ನವಿ ಮುಂಬೈನ ಸೇತುವೆಯ ಸ್ತಂಭದಲ್ಲಿ ಉಗ್ರರ ಸಂಕೇತಾಕ್ಷರ: ಗೌಪ್ಯ ಸಂದೇಶ ಅರಿಯಲು ಪೊಲೀಸರ ಹರಸಾಹಸ

ಮುಂಬೈ: ನವಿ ಮುಂಬೈನ ಉರಣ್​ ಎಂಬಲ್ಲಿ ನಿರ್ಮಿಸಲಾಗಿರುವ ಸೇತುವೆಯ ಸ್ತಂಭವೊಂದರ ಮೇಲೆ ಅಪರಿಚಿತರು ಸಂಕೇತಾಕ್ಷರದಲ್ಲಿ ಬರೆದಿರುವ ಸಂದೇಶ ಪತ್ತೆಯಾಗಿದೆ. ಖೋಪಾಟ್​ ಸೇತುವೆ ಎಂಬ ಹೆಸರಿನ ಈ ಸೇತುವೆಯ ಸ್ತಂಭದ ಮೇಲೆ ಈ ಸಂದೇಶವನ್ನು ಯಾರು, ಯಾವಾಗ ಬರೆದರು ಎಂಬುದು ಸ್ಪಷ್ಟವಾಗಿಲ್ಲ.

ಆದರೆ, ಈ ಸಂದೇಶದಲ್ಲಿ ಜಾಗತಿಕ ಭಯೋತ್ಪಾದನಾ ಸಂಘಟನೆ ಐಸಿಸ್ ಮತ್ತು ಅಬು ಬಾಕರ್​ ಅಲ್​ ಬಗ್ದಾದಿ ಹೆಸರು ಪ್ರಸ್ತಾಪವಾಗಿರುವುದರಿಂದ, ಇದು ಉಗ್ರರ ಕೈವಾಡ ಇರಬಹುದು ಎಂಬ ಶಂಕೆ ವ್ಯಕ್ತವಾಗಿದೆ.
ನವಿ ಮುಂಬೈನ ಉರಣ್​ ತಾಲೂಕ್​ನಲ್ಲಿ ಒಎನ್​ಜಿಸಿ, ನೌಕಾಪಡೆಯ ಶಸ್ತ್ರಗಾರ, ಜೆಎನ್​ಪಿಟಿ ಮತ್ತಿತರ ಅತ್ಯಂತ ಸೂಕ್ಷ್ಮವಾದ ನೆಲೆಗಳು ಇವೆ. ಈ ಹಿನ್ನೆಲೆಯಲ್ಲಿ ಈ ಪ್ರದೇಶದಲ್ಲಿ ನಿಗೂಢ ಸಂದೇಶ ಕಂಡು ಬಂದಿರುವುದು ಆತಂಕಕ್ಕೆ ಕಾರಣವಾಗಿದೆ.

ನಿಗೂಢ ಸಂದೇಶದಲ್ಲಿ ಏನೆಲ್ಲ ಇದೆ…
ಸೇತುವೆಯ ಸ್ತಂಭದ ಮೇಲೆ ಕಪ್ಪು ಮಾರ್ಕರ್​ ಬಳಸಿ ಈ ಸಂದೇಶವನ್ನು ಬರೆಯಲಾಗಿದೆ. ಧೋನಿ ಜನ್ನತ್​ ಸೇ ಔಟ್​, ಆಮ್​ ಆದ್ಮಿ ಪಾರ್ಟಿ, ಕೇಜ್ರಿವಾಲ್​, ಹಫೀಜ್​ ಸಯೀದ್​, ರಹೀಂ ಕಟೋರಿ, ರಾಮ್​ ಕಟೋರಿ ಎಂದು ಬರೆಯಲಾಗಿದೆ. ಇದರ ಜತೆಯಲ್ಲಿ ದೇವನಾಗರಿ ಮತ್ತು ಇಂಗ್ಲಿಷ್​ ಭಾಷೆಯಲ್ಲಿ ಹಲವು ಸಂಕೇತಾಕ್ಷರಗಳನ್ನು ಬರೆಯಲಾಗಿದ್ದು, ಕೆಲವು ಹಡಗುಗಳು, ಪೆಟ್ರೋಲ್​ ಪಂಪ್​ಗಳು, ವಿಮಾನ ನಿಲ್ದಾಣದ ಚಿತ್ರಗಳನ್ನು ಬರೆಯಲಾಗಿದೆ. ಇನ್ನೊಂದು ಸಂದೇಶದಲ್ಲಿ ಕುರ್ಲಾ, ಗೋರಖ್​ಪುರ ಸೇರಿ ಪ್ರಮುಖ ನಗರಗಳನ್ನು ಸಾಂಕೇತಿಸುವ ಚಿಹ್ನೆಗಳನ್ನು ಕೂಡ ಬರೆಯಲಾಗಿದೆ.

ಸದ್ಯ ಪೊಲೀಸರು ಈ ಸಂದೇಶದ ನಿಗೂಢತೆಯನ್ನು ಅರಿತುಕೊಳ್ಳುವ ಪ್ರಯತ್ನ ಆರಂಭಿಸಿದ್ದಾರೆ. ಜತೆಗೆ ಭದ್ರತಾಪಡೆಗಳು ಮುಂಬೈನ ಪ್ರಮುಖ ನೆಲೆಗಳಲ್ಲಿನ ಭದ್ರತೆಯನ್ನು ಹೆಚ್ಚಿಸಲು ಕ್ರಮ ಕೈಗೊಂಡಿದ್ದಾರೆ. (ಏಜೆನ್ಸೀಸ್​)

Leave a Reply

Your email address will not be published. Required fields are marked *