ವಿಜಯವಾಣಿ ವರದಿ ಪರಿಣಾಮ: ಪ್ರವಾಸಿ ತಾಣಗಳಲ್ಲಿ ಭದ್ರತೆ ಹೆಚ್ಚಳಕ್ಕೆ ತ್ವರಿತ ಕ್ರಮ

ಬೆಂಗಳೂರು: ರಾಜ್ಯದಲ್ಲಿನ ಪಾರಂಪರಿಕ ಪ್ರವಾಸಿ ಹಾಗೂ ಧಾರ್ವಿುಕ ಸ್ಥಳಗಳಲ್ಲಿ ಭದ್ರತಾ ಲೋಪಕ್ಕೆ ಚುರುಕು ಮುಟ್ಟಿದ್ದು, ರಾಜ್ಯದ ಹಲವೆಡೆ ಮಂಗಳವಾರ ಹಲವು ಇಲಾಖೆಗಳ ಅಧಿಕಾರಿಗಳು ಪರಿಶೀಲನೆ ನಡೆಸಿ ಕ್ರಮ ಕೈಗೊಂಡಿದ್ದಾರೆ.

‘ಭಯದ ನೆರಳಲ್ಲಿ ಪ್ರವಾಸಿ ತಾಣಗಳು’ ಎಂಬ ಶೀರ್ಷಿಕೆಯಲ್ಲಿ ವಿಜಯವಾಣಿ ಮಂಗಳವಾರ ವಿಶೇಷ ವರದಿ ಪ್ರಕಟಿಸಿತ್ತು. ಈ ಸಂಬಂಧ ಹಲವು ಪ್ರವಾಸಿ ತಾಣಗಳಲ್ಲಿ ಲೋಪ-ದೋಷಗಳನ್ನು ಸರಿಪಡಿಸುವ ಬಗ್ಗೆ ವಿವಿಧ ಕ್ರಮಗಳು ಜರುಗಿದ್ದು ಸಂಚಲನ ಸೃಷ್ಟಿಯಾಗಿದೆ.

ಹಾಸನ ಜಿಲ್ಲೆಯ ಬೇಲೂರು-ಹಳೇಬೀಡಿಗೆ ಮಂಗಳವಾರ ಭೇಟಿ ನೀಡಿದ್ದ ಕೇಂದ್ರ ಪುರಾತತ್ವ ವಿಭಾಗದ ಮಹಾನಿರ್ದೇಶಕಿ ಉಷಾ ಶರ್ವ, ಸ್ಮಾರಕಗಳ ಕಳಪೆ ನಿರ್ವಹಣೆಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಲ್ಲದೆ, ನಿರ್ದಾಕ್ಷಿಣ್ಯ ಕ್ರಮಕೈಗೊಳ್ಳುವುದಾಗಿ ಎಚ್ಚರಿಕೆ ನೀಡಿದರು. ಅಲ್ಲದೆ ಇಲ್ಲಿನ ವಸ್ತುಸಂಗ್ರಹಾಲಯದಲ್ಲಿ 18 ವರ್ಷಗಳಿಂದ ಸಹಾಯಕ ಪುರಾತತ್ವ ಅಧಿಕಾರಿಯಾಗಿ ಕಾರ್ಯನಿರ್ವಹಿಸುತ್ತಿದ್ದ ಅರವಜಿ ಪಾರ್ಥನ್ ಅವರನ್ನು ಮಂಗಳವಾರ ರಾತ್ರಿಯೇ ದೆಹಲಿಗೆ ದಿಢೀರ್ ವರ್ಗಾವಣೆ ಮಾಡಲಾಗಿದೆ.

ವಸ್ತುಸಂಗ್ರಹಾಲಯ ಹೊರತುಪಡಿಸಿ ಮತ್ತೆಲ್ಲೂ ಕುಡಿಯುವ ನೀರಿನ ಘಟಕ ಇಲ್ಲದಿರುವುದಕ್ಕೆ ಪುರಾತತ್ವ ವಿಭಾಗದ ಅಧೀಕ್ಷಕಿ ಮೂರ್ತೆಶ್ವರಿ ಅವರನ್ನು ಉಷಾ ತರಾಟೆಗೆ ತೆಗೆದುಕೊಂಡರು. ದೇಗುಲದ ಭದ್ರತೆ ಬಗ್ಗೆ ಕಳವಳ ವ್ಯಕ್ತಪಡಿಸಿದ ಅವರು, ಲೋಹಶೋಧಕ ಯಂತ್ರ ಅಳವಡಿಸಲು ಸೂಚಿಸಿದರಲ್ಲದೆ, 3 ತಿಂಗಳೊಳಗೆ ಸರಿಪಡಿಸದಿದ್ದರೆ ಅಮಾನತು ಕ್ರಮ ಎದುರಿಸಬೇಕಾಗುತ್ತದೆ ಎಂಬ ಎಚ್ಚರಿಕೆಯನ್ನೂ ನೀಡಿದರು.

ಪ್ರಿ-ವೆಡ್ಡಿಂಗ್ ಶೂಟ್​ಗೆ ಕಡಿವಾಣ: ಚಿತ್ರದುರ್ಗದ ವಿವಿ ಸಾಗರ ಜಲಾಶಯದ ಇಂಜಿನಿಯರ್ ಪಿ.ಟಿ.ಲಿಂಗರಾಜು, ಸಿಬ್ಬಂದಿ ಜತೆ ಮಂಗಳವಾರ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದಾರೆ. ಜತೆಗೆ ವಿವಿ ಸಾಗರದ ಡ್ಯಾಂ ಮೇಲೆ ನಡೆಯುವ ಪ್ರಿ-ವೆಡ್ಡಿಂಗ್ ಶೂಟ್​ಗೆ ಕಡಿವಾಣ ಹಾಕಲು ಮುಂದಾಗಿದ್ದಾರೆ. ಕೋಟೆ, ಚಂದ್ರವಳ್ಳಿ ಸೇರಿ ಪ್ರವಾಸಿ ತಾಣಗಳಲ್ಲಿ ಕಟ್ಟುನಿಟ್ಟಿನ ತಪಾಸಣೆ, ಅಪರಿಚಿತರ ಚಲನವಲನ ಗಮನಿಸಲು ಬೀಟ್ ಹೆಚ್ಚಿಸುವಂತೆ ಎಸ್ಪಿ ಡಾ.ಕೆ.ಅರುಣ್ ಸೂಚಿಸಿದ್ದಾರೆ. ನಾಯಕನಹಟ್ಟಿ ತಿಪ್ಪೇರುದ್ರಸ್ವಾಮಿ ದೇವಸ್ಥಾನದಲ್ಲಿ ಮೆಟಲ್ ಡಿಟೆಕ್ಟರ್ ಅಳವಡಿಸಲು ವ್ಯವಸ್ಥಾಪನ ಸಮಿತಿ ಅಧ್ಯಕ್ಷ ರವಿಶಂಕರ್ ಚಿಂತಿಸಿದ್ದಾರೆ.

ಸವದತ್ತಿ ತಾಲೂಕಿನ ಆದಿಶಕ್ತಿ ಶ್ರೀ ರೇಣುಕಾ ಯಲ್ಲಮ್ಮ ದೇವಸ್ಥಾನದ ಆವರಣದಲ್ಲಿ ಭದ್ರತಾ ವ್ಯವಸ್ಥೆ ಚುರುಕುಗೊಳಿಸಲು ದೇವಸ್ಥಾನದ ಕಾರ್ಯನಿರ್ವಾಹಕ ಅಧಿಕಾರಿ ರವಿ ಕೋಟಾರಗಸ್ತಿ ನಿರ್ಧರಿಸಿದ್ದು, ಲೋಕಸಭೆ ಚುನಾವಣೆ ನೀತಿಸಂಹಿತೆ ತೆರವಾದ ನಂತರ ಎಲ್ಲ ಇಲಾಖೆ ಅಧಿಕಾರಿಗಳ ಸಭೆ ನಡೆಸಿ ಅಂತಿಮ ತೀರ್ಮಾನ ಕೈಗೊಳ್ಳಲಾಗುವುದು ಎಂದು ತಿಳಿಸಿದ್ದಾರೆ.

ಭಯದ ನೆರಳಲ್ಲಿ ರಾಜ್ಯದ ಪ್ರವಾಸಿ ತಾಣಗಳು: ಇದು ವಿಜಯವಾಣಿ ರಿಯಾಲಿಟಿ ಚೆಕ್​