ಕರಾವಳಿಯಲ್ಲಿ ಕಟ್ಟೆಚ್ಚರ

>>

ವಿಜಯವಾಣಿ ಸುದ್ದಿಜಾಲ ಮಂಗಳೂರು
ಶ್ರೀಲಂಕಾದಲ್ಲಿ ಉಗ್ರರ ಆತ್ಮಾಹುತಿ ದಾಳಿ ಹಿನ್ನೆಲೆಯಲ್ಲಿ ಕರಾವಳಿಯಲ್ಲಿ ಕಟ್ಟೆಚ್ಚರ ವಹಿಸಲಾಗಿದೆ. ಮಂಗಳೂರು ನಗರ ಪೊಲೀಸ್ ಆಯುಕ್ತ ಸಂದೀಪ್ ಪಾಟೀಲ್ ನೇತೃತ್ವದಲ್ಲಿ ಗುರುವಾರ ಪೊಲೀಸ್ ಆಯುಕ್ತರ ಕಚೇರಿ ಸಭಾಂಗಣದಲ್ಲಿ ಸಭೆ ನಡೆದಿದ್ದು, ಭದ್ರತೆ ವಿಚಾರದಲ್ಲಿ ಚರ್ಚಿಸಲಾಯಿತು.

ಎಂಆರ್‌ಪಿಎಲ್, ಎನ್‌ಎಂಪಿಟಿ, ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ, ಮಾಲ್‌ಗಳು, ಇನ್ಫೋಸಿಸ್, ಧಾರ್ಮಿಕ ಕೇಂದ್ರಗಳ ಮುಖ್ಯಸ್ಥರು ಭಾಗವಹಿಸಿದ್ದರು. ಸಿಸಿಟಿವಿ, ಡೋರ್ ಫ್ರೇಮ್ ಮೆಟಲ್ ಡಿಟೆಕ್ಟರ್, ಸುಸಜ್ಜಿತ ಆವರಣ ಗೋಡೆ ನಿರ್ಮಾಣ, ಸೆಕ್ಯುರಿಟಿ ಗಾರ್ಡ್‌ಗಳಿಗೆ ಪೊಲೀಸ್ ಕ್ಲಿಯರೆನ್ಸ್ ಪ್ರಮಾಣ ಪತ್ರ ನೀಡುವುದು ಮೊದಲಾದ ಸುರಕ್ಷತಾ ಕ್ರಮಗಳನ್ನು ಕೈಗೊಳ್ಳಲು ಸಂದೀಪ್ ಪಾಟೀಲ್ ಸಲಹೆ ನೀಡಿದರು.
ಈಗಾಗಲೇ ಸಿಸಿಟಿವಿ ಜೋಡಣೆ ಆಗಿದ್ದರೆ ಅವು ಸರಿಯಾಗಿ ಕೆಲಸ ಮಾಡುತ್ತಿದೆಯೇ ಎನ್ನುವುದನ್ನು ಆಗಾಗ ಪರಿಶೀಲಿಸಬೇಕು. ಮುಖ್ಯವಾಗಿ ಮಾಲ್‌ಗಳಲ್ಲಿ ಕಾರ್ಯನಿರ್ವಹಿಸುವ ಭದ್ರತಾ ಸಿಬ್ಬಂದಿ ಯಾವ ರೀತಿ ತಪಾಸಣೆ ನಡೆಸಬೇಕು ಎಂಬ ಬಗ್ಗೆ ಶೀಘ್ರವೇ ತರಬೇತಿ ಹಮ್ಮಿಕೊಳ್ಳಲಾಗುವುದು. ಅಲ್ಲದೆ ಖಾಸಗಿ ಭದ್ರತಾ ಸಿಬ್ಬಂದಿಯ ಕ್ರಿಮಿನಲ್ ಹಿನ್ನೆಲೆಯನ್ನು ಕಡ್ಡಾಯವಾಗಿ ಪೊಲೀಸ್ ಇಲಾಖೆಯಲ್ಲಿ ಪರಿಶೀಲನೆ ನಡೆಸಿ ದೃಢಪಡಿಸಿಕೊಳ್ಳಬೇಕು ಎಂದು ಆಯುಕ್ತರು ಸೂಚನೆ ನೀಡಿದರು.

ಡಿಸಿಪಿ ಹನುಮಂತರಾಯ ಸೇರಿದಂತೆ ವಿವಿಧ ಸಂಸ್ಥೆಗಳ ಪ್ರಮುಖರು ಸಭೆಯಲ್ಲಿ ಪಾಲ್ಗೊಂಡಿದ್ದರು.

ಸಮುದ್ರದಲ್ಲಿ ಗಸ್ತು ಹೆಚ್ಚಳ: ಕರಾವಳಿ ಕಾವಲು ಪಡೆ ಪೊಲೀಸ್ ನಿರ್ದೇಶಕ ಎ.ಎಂ.ಪ್ರಸಾದ್ ನಿರ್ದೇಶನದಡಿ ಮಂಗಳೂರಿನಿಂದ ಕಾರವಾರದ ತನಕ ಬಿಗು ಭದ್ರತೆ, ಕಟ್ಟೆಚ್ಚರ ವಹಿಸಲಾಗಿದೆ. ಕರಾವಳಿ ಕಾವಲು ಪಡೆಯ ಪೊಲೀಸರು ಸಮುದ್ರ ತೀರದ ಆಯಕಟ್ಟಿನ ಪ್ರದೇಶಗಳಲ್ಲಿ ಗಸ್ತು ಹೆಚ್ಚಿಸಿದ್ದಾರೆ. ಯಾವುದೇ ತುರ್ತು ಪರಿಸ್ಥಿತಿ ಎದುರಿಸಲು ಸನ್ನದ್ಧರಾಗಿರುವಂತೆ ಸೂಚಿಸಲಾಗಿದೆ.

ತಲಪಾಡಿಯಿಂದ ಹೊಸಬೆಟ್ಟು ತನಕ ಸಮುದ್ರದಲ್ಲಿ ಬೋಟ್‌ಗಳ ಮೂಲಕ ಗಸ್ತು ನಡೆಸಲಾಗುತ್ತಿದೆ. ರಾತ್ರಿ ಸಮುದ್ರದಲ್ಲಿ ಗಸ್ತು ಕಷ್ಟವಾಗುವ ಹಿನ್ನೆಲೆಯಲ್ಲಿ ಸಿಬ್ಬಂದಿ ತಟದಲ್ಲಿ ಕಾವಲು ಕಾಯುತ್ತಿದ್ದಾರೆ. ಸಮುದ್ರದಲ್ಲಿ ಯಾವುದೇ ಅಪರಿಚಿತ ಅಥವಾ ಸಂಶಯಿತ ಬೋಟುಗಳು ಕಂಡು ಬಂದಲ್ಲಿ ತಕ್ಷಣ ಮಾಹಿತಿ ನೀಡಲು ಮೀನುಗಾರರಿಗೂ ತಿಳಿಸಲಾಗಿದೆ. ಸಮುದ್ರ ತಟದಲ್ಲೂ ಮೀನುಗಾರರು, ಗ್ರಾಮಸ್ಥರಿಗೆ ಮಾಹಿತಿ ನೀಡಲಾಗಿದೆ ಎಂದು ಕರಾವಳಿ ರಕ್ಷಣಾ ಪೊಲೀಸರು ತಿಳಿಸಿದ್ದಾರೆ.

ಗಡಿ ಪ್ರದೇಶಗಳಲ್ಲಿ ಹಾಗೂ ನಗರದ ಆಯಕಟ್ಟಿನ ಪ್ರದೇಶದಲ್ಲಿರುವ ಚೆಕ್‌ಪೋಸ್ಟ್‌ಗಳಲ್ಲಿ ತಪಾಸಣೆ ಬಿಗುಗೊಳಿಸುವಂತೆ ಆದೇಶಿಸಲಾಗಿದೆ. ಲಾಡ್ಜ್‌ಗಳಲ್ಲಿ ಬಂದು ತಂಗುವವರ ಬಗ್ಗೆ ಸಂಪೂರ್ಣ ಮಾಹಿತಿ ಪಡೆಯುವಂತೆ ಸೂಚಿಸಲಾಗಿದೆ.

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಈಗಾಗಲೇ ಪೊಲೀಸರು ಅಲರ್ಟ್ ಆಗಿದ್ದಾರೆ. ಎಲ್ಲ ಪೊಲೀಸ್ ಅಧಿಕಾರಿಗಳಿಗೆ ಈ ಬಗ್ಗೆ ಸೂಚನೆ ನೀಡಲಾಗಿದೆ. ಹೆಚ್ಚಿನ ಸಂಖ್ಯೆಯಲ್ಲಿ ಜನ ಸೇರುವಲ್ಲಿ ಮತ್ತು ಧಾರ್ಮಿಕ ಕೇಂದ್ರಗಳಲ್ಲಿ ಸಿಸಿಕ್ಯಾಮರಾ, ಮೆಟಲ್ ಡಿಟೆಕ್ಟರ್ ಮೊದಲಾದುವುಗಳನ್ನು ಜೋಡಿಸಿಕೊಂಡು ಹೆಚ್ಚಿನ ಭದ್ರತೆ ವಹಿಸುವಂತೆ ತಿಳಿಸಲಾಗಿದೆ.
– ಲಕ್ಷ್ಮೀ ಪ್ರಸಾದ್, ಪೊಲೀಸ್ ಅಧೀಕ್ಷಕರು, ದ.ಕ.

Leave a Reply

Your email address will not be published. Required fields are marked *