ಬೆಂಗಳೂರು/ಚಾಮರಾಜನಗರ: ಕರ್ನಾಟಕ ಸಹಿತ ದೇಶದ ಹಲವೆಡೆ 12 ಶಂಕಿತ ಉಗ್ರರ ಬಂಧನದ ಬೆನ್ನಲ್ಲೇ ಐಸಿಸ್ ಜತೆ ನೇರ ಸಂಪರ್ಕ ಹೊಂದಿದ್ದ ಪ್ರಮುಖ ಆರೋಪಿ ಬೆಂಗಳೂರಿನ ಮೆಹಬೂಬ್ ಪಾಷಾ ಚಾಮರಾಜನಗರದ ಗುಂಡ್ಲುಪೇಟೆಯಲ್ಲಿ ಸಿಸಿಬಿ ಬಲೆಗೆ ಬಿದ್ದಿದ್ದಾನೆ. ಕರ್ನಾಟಕದ ವಿವಿಧ ಜಿಲ್ಲೆಗಳ 11 ಶಂಕಿತ ಉಗ್ರರು ಈತನ ಜತೆ ಕೈಜೋಡಿಸಿರುವ ಆಘಾತಕಾರಿ ವಿಚಾರ ಬಯಲಾಗಿದೆ.
ಜಿಹಾದಿ ಗ್ಯಾಂಗ್ ಬಂಧನದ ಬಳಿಕ ಸಿಸಿಬಿ ಪೊಲೀಸರು ಒಟ್ಟು 17 ಶಂಕಿತ ಉಗ್ರರ ವಿರುದ್ಧ ಎಫ್ಐಆರ್ ದಾಖಲಿಸಿದ್ದಾರೆ. ಇದರಲ್ಲಿ ಬೆಂಗಳೂರಿನ ಗುರುಪ್ಪನಪಾಳ್ಯದ ಮೆಹಬೂಬ್ ಪಾಷಾ, ಮಹಮದ್ ಹನೀಶ್, ಮಹ್ಮದ್ ಮನ್ಸೂರ್, ಇಮ್ರಾನ್ ಖಾನ್, ಜಬೀವುಲ್ಲಾ, ಹುಸೇನ್, ಶಿವಮೊಗ್ಗದ ತೀರ್ಥಹಳ್ಳಿಯ ಮುಜಾವಿರ್ ಹುಸೇನ್, ಅಬ್ದುಲ್ ಮತೀನ್ ಅಹಮದ್, ಮೈಸೂರಿನ ಚನ್ನಪಟ್ಟಣದ ಅನೀಸ್, ಕೋಲಾ ರದ ಸಲೀಂ ಖಾನ್ ಹಾಗೂ ರಾಮನಗರದ ಅಜಾಜ್ ಪಾಷಾ ಹೆಸರು ಉಲ್ಲೇಖಿಸಲಾಗಿದೆ.
ಪ್ರಮುಖ ಆರೋಪಿ ಮೆಹಬೂಬ್, ದಕ್ಷಿಣ ಭಾರತದಲ್ಲಿ ಐಸಿಸ್ ಸಂಘಟನೆ ಬಲವರ್ಧನೆಗೆ ಹಾಗೂ ವಿಧ್ವಂಸಕ ಕೃತ್ಯ ಎಸಗಲು ವ್ಯವಸ್ಥಿತ ಜಾಲ ಕಟ್ಟುವ ಹೊಣೆ ಹೊತ್ತಿದ್ದ. ಇದಕ್ಕಾಗಿ ಬೆಂಗಳೂರು, ಚಾಮರಾಜನಗರ, ಶಿವಮೊಗ್ಗ, ಕೋಲಾರ, ರಾಮನಗರ ಹಾಗೂ ಶಿವಮೊಗ್ಗ ಸೇರಿ ಹೊರವಲಯದ ಪ್ರದೇಶಗಳನ್ನೇ ಸ್ಲೀಪರ್ ಸೆಲ್ ಮಾಡಿಕೊಂಡಿದ್ದ. ಈತ ಸಂಬಂಧಿಕರು ಹಾಗೂ ಸ್ನೇಹಿತರನ್ನು ಉಗ್ರ ಕೃತ್ಯಕ್ಕೆ ಪ್ರಚೋದಿಸಿ, ಬಳಸಿಕೊಂಡಿದ್ದ ವಿಚಾರ ತನಿಖೆಯಲ್ಲಿ ಬೆಳಕಿಗೆ ಬಂದಿದೆ. ಎಫ್ಐಆರ್ನಲ್ಲಿರುವ ಕರ್ನಾಟಕದ 11 ಶಂಕಿತ ಉಗ್ರರ ಪೈಕಿ ನಾಲ್ವರು ಮಾತ್ರ ಸಿಕ್ಕಿಬಿದ್ದಿದ್ದಾರೆ. ಉಳಿದವರು ತಲೆಮರೆಸಿಕೊಂಡಿದ್ದು, ಕಾರ್ಯಾಚರಣೆ ಮುಂದುವರಿದಿದೆ. ಅವರು ಸಿಕ್ಕ ಬಳಿಕ ರಾಜ್ಯದಲ್ಲಿರುವ ಉಗ್ರರ ಮಾಹಿತಿ ಮತ್ತಷ್ಟು ಹೊರಬೀಳಲಿದೆ ಎಂದು ತನಿಖಾಧಿಕಾರಿಗಳು ಹೇಳಿದ್ದಾರೆ.
ಮೆಹಬೂಬ್ಗೆ ಐಸಿಸ್ ನಂಟು!: ಬೆಂಗಳೂರಿನ ಗುರುಪ್ಪನಪಾಳ್ಯದಲ್ಲಿ ವಾಸವಿದ್ದ ಮೆಹಬೂಬ್ ಪಾಷಾ, ಐಸಿಸ್ ಜತೆ ನೇರ ಸಂಪರ್ಕ ಇಟ್ಟುಕೊಂಡು ಸಂಘಟನೆ ಬಲವರ್ಧನೆಯಲ್ಲಿ ತೊಡಗಿದ್ದ. ಗುರುಪ್ಪನಪಾಳ್ಯದಲ್ಲಿರುವ ಆತನ ಬಾಡಿಗೆ ಮನೆಯಲ್ಲಿ ಹಲವು ಬಾರಿ ಸಭೆ ನಡೆಸಿ ರ್ಚಚಿಸಿದ್ದ. ಐಸಿಸ್ ಜತೆ ನಿರಂತರ ಸಂಪರ್ಕದಲ್ಲಿ ಇರುವ ಬಗ್ಗೆ ಹಲವು ಸಾಕ್ಷ್ಯ ಲಭ್ಯವಾಗಿವೆ ಎಂದು ಸಿಸಿಬಿ ಮೂಲಗಳು ಖಚಿತಪಡಿಸಿವೆ.
ಹಿಂದು ಮುಖಂಡರೇ ಟಾರ್ಗೆಟ್!: ಶಂಕಿತ ಉಗ್ರರು ಕೇರಳ, ತಮಿಳುನಾಡು ಹಾಗೂ ರಾಜ್ಯದಲ್ಲಿ ಹಿಂದುಪರ ಸಂಘಟನೆಗಳ ಮುಖಂಡರನ್ನು ಹತ್ಯೆ ಮಾಡಲು ಟಾರ್ಗೆಟ್ ಮಾಡಿಕೊಂಡಿದ್ದರು. ಇದಕ್ಕೆ ಮೆಹಬೂಬ್ ಪಾಷಾ ಕಾರ್ಯತಂತ್ರ ರೂಪಿಸಿದ್ದ. ಯಾರನ್ನು ಗುರಿ ಮಾಡಿಕೊಂಡಿದ್ದರು ಎಂಬುದು ಖಚಿತವಾಗಿಲ್ಲ. ಈ ನಿಟ್ಟಿನಲ್ಲಿ ಸಿಸಿಬಿ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ.
ಬಂಧಿತರು ಬಾಯ್ಬಿಟ್ಟ ಸತ್ಯ: ತಮಿಳುನಾಡು ಹಿಂದು ಸಂಘಟನೆಯ ಮುಖ್ಯಸ್ಥನ ಕೊಲೆ ಪ್ರಕರಣದಲ್ಲಿ ಕೋರ್ಟ್ಗೆ ಹಾಜರಾಗದೆ ಬೆಂಗಳೂರಿನಲ್ಲಿ ತಲೆಮರೆಸಿಕೊಂಡಿದ್ದ ಕ್ವಾಜಾ ಮೈನುದ್ದೀನ್, ಇಮ್ರಾನ್ ಖಾನ್ ಹಾಗೂ ಮಹ್ಮದ್ ಝೈದ್ ಎಂಬುವರನ್ನು ಜ. 7ರಂದು ತಮಿಳುನಾಡು ಪೊಲೀಸರು ಬಂಧಿಸಿದ್ದರು. ಅವರು ವಿಚಾರಣೆ ವೇಳೆ ಶಂಕಿತ ಉಗ್ರ ಮೆಹಬೂಬ್ ಪಾಷಾ ಕುರಿತು ಸುಳಿವು ನೀಡಿದ್ದರು.
ಹಿಂದು ಪರ ಸಂಘಟನೆಯ ಮುಖ್ಯಸ್ಥರ ಹತ್ಯೆಗೈಯ್ಯಲು ಹಾಗೂ ಕೋಮು ಗಲಭೆ ಸೃಷ್ಟಿಸಲು ತಯಾರಿ ನಡೆಸಿದ್ದ ವಿಚಾರವನ್ನು ಬಾಯ್ಬಿಟ್ಟಿದ್ದರು. ಐಸಿಸ್ ಜತೆ ಸಿಮಿ ನಂಟು?: ಉಗ್ರರ ಗ್ಯಾಂಗ್ನ 10ನೇ ಆರೋಪಿ ಮನ್ಸೂರ್ ಎಂಬುವನು ನಿಷೇಧಿತ ಸಿಮಿ ಸಂಘಟನೆಯ ಸದಸ್ಯ. ಆತನ ಮೂಲಕ ವಿದೇಶದಲ್ಲಿರುವ ಐಸಿಸ್ ಉಗ್ರರ ಜತೆ ಮೆಹಬೂಬ್ ನೇರ ಸಂಪರ್ಕ ಬೆಳೆಸಿಕೊಂಡಿದ್ದ. ತಮಿಳುನಾಡಿನ ಹಿಂದುಪರ ಮುಖಂಡ ಸುರೇಶ್ ಹತ್ಯೆ ಕೇಸ್ನಲ್ಲಿ ಚೆನ್ನೈನ ಜೈಲಿನಲ್ಲಿರುವ ಶಂಕಿತ ಉಗ್ರ ಅಜಾಜ್ ಪಾಷಾ ಗ್ಯಾಂಗ್ ಕುರಿತು ಬಾಯಿಬಿಟ್ಟಿದ್ದಾನೆ. ಐಸಿಸ್ ಜತೆ ಸಿಮಿ ಸಂಘಟನೆ ನಂಟು ಇರುವ ಬಗ್ಗೆ ತಮಿಳುನಾಡು ಪೊಲೀಸರು ಶಂಕೆ ವ್ಯಕ್ತಪಡಿಸಿದ್ದಾರೆ ಎಂದು ಸಿಸಿಬಿ ಅಧಿಕಾರಿಯೊಬ್ಬರು ವಿಜಯವಾಣಿಗೆ ಮಾಹಿತಿ ನೀಡಿದ್ದಾರೆ.
ಮೆಹಬೂಬ್ ಸುಳಿವು ಸಿಕ್ಕಿದ್ದು ಹೇಗೆ?
ಭಯೋತ್ಪಾದನಾ ಚಟುವಟಿಕೆಯಲ್ಲಿ ಮೆಹಬೂಬ್ ಪಾಷಾ ಜತೆ ಕೋಲಾರದ ಸಲೀಂ ಖಾನ್ ಎಂಬಾತ ಶಾಮೀಲಾಗಿರುವ ಕುರಿತು ಸಿಸಿಬಿಗೆ ಸುಳಿವು ಸಿಕ್ಕಿತ್ತು. 10 ದಿನಗಳ ಹಿಂದೆಯಷ್ಟೇ ಕೋಲಾರದಿಂದ ಚಾಮರಾಜನಗರದಲ್ಲಿರುವ ಮೆಹಬೂಬ್ ಪಾಷಾ ಮೊಬೈಲ್ಗೆ ಕರೆ ಹೋಗಿರುವ ಮಾಹಿತಿ ಲಭ್ಯವಾಗಿತ್ತು. ಫೋನ್ ಕರೆಗಳ ಜಾಡು ಹಿಡಿದು ಶೋಧ ನಡೆಸಿದ್ದ ತನಿಖಾಧಿಕಾರಿಗಳಿಗೆ ಗುಂಡ್ಲುಪೇಟೆ ಹಾಗೂ ತಮಿಳುನಾಡು ಗಡಿಭಾಗದಲ್ಲಿ ಅಡಗಿರುವುದು ಗೊತ್ತಾಗಿದೆ. ಅಲ್ಲದೇ, ಮೆಹಬೂಬ್ ಪಾಷಾ ತನ್ನ ಮೊಬೈಲ್ನಿಂದ ಮೌಲ್ವಿ ಸದಖತ್ನನ್ನು ಸಂರ್ಪಸಿದ್ದ ಸುಳಿವಿನ ಮೇರೆಗೆ ಸೆರೆ ಹಿಡಿದಿದ್ದಾರೆ.
ಮೌಲ್ವಿ ಕೈವಾಡವಿಲ್ಲ
ಸಿಸಿಬಿ ಪೊಲೀಸರು ಮೆಹಬೂಬ್ ಪಾಷಾನನ್ನು ಗುಂಡ್ಲುಪೇಟೆಯ ತಮಿಳುನಾಡು ಗಡಿಭಾಗದಲ್ಲಿ ಬಂಧಿಸಿದ್ದರು. ಈ ವೇಳೆ ಆತನ ಮೊಬೈಲ್ ಪರಿಶೀಲಿಸಿದಾಗ ಗುಂಡ್ಲುಪೇಟೆ ಹೊಸೂರು ಬಡಾವಣೆಯಲ್ಲಿರುವ ಮದರಸಾದ ಮೌಲ್ವಿ ಸದಖತ್ ಖಾನ್ಗೆ ಕರೆ ಮಾಡಿರುವುದು ಗೊತ್ತಾಗಿದೆ. ಶಂಕಿತನ ಜತೆ ನಂಟು ಇರುವ ಅನುಮಾನದ ಮೇರೆಗೆ ಮೌಲ್ವಿಯನ್ನು ವಶಕ್ಕೆ ಪಡೆದು ವಿಚಾರಣೆಗೆ ಒಳಪಡಿಸಲಾಗಿತ್ತು. ಶಂಕಿತನಿಗೂ ಹಾಗೂ ಮೌಲ್ವಿಗೂ ಯಾವುದೇ ರೀತಿ ಸಂಬಂಧವಿಲ್ಲ ಎಂಬುದು ಗೊತ್ತಾಗಿ ಬಿಡಲಾಗಿದೆ. ಅಗತ್ಯ ಬಿದ್ದಾಗ ವಿಚಾರಣೆಗೆ ಹಾಜರಾಗುವಂತೆ ಸೂಚಿಸಲಾಗಿದೆ ಎಂದು ಸಿಸಿಬಿ ಪೊಲೀಸರು ತಿಳಿಸಿದ್ದಾರೆ.
ಮದರಸಾದಲ್ಲೇ 10 ದಿನ ತಂಗಿದ್ದ!
ಕೇರಳ ಮತ್ತು ತಮಿಳುನಾಡು ಗಡಿಯ ಗುಂಡ್ಲುಪೇಟೆ ಹೊರವಲಯದಲ್ಲಿರುವ ಮನೆಗಳಿಗೆ ಸ್ಥಳೀಯರಿಗೆ ಪ್ರವೇಶವಿಲ್ಲ. ಅಲ್ಲದೇ, ನಕ್ಸಲ್ ಚಟುವಟಿಕೆ ಗರಿಗೆದರಿದಾಗ ಮಾತ್ರ ಪೊಲೀಸರು ಗಸ್ತು ತಿರುಗುತ್ತಾರೆ. ಅದನ್ನು ಅರಿತಿದ್ದ ಮೆಹಬೂಬ್ ಪಾಷಾ ಕಳೆದ 10 ದಿನಗಳಿಂದ ಗುಂಡ್ಲುಪೇಟೆಯ ಮದರಸಾದಲ್ಲಿ ತಂಗಿದ್ದ.
ರಾಜ್ಯದಲ್ಲಿ ಉಗ್ರ ಚಟುವಟಿಕೆಗೆ ಅವಕಾಶ ನೀಡುವುದಿಲ್ಲ. ತಮಿಳುನಾಡಿನಿಂದ ಮಾಹಿತಿ ಬಂದ ತಕ್ಷಣ ಮೂವರನ್ನು ಬಂಧಿಸಲಾಗಿದೆ. ಇನ್ನೂ ಇಬ್ಬರು ತಲೆಮರೆಸಿಕೊಂಡಿದ್ದು, ಅವರೂ ಸೇರಿ ಎಲ್ಲ ಜಾಲ ಭೇದಿಸುವ ಕಾರ್ಯ ಆಗುತ್ತಿದೆ. ಉಗ್ರರು ನಿರಂತರವಾಗಿ ಒಂದು ಕಡೆ ಇರುವುದಿಲ್ಲ. ತಾಣಗಳನ್ನು ಬದಲಿಸುತ್ತಿರುತ್ತಾರೆ. ಭಯೋತ್ಪಾದನಾ ಶಕ್ತಿಗಳನ್ನು ಪೊಲೀಸರು ನಿಗ್ರಹಿಸುತ್ತಾರೆ.
| ಬಸವರಾಜ ಬೊಮ್ಮಾಯಿ ಗೃಹ ಸಚಿವ