ಫಿಟ್​ನೆಸ್ ಸರ್ಟಿಫಿಕೆಟ್, ಗಿಡಿಎಲ್ ನವೀಕರಣ ನಿಯಮ ಇನ್ನೂ ಸರಳ

ಚಿಕ್ಕಮಗಳೂರು: ಸಂಚಾರ ವ್ಯವಸ್ಥೆಯಲ್ಲಿ ನಿಯಮ ಉಲ್ಲಂಘಿಸಿದರೆ ದುಬಾರಿ ದಂಡ ವಿಧಿಸುವ ಕಾನೂನು ಜಾರಿಯಾಗಿರುವ ಬೆನ್ನಲ್ಲೇ ಪ್ರಾದೇಶಿಕ ಸಾರಿಗೆ ಇಲಾಖೆ ಅವಧಿ ಮೀರಿದ ವಾಹನದ ಎಫ್​ಸಿ (ಫಿಟ್​ನೆಸ್ ಸರ್ಟಿಫಿಕೆಟ್) ಹಾಗೂ ಚಾಲನಾ ಪರವಾನಗಿ ನವೀಕರಣಕ್ಕೆ ಇದ್ದ ನಿಯಮಗಳನ್ನು ಸಡಿಲಗೊಳಿಸಿದೆ. ಇದರಿಂದ ಸವಾರರು ಕೊಂಚ ನಿರಾಳರಾಗಿದ್ದಾರೆ.

ಖರೀದಿಸಿದ ದಿನಾಂಕದಿಂದ ಖಾಸಗಿ (ವೈಟ್ ಬೋರ್ಡ್) ವಾಹನಕ್ಕೆ ಚಾಲನಾ ಅರ್ಹತೆ ಇರುವುದು 15 ವರ್ಷ ಮಾತ್ರ. ಮತ್ತೆ ನವೀಕರಿಸಲು ಮಾಲೀಕ ವಿಫಲನಾದಲ್ಲಿ ಮತ್ತೆ ನವೀಕರಿಸುವವರೆಗೂ ಪ್ರತಿ ತಿಂಗಳು ಲಘು ವಾಹನಕ್ಕೆ 500 ಹಾಗೂ ದ್ವಿಚಕ್ರ ವಾಹನಕ್ಕೆ 300 ರೂ. ದಂಡ ಶುಲ್ಕ ಪಾವತಿಸಬೇಕಿತ್ತು. ಆದರೆ ಈಗ ನವೀಕರಣ ಮಾಡುವವರೆಗೂ 100 ರೂ. ದಂಡ ಪಾವತಿಸಿದರೆ ಸಾಕು.

ಚಾಲನಾ ಪರವಾನಗಿ ನವೀಕರಿಸುವ ಅವಧಿ ಮೀರಿದ್ದರೆ ದಂಡ ಶುಲ್ಕ ಪಾವತಿಸಿ ನವೀಕರಿಸಿಕೊಳ್ಳಲು ಒಂದು ತಿಂಗಳು ಮಾತ್ರ ಹೆಚ್ಚುವರಿ ಕಾಲಾವಕಾಶವಿತ್ತು. ಒಂದು ಸಾವಿರ ರೂ. ದಂಡ ಪಾವತಿಸಬೇಕಿತ್ತು. ಆದರೆ ಈಗ ಈ ಅವಧಿಯನ್ನು ಒಂದು ವರ್ಷಕ್ಕೆ ವಿಸ್ತರಿಸಲಾಗಿದೆ. ಈ ಸಮಯದಲ್ಲಿ ದಂಡ ಪಾವತಿಸಬೇಕಿಲ್ಲ. ಆನಂತರ ವರ್ಷಕ್ಕೆ ಒಂದು ಸಾವಿರ ರೂ.ನಂತೆ ದಂಡ ಶುಲ್ಕ ಏರುತ್ತ ಹೋಗುತ್ತದೆ.

ಆನ್​ಲೈನ್​ನಲ್ಲಿ ಎಲ್ಲ ವ್ಯವಸ್ಥೆ: ಪ್ರಾದೇಶಿಕ ಸಾರಿಗೆ ಕಚೇರಿಗಳಲ್ಲಿ ಈಗ ಆಧುನಿಕ ತಂತ್ರಜ್ಞಾನ ಅಳವಡಿಕೆಯಾಗಿದೆ. ಈ ಹಿನ್ನೆಲೆಯಲ್ಲಿ ಚಾಲನಾ ಪರವಾನಗಿಯಿಂದ ಹಿಡಿದು ವಾಹನ ನೋಂದಣಿವರೆಗೂ ಅರ್ಜಿ ಹಿಡಿದು ಕಾಯಬೇಕಿಲ್ಲ. ಹಾಗೆಯೇ ತೆರಿಗೆ ಪಾವತಿ ಸಹ ಕಚೇರಿಗೆ ಬಂದು ಸಲ್ಲಿಸಬೇಕಿಲ್ಲ. ಆನ್​ಲೈನ್ ಮೂಲಕ ಅರ್ಜಿ ಹಾಗೂ ದಾಖಲೆ ಸಲ್ಲಿಸಿ ಆನಂತರ ಒಮ್ಮೆ ವಾಹನ ತಂದರೆ ಪರಿಶೀಲಿಸಿ ವಾಹನ ನೋಂದಣಿ ಪ್ರಕ್ರಿಯೆ ಪೂರ್ಣಗೊಳಿಸಬಹುದು. ಇದರಿಂದ ವಾಹನ ಖರೀದಿಸಿದವರು ಮತ್ತು ಕಚೇರಿ ಸಿಬ್ಬಂದಿಗೂ ಸಮಯ ಉಳಿಯುತ್ತದೆ.

ಬಗೆಹರಿಯದ ಸಿಬ್ಬಂದಿ ಸಮಸ್ಯೆ: ಜಿಲ್ಲೆಯಲ್ಲಿ ವಾಹನಗಳ ಸಂಖ್ಯೆ ಪ್ರತಿ ವರ್ಷ ಹೆಚ್ಚಾಗುತ್ತಿದೆ. ಆದರೆ ತಪಾಸಣೆಯಿಂದ ಹಿಡಿದು ಕಚೇರಿ ಕೆಲಸದವರೆಗೂ ತ್ವರಿತ ಕಾರ್ಯನಿರ್ವಹಿಸಲು ಸಿಬ್ಬಂದಿ ಕೊರತೆಯಿದೆ. ಕಚೇರಿಯಲ್ಲಿ ಏಳು ಮಂದಿ ವಾಹನ ಪರಿವೀಕ್ಷಕರು ಇರಬೇಕಿತ್ತು. ಆದರೆ ಇಲ್ಲಿ ಕಾಯಂ ವಾಹನ ಪರಿವೀಕ್ಷಕರೇ ಇಲ್ಲ. ಎರವಲು ಸೇವೆ ಮೇಲೆ ಪಕ್ಕದ ಜಿಲ್ಲೆಗಳಿಂದ ಬಂದು ವಾರದಲ್ಲಿ ಎರಡು ಅಥವಾ ಮೂರು ದಿನ ಕಾರ್ಯನಿರ್ವಹಿಸುತ್ತಿದ್ದಾರೆ. ಆದರೆ ಈ ಜಿಲ್ಲೆಗೆ ನೇಮಕಗೊಂಡಿದ್ದ ವಾಹನ ನಿರೀಕ್ಷಕರು ನಿಯೋಜನೆ ಮೇರೆಗೆ ಬೇರೆ ಜಿಲ್ಲೆಯಲ್ಲಿ ಕಾರ್ಯ ನಿರ್ವಹಿಸುತ್ತಿರುವುದು ದುರ್ದೈವ. ತರೀಕೆರೆ ಮತ್ತು ಕಡೂರು ತಾಲೂಕು ಜನರಿಗಾಗಿ ತರೀಕೆರೆಯಲ್ಲಿ ಸಹಾಯಕ ಪ್ರಾದೇಶಿಕ ಸಾರಿಗೆ ಅಧಿಕಾರಿ ಕಚೇರಿ ತೆರೆಯಲಾಗಿದೆ. ಆ ಕಚೇರಿಗೆ ಕನಿಷ್ಠ ಇಬ್ಬರು ವಾಹನ ಪರಿವೀಕ್ಷಕರ ಅಗತ್ಯವಿದ್ದು, ನೇಮಕಾತಿಯೇ ನಡೆದಿಲ್ಲ.

ಟ್ರ್ಯಾಕ್ ನಿರ್ಮಾಣ ನನೆಗುದಿಗೆ: ಹೊಸದಾಗಿ ಚಾಲನಾ ಪರವಾನಗಿ ನೀಡಲು ಅರ್ಹತಾ ಪರೀಕ್ಷೆಗೆ ವಿಶೇಷ ಚಾಲನಾ ಟ್ರ್ಯಾಕ್ ನಿರ್ಮಾಣ ನನೆಗುದಿಗೆ ಬಿದ್ದಿದೆ. ಇದಕ್ಕೆ ಹತ್ತು ಎಕರೆ ಜಾಗ ಕೋರಿ ಜಿಲ್ಲಾಧಿಕಾರಿಗೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಕನಿಷ್ಠ ಐದು ಎಕರೆ ಜಾಗವನ್ನಾದರೂ ನೀಡುವಂತೆ ಕೋರಲಾಗಿದೆ. ಈಗ ಆ ಅರ್ಜಿ ತಹಸೀಲ್ದಾರ್ ಕಚೇರಿಯಿಂದ ಸರ್ವೆ ಅಧಿಕಾರಿಗಳ ಮುಂದೆ ಬಂದಿದೆ. ಇನ್ನಷ್ಟೇ ಸ್ಥಳ ಗುರುತಿಸಿ ಮಂಜೂರಾತಿ ಪಡೆಯಬೇಕಿದೆ.

Leave a Reply

Your email address will not be published. Required fields are marked *