ಲಿ ದಾಳಿ ನಡೆಸುವ ಕುರಿತು ಸಮಗ್ರ ತರಬೇತಿ ಪಡೆಯುತ್ತಿದ್ದಾರೆ. ಅದರಲ್ಲಿ ಸಮುದ್ರದಲ್ಲಿ ಈಜುವುದು, ಆಳಸಮುದ್ರದಲ್ಲಿ ಡೈವಿಂಗ್​ ಮಾಡುವುದನ್ನು ಅವರು ಕಲಿಯುತ್ತಿದ್ದಾರೆ. ಪಾಕ್​ನ ಶೇಖ್​ಪುರ, ಲಾಹೋರ್​, ಫೈಸಲಾಬಾದ್​ಗಳಲ್ಲಿ ಅವರಿಗೆ ತರಬೇತಿ ನೀಡಲಾಗುತ್ತಿದೆ. ಜೈಷ್​ ಎ ಮೊಹಮ್ಮದ್​ ಉಗ್ರ ಸಂಘಟನೆ ಸಹ ಸಮುದ್ರದಲ್ಲಿ ದಾಳಿ ನಡೆಸಲು ಅಗತ್ಯವಿರುವ ತರಬೇತಿ ನೀಡುತ್ತಿದೆ ಎಂದು ಪಾಕ್​ನಲ್ಲಿ ನಡೆಯುತ್ತಿರುವ ಭಯೋತ್ಪಾದಕ ಚಟುವಟಕೆಗಳ ಮೇಲೆ ನಿಗಾವಹಿಸಿರುವ ಅಧಿಕಾರಿಗಳು ತಿಳಿಸಿದ್ದಾರೆ.

ಈ ಹಿನ್ನೆಲೆಯಲ್ಲಿ ಭಾರತೀಯ ನೌಕಾಪಡೆ ಮತ್ತು ಕರಾವಳಿ ರಕ್ಷಣ ಪಡೆ ಸಮುದ್ರದಲ್ಲಿ ಕಟ್ಟೆಚ್ಚರ ವಹಿಸಿದ್ದು, 7,517 ಕಿ.ಮೀ. ಉದ್ದದ ಕರಾವಳಿಯನ್ನು ರಕ್ಷಿಸಲು ಯೋಜನೆ ರೂಪಿಸುತ್ತಿದೆ. 2008ರ ನವೆಂಬರ್​ 26ರಂದು ಉಗ್ರರು ಸಮುದ್ರ ಮಾರ್ಗದ ಮೂಲಕ ಮುಂಬೈಗೆ ಪ್ರವೇಶಿಸಿ ವಿಧ್ವಂಸಕ ಕೃತ್ಯ ನಡೆಸಿದ್ದರು. (ಏಜೆನ್ಸೀಸ್​)