ಭಾರತಕ್ಕೆ ಉಗ್ರಾತಂಕ

ನವದೆಹಲಿ: ಶ್ರೀಲಂಕಾದಲ್ಲಿ ಉಗ್ರರು ನಡೆಸಿದ ಸರಣಿ ಬಾಂಬ್ ದಾಳಿ ಬೆನ್ನಲ್ಲೇ ಭಾರತದಲ್ಲೂ ಉಗ್ರರು ದಾಳಿಗೆ ಸಿದ್ಧತೆ ನಡೆಸಿರುವ ವಿಚಾರವನ್ನು ಗುಪ್ತಚರ ಇಲಾಖೆ ಬಹಿರಂಗಪಡಿಸಿದೆ. ಈ ಹಿನ್ನೆಲೆಯಲ್ಲಿ ಭದ್ರತಾ ಪಡೆಗಳು ಕಟ್ಟೆಚ್ಚರ ವಹಿಸಿವೆ.

ಉಗ್ರರು ದೇಶದ ಹಲವೆಡೆ ದಾಳಿ ನಡೆಸಲು ಸಿದ್ಧತೆ ನಡೆಸಿದ್ದಾರೆ. ಈಗಾಗಲೇ ಮೂವರು ಉಗ್ರರು ನೇಪಾಳ ಗಡಿಯ ಮೂಲಕ ಭಾರತವನ್ನು ಪ್ರವೇಶಿಸಿದ್ದಾರೆ. ಸದ್ಯ ಅವರು ಜಮ್ಮು-ಕಾಶ್ಮೀರದ ಬಂಡಿಪೊರದಲ್ಲಿದ್ದಾರೆ ಎನ್ನಲಾಗಿದೆ. ಇನ್ನೊಂದೆಡೆ ಬಾಂಗ್ಲಾದೇಶದ ಉಗ್ರ ಸಂಘಟನೆ ಜಮಾತ್ ಉಲ್ ಮುಜಾಹಿದ್ದೀನ್ ಬಾಂಗ್ಲಾದೇಶ್(ಜೆಎಂಬಿ) ಮಹಿಳಾ ಆತ್ಮಾಹುತಿ ಬಾಂಬರ್​ಗಳನ್ನು ತಯಾರು ಮಾಡಿದ್ದು, ಇವರು ಬಾಂಗ್ಲಾ, ಭಾರತ ಮತ್ತು ಮ್ಯಾನ್ಮಾರ್​ನ ಬೌದ್ಧ ದೇವಾಲಯಗಳನ್ನು ಗುರಿಯಾಗಿರಿಸಿಕೊಂಡು ದಾಳಿ ನಡೆಸುವ ಸಾಧ್ಯತೆಯಿದೆ ಎಂದು ಗುಪ್ತಚರ ಇಲಾಖೆ ಎಚ್ಚರಿಸಿದೆ. ಮೂಲಗಳ ಪ್ರಕಾರ, ಸಾಜಿದ್ ಮಿರ್ ಎನ್ನುವ ಉಗ್ರ ನೇಪಾಳದ ಕಠ್ಮಂಡುವಿನಿಂದ ಬಂಡಿಪೊರಾಗೆ ಮೂವರು ಉಗ್ರರನ್ನು ಕರೆದುಕೊಂಡು ಬಂದಿದ್ದಾನೆ.

ಎಲ್​ಇಟಿ ಮತ್ತು ಜೈಷ್ ಉಗ್ರರಿಗೆ ಬಂಡಿಪೊರ ಪ್ರಮುಖ ಕೇಂದ್ರ ಎನ್ನಲಾಗಿದೆ. ಬಾಂಗ್ಲಾದೇಶದ ಮಹಿಳಾ ಆತ್ಮಾಹುತಿ ಬಾಂಬರ್​ಗಳ ಬಗ್ಗೆಯೂ ಆತಂಕ ಹೆಚ್ಚಾಗಿದ್ದು, ಮೇ 18ರಂದು ಬುದ್ಧ ಪೂರ್ಣಿಮೆ ದಿನ ಭಾರತದಲ್ಲಿ ದಾಳಿ ನಡೆಸಲು ಯೋಜನೆ ರೂಪಿಸಿದ್ದಾರೆ ಎನ್ನಲಾಗಿದೆ.

ಐಸಿಸ್-ಕೆಗೆ ವಿಶ್ವಸಂಸ್ಥೆ ನಿಷೇಧ: ಐಸಿಸ್​ನ ದಕ್ಷಿಣ ಏಷ್ಯಾದ ಶಾಖೆ (ಐಸಿಸ್-ಕೆ)ಗೆ ವಿಶ್ವಸಂಸ್ಥೆ ನಿಷೇಧ ಹೇರಿದೆ. ಅಲ್ ಕೈದಾದೊಂದಿಗಿನ ಸಂಬಂಧ, ಅಫ್ಘಾನಿಸ್ತಾನ ಮತ್ತು ಪಾಕಿಸ್ತಾನದಲ್ಲಿ ದಾಳಿ ನಡೆಸಿ 150ಕ್ಕೂ ಹೆಚ್ಚು ಜನರನ್ನು ಹತ್ಯೆ ಮಾಡಿರುವ ಹಿನ್ನೆಲೆಯಲ್ಲಿ ನಿಷೇಧ ಹೇರಲಾಗಿದೆ. ವಿಶ್ವಸಂಸ್ಥೆ ಭದ್ರತಾ ಮಂಡಳಿಯ ಸಮಿತಿ ಈ ಬಗ್ಗೆ ನಿರ್ಧಾರ ತೆಗೆದುಕೊಂಡಿದೆ. ನಿಷೇಧ ಹಿನ್ನೆಲೆಯಲ್ಲಿ ಉಗ್ರ ಸಂಘಟನೆಗೆ ಸೇರಿರುವ ಆಸ್ತಿಯನ್ನು ವಶಪಡಿಸಿಕೊಳ್ಳುವುದು, ಸಂಚಾರ ನಿರ್ಬಂಧ ಮತ್ತು ಶಸ್ತ್ರಾಸ್ತ್ರಗಳ ಖರೀದಿ ಮತ್ತು ಮಾರಾಟಕ್ಕೆ ನಿಷೇಧ ಹೇರಲು ಸಾಧ್ಯವಾಗಲಿದೆ. ಐಸಿಸ್-ಕೆ ಸಂಘಟನೆಯನ್ನು ತೆಹ್ರಿಕ್ ಎ ತಾಲಿಬಾನ್​ನ ಮಾಜಿ ಕಮಾಂಡರ್ 2015ರಲ್ಲಿ ಆರಂಭಿಸಿದ್ದ. ಇದು ಅಫ್ಘಾನಿಸ್ತಾನ, ಪಾಕಿಸ್ತಾನದಲ್ಲಿ ಹಲವು ದಾಳಿಗಳನ್ನು ನಡೆಸಿತ್ತು.

ಸಯೀದ್ ಸಂಬಂಧಿ ಮಕ್ಕಿ ಬಂಧನ

ಮುಂಬೈ ಉಗ್ರ ದಾಳಿಯ ಸಂಚುಕೋರ ಹಫೀಜ್ ಸಯೀದ್​ನ ಭಾವನನ್ನು ಪಾಕಿಸ್ತಾನ ಪೊಲೀಸರು ಬಂಧಿಸಿದ್ದಾರೆ. ಜಮಾತ್ ಉದ್​ದಾವಾದ ರಾಜತಾಂತ್ರಿಕ, ಅಂತಾರಾಷ್ಟ್ರೀಯ ವಿಚಾರಗಳ ನಿರ್ವಹಣೆ ಮಾಡುವ ಮತ್ತು ಫಲಾಹ್ ಎ ಇನ್ಸಾನಿಯತ್​ನ ಅಧ್ಯಕ್ಷ ಅಬ್ದುಲ್ಲಾ ರೆಹಮಾನ್ ಮಕ್ಕಿಯನ್ನು ಮಂಗಳವಾರ ಬಂಧಿಸಲಾಗಿದೆ. ಪಾಕಿಸ್ತಾನ ಸರ್ಕಾರವನ್ನು ನಿಂದಿಸಿದ ಮತ್ತು ದ್ವೇಷ ಭಾಷಣ ಮಾಡಿದ ಆರೋಪ ದಲ್ಲಿ ಈತನನ್ನು ಬಂಧಿಸಲಾಗಿದೆ. ಸರ್ಕಾರ ಕಾನೂನು ಬಾಹಿರ ಸಂಘಟನೆಗಳ ವಿರುದ್ಧ ನಡೆಸುತ್ತಿರುವ ಕಾರ್ಯಾಚರಣೆಯ ಭಾಗವಾಗಿಯೂ ಈ ಕ್ರಮ ಕೈಗೊಳ್ಳಲಾಗಿದೆ.1

Leave a Reply

Your email address will not be published. Required fields are marked *