More

    40 ಗಲಭೆಕೋರರಿಗೆ ಉಗ್ರ ನಂಟು?

    ಬೆಂಗಳೂರು: ಡಿಜೆ ಹಳ್ಳಿ ಮತ್ತು ಕೆಜಿ ಹಳ್ಳಿ ಗಲಭೆ ಪ್ರಕರಣದಲ್ಲಿ ಬಂಧಿತರಾಗಿರುವವರ ಪೈಕಿ 40 ಗಲಭೆಕೋರರಿಗೆ ಉಗ್ರ ಸಂಘಟನೆಗಳ ಜತೆ ನೇರ ಸಂಪರ್ಕ ಇರುವ ವಿಚಾರ ಉಗ್ರ ನಿಗ್ರಹ ಪಡೆ (ಎಟಿಎಸ್) ತನಿಖೆಯಲ್ಲಿ ಬಹಿರಂಗವಾಗಿದೆ. 2016ರಲ್ಲಿ ನಡೆದಿದ್ದ ಆರ್​ಎಸ್​ಎಸ್ ಮುಖಂಡ ಆರ್. ರುದ್ರೇಶ್ ಹತ್ಯೆ ಪ್ರಕರಣದ ಆರೋಪಿಗಳು ಹಾಗೂ ಇತರ ಉಗ್ರ ಸಂಘಟನೆ ಸದಸ್ಯರ ಜತೆ ಗಲಭೆಕೋರರು ಸಂಪರ್ಕ ಹೊಂದಿದ್ದರೆಂದು ತಿಳಿದು ಬಂದಿದೆ.

    2013ರಲ್ಲಿ ಬೆಂಗಳೂರಿನ ಮಲ್ಲೇಶ್ವರದಲ್ಲಿರುವ ರಾಜ್ಯ ಬಿಜೆಪಿ ಪ್ರಧಾನ ಕಚೇರಿ ಬಳಿ ಬಾಂಬ್ ಸ್ಪೋಟಿಸಿದ್ದ ತಮಿಳುನಾಡು ಮೂಲದ ಅಲ್ ಉಮ್ಮಾ ಹಾಗೂ 2015ರಲ್ಲಿ ಚರ್ಚ್ ಸ್ಟ್ರೀಟ್ ಬಳಿ ಬಾಂಬ್ ಸ್ಪೋಟಿಸಿದ್ದ ಇಂಡಿಯನ್ ಮುಜಾಹಿದೀನ್ ಉಗ್ರರ ಜತೆ ಸಂಪರ್ಕದ ಬಗ್ಗೆ ಕೂಡ ಮಾಹಿತಿ ಸಿಕ್ಕಿರುವುದಾಗಿ ಪೊಲೀಸ್ ಮೂಲಗಳು ತಿಳಿಸಿವೆ.

    ಉಗ್ರ ನಂಟು ಬಯಲಾದ ಬೆನ್ನಲ್ಲೇ ಗಲಭೆ ಬಳಿಕ ಹೊರಜಿಲ್ಲೆ ಮತ್ತು ರಾಜ್ಯಗಳಲ್ಲಿ ತಲೆಮರೆಸಿಕೊಂಡಿರುವ ಆರೋಪಿಗಳ ಬಂಧನ ಕಾರ್ಯಾಚರಣೆಯನ್ನು ಸಿಸಿಬಿ ಚುರುಕುಗೊಳಿಸಿದೆ. ಸದ್ಯ ಬಂಧನಕ್ಕೆ ಒಳಗಾಗಿರುವ ಕೆ.ಜಿ. ಹಳ್ಳಿಯ ಸಮಿಯುದ್ದೀನ್​ನನ್ನು ತೀವ್ರ ವಿಚಾರಣೆಗೆ ಒಳಪಡಿಸಿದಾಗ ತಮಿಳುನಾಡು ಮೂಲದ ಅಲ್ ಹಿಂದ್ ಉಗ್ರ ಸಂಘಟನೆ ಮುಖಂಡರ ಜತೆ ಸಂಪರ್ಕ ಹೊಂದಿರುವುದು ಗೊತ್ತಾಗಿದೆ. ಈ ಸುಳಿವಿನ ಮೇಲೆ ಸಿಸಿಬಿ ಪೊಲೀಸರು ಸಮಿಯುದ್ದೀನ್ ಮೊಬೈಲ್ ಕರೆಗಳನ್ನು ಪರಿಶೀಲಿಸಿದಾಗ ಗಲಭೆಕೋರರಿಗೆ ಉಗ್ರ ಸಂಘಟನೆಗಳ ಜತೆ ಸಂಬಂಧ ಇರುವುದು ಗೊತ್ತಾಗಿದೆ. ದೇಶದ ಈ ಮೂರು ಉಗ್ರ ಸಂಘಟನೆಗಳ ಜತೆ ಸಂಪರ್ಕ ಹೊಂದಿದ್ದ ಶಂಕಿತರು ಡಿಜೆ ಹಳ್ಳಿ ಮತ್ತು ಕೆಜಿ ಹಳ್ಳಿಯಲ್ಲಿ ಪತ್ತೆ ಆಗಿರುವುದು ಆತಂಕ ಮೂಡಿಸಿದೆ. ಬೇರೆ ಬೇರೆ ಸಂಘಟನೆ ಜತೆ ಸಂಪರ್ಕ ಇದ್ದರೂ ಎಲ್ಲರೂ ಆ.11ರ ರಾತ್ರಿ ಒಂದೆಡೆ ಸೇರಿ ಗಲಭೆ ನಡೆಸಿದ್ದಾರೆ.

    ವಿಭಿನ್ನ ಹೆಸರಿನಲ್ಲಿ ದುಷ್ಕೃತ್ಯ ಎಸಗುವ ಸಂಘಟನೆಗಳಿಗೆ ಸದಸ್ಯರ ನೇಮಕಾತಿ ನಡೆಸಿರುವುದು ಸಹ ಆತಂಕ ತಂದಿದೆ. ಉಲ್ ಉಮ್ಮಾ ಸಂಘಟನೆ ಮೇಲೆ ತಮಿಳುನಾಡು ಸರ್ಕಾರ ನಿಷೇಧ ಹೇರಿತ್ತು. ಇದಾದ ಮೇಲೆ ಅಲ್ ಹಿಂದ್ ಹೆಸರಿನಲ್ಲಿ ಮರು ಹುಟ್ಟು ಪಡೆಯಿತು. ಅದೇ ರೀತಿ ಪಿಎಫ್​ಐ ಮತ್ತು ಎಸ್​ಡಿಪಿಐ ಚಟುವಟಿಕೆ ಶುರುವಾಯಿತು. ಇಂಡಿಯನ್ ಮುಜಾಹಿದೀನ್ ಹೊರತುಪಡಿಸಿದರೆ ಅಲ್ ಹಿಂದ್ ಮತ್ತು ಅಲ್ ಉಮ್ಮಾ ಸಂಘಟನೆಗೆ ಸಾಮ್ಯತೆ ಇದೆ. ಈ ಎರಡು ಸಂಘಟನೆಗಳ ಸದಸ್ಯರು ಹಿಂದು ಸಂಘಟನೆಗಳ ಮುಖಂಡರನ್ನೇ ಗುರಿಯಾಗಿಸಿಕೊಂಡು ಕೃತ್ಯ ಎಸಗುತ್ತಿದ್ದರೆಂದು ತನಿಖಾಧಿಕಾರಿಗಳು ತಿಳಿಸಿದ್ದಾರೆ.

    ಮುಸ್ಲಿಂ ಮತಗಳನ್ನು ಒಡೆಯಲು ಎಸ್​ಡಿಪಿಐಯನ್ನು ಯೋಜಿತ ರೀತಿಯಲ್ಲಿ ಬಳಸಿಕೊಳ್ಳುತ್ತ ಬಂದಿರುವ ಬಿಜೆಪಿಗೆ ಧೈರ್ಯವಿದ್ದರೆ ಸಂಘಟನೆ ನಿಷೇಧಿಸಲಿ. ಎಸ್​ಡಿಪಿಐ ನಾಯಕರು ತಪ್ಪು ಮಾಡಿದ್ದರೆ ಕ್ರಮಕೈಗೊಳ್ಳಿ. ಗಲಭೆಯ ನಿಜವಾದ ತನಿಖೆ ಗುಪ್ತಚರ ಇಲಾಖೆಯ ವೈಫಲ್ಯದಿಂದ ಶುರುವಾಗಬೇಕು.

    | ಸಿದ್ದರಾಮಯ್ಯ ಮಾಜಿ ಮುಖ್ಯಮಂತ್ರಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts