ನಮೋ ಆಪ್ ಬಳಸಿ ಪ್ರಧಾನಿಗೆ ಪತ್ರ ರವಾನೆ

ತೇರದಾಳ: ಶಾಲೆಗೆ ಅಗತ್ಯವಾದ ಕಂಪ್ಯೂಟರ್ ಲ್ಯಾಬ್ ನಿರ್ವಿುಸಿ ಕಂಪ್ಯೂಟರ್​ಗಳನ್ನು ಒದಗಿಸುವಂತೆ ಸಮೀಪದ ಸಸಾಲಟ್ಟಿ ಗ್ರಾಮದ ತೋಟ ನಂ.1 ರ ಸರ್ಕಾರಿ ಶಾಲೆಯಿಂದ ನಮೋ (ನರೇಂದ್ರ ಮೋದಿ) ಆಪ್ ಮೂಲಕ ಪತ್ರ ಕಳಿಸಿದ್ದಕ್ಕೆ ಪ್ರಧಾನಿ ಕಾರ್ಯಾಲಯ ಸಿಬ್ಬಂದಿ ಸ್ಪಂದಿಸಿ ಮರು ಸಂದೇಶ ಕಳಿಸಿದ್ದಾರೆ.

ಶಾಲೆಯಲ್ಲಿ ಜು.9 ರಂದು ಶಾಲೆಗೆ ಕಂಪ್ಯೂಟರ್ ಪೂರೈಸಲು ನಮೋ ಆಪ್ ಮೂಲಕ ಮನವಿ ಸಲ್ಲಿಸಿದ್ದಕ್ಕೆ ಅದೇ ದಿನ ಮಾಹಿತಿ ನೋಂದಣಿಯಾದ ಕುರಿತು ಪಿಎಂಒಪಿಜಿ/ಇ/2018/0332255 ಸಂಖ್ಯೆ ಮೂಲಕ ಮರು ಸಂದೇಶ ಬಂದಿದೆ.

ನಮೋಗೆ ಸಲ್ಲಿಸಿದ ಮಾಹಿತಿ ಏನು?: ಶಾಲೆ ಹೊಂದಿದ ಮೂಲ ಸೌಲಭ್ಯಗಳೊಂದಿಗೆ ಶಾಲೆ ಕಟ್ಟಡ, ನಲಿಕಲಿ ವಿಶೇಷ ಕೊಠಡಿ, ಎಲ್​ಸಿಡಿ ಪ್ರೊಜೆಕ್ಟರ್ ಹಾಗೂ ಯೋಗ ಸೇರಿ ಕ್ರೀಡಾ ಚಟುವಟಿಕೆ ವಿವರಗಳ ಪಿಡಿಎಫ್ ಫೈಲ್ ತಯಾರಿಸಿ ನಮೋ ಆಪ್ ಮೂಲಕ ಕಳಿಸಲಾಗಿದೆ. ಕೇಂದ್ರ ಸರ್ಕಾರ ತಂತ್ರಜ್ಞಾನ ಆಧಾರಿತ ಕಂಪ್ಯೂಟರ್ ಲ್ಯಾಬ್ ನಿರ್ವಿುಸಿದರೆ ಮಕ್ಕಳಿಗೆ ಉತ್ತಮ ಶಿಕ್ಷಣ ಒದಗಿಸಲು ಅನುಕೂಲವಾಗುತ್ತದೆ ಎಂದು ಮನವಿಯಲ್ಲಿ ತಿಳಿಸಲಾಗಿದೆ. ಜು.9 ರಂದು ನಮೋ ಆಪ್ ಮೂಲಕ ಮಾಹಿತಿ ಸಲ್ಲಿಸಿದ 1 ಗಂಟೆ ನಂತರ ಮನವಿ ನೋಂದಣಿಯಾದ ಕುರಿತು ಮರು ಸಂದೇಶ ಬಂದಿದ್ದಕ್ಕೆ ಶಿಕ್ಷಕರು ಸಂತಸಗೊಂಡಿದ್ದಾರೆ

ನಮೋ ಆಪ್ ಬಗ್ಗೆ ತಿಳಿದದ್ದು ಹೇಗೆ ?: ಕೇಂದ್ರ ಸರ್ಕಾರ ನಮೋ ಆಪ್ ಕುರಿತು ಮಾಧ್ಯಮಗಳ ಮೂಲಕ ಸಾಕಷ್ಟು ಪ್ರಚಾರ ಕೈಗೊಂಡಿದ್ದನ್ನು ಗಮನಿಸಿದ ಶಿಕ್ಷಕರು ಶಾಲೆಗೆ ಕಂಪ್ಯೂಟರ್ ಲ್ಯಾಬ್ ಬೇಡಿಕೆ ಸಲ್ಲಿಸಿದರೆ ಮಕ್ಕಳ ಕಲಿಕೆಗೆ ಅನುಕೂಲವಾಗುತ್ತದೆ ಎಂದು ಆಪ್ ಮೂಲಕ ಮನವಿ ಸಲ್ಲಿಸಿದ್ದು, ನಮೋ ಉತ್ತರಕ್ಕಾಗಿ ಕಾಯುತ್ತಿದ್ದಾರೆ.

ಶಾಲೆ ಹಿರಿಮೆ: ತೋಟದ ಸರ್ಕಾರಿ ಶಾಲೆ ನಿಸರ್ಗ ಮಧ್ಯೆ ಮೂಲ ಸೌಲಭ್ಯ ಹಾಗೂ ಕ್ರಿಯಾತ್ಮಕ ಚಟುವಟಿಕೆಗಳಿಂದ ಕೂಡಿದೆ. 1 ರಿಂದ 8ನೇ ತರಗತಿಯಲ್ಲಿ 120 ವಿದ್ಯಾರ್ಥಿಗಳು ಕಲಿಯುತ್ತಿದ್ದು, 4 ಶಿಕ್ಷಕರು ಹಾಗೂ ಇಬ್ಬರು ಅತಿಥಿ ಶಿಕ್ಷಕರಿದ್ದಾರೆ. ಸರ್ಕಾರಿ ಕಚೇರಿಗಳನ್ನು ಕೂಡ ನಾಚಿಸುವಂತೆ ಶಾಲೆ ಮುಖ್ಯ ಶಿಕ್ಷಕರ ಕೊಠಡಿ ವ್ಯವಸ್ಥಿತವಾಗಿದ್ದು, ಹೊರಭಾಗದ ಕಬೋರ್ಡ್​ನಲ್ಲಿ ಶಾಲೆಗೆ ದೊರೆತ ಪ್ರಶಸ್ತಿಗಳ ಫಲಕಗಳು ಕಾಣುತ್ತವೆ. ಮುಖ್ಯಗುಶಿಕ್ಷಕ ಪಿ.ಎಂ. ಪತ್ತಾರ ಅವರ ವಿಭಿನ್ನ ವಿಚಾರಗಳಿಗೆ ಸಹಕರಿಸಿ ಶಿಕ್ಷಕರಾದ ಜೆ.ಬಿ. ಹೂಗಾರ, ಐ.ಐ. ಮಂಡಿ, ಎಲ್.ಎಚ್. ಬಡಿಗೇರ ಹಾಗೂ ಅತಿಥಿ ಶಿಕ್ಷಕರಾದ ಪ್ರಕಾಶ ಕಂಟಿಕಾರ, ಯಲ್ಲವ್ವ ಕಾಖಂಡಕಿ ಮಕ್ಕಳ ಶೈಕ್ಷಣಿಕ ಅಭಿವೃದ್ಧಿಗೆ ಶ್ರಮಿಸುತ್ತಿದ್ದಾರೆ.

ನಮೋ ಆಪ್ ಬಗ್ಗೆ ಮಾಧ್ಯಮಗಳ ಮೂಲಕ ತಿಳಿದು ಕೊಂಡಿದ್ದೇವೆ. ನಮ್ಮ ಶಾಲೆಗೆ ಇನ್ನಷ್ಟು ಸೌಲಭ್ಯ ಪಡೆಯಲು ಪ್ರಧಾನಿ ಮೋದಿಯವರಿಗೆ ಕಂಪ್ಯೂಟರ್ ಲ್ಯಾಬ್​ಗಾಗಿ ಮನವಿ ಮಾಡಲಾಗಿದೆ.

| ಪಿ.ಎಂ. ಪತ್ತಾರ ಮುಖ್ಯಗುರು

ಶಾಲೆ ಶಿಕ್ಷಕರು ಮಕ್ಕಳಿಗೆ ಉತ್ತಮ ಬೋಧನೆ ಮಾಡುತ್ತಿದ್ದು, ಮಕ್ಕಳಿಗೆ ದೇಶಪ್ರೇಮ ಬೆಳೆಸುತ್ತಿದ್ದಾರೆ. ಉತ್ತಮ ಕ್ರೀಡಾ ತರಬೇತಿ ದೊರೆಯುತ್ತಿದ್ದು, ನಮ್ಮೂರ ಸರ್ಕಾರಿ ಶಾಲೆ ಎಂದು ಹೇಳಿಕೊಳ್ಳಲು ಹೆಮ್ಮೆ ಎನಿಸುತ್ತದೆ.

| ಸುರೇಶ ಮರಡಿ ಹಳೆಯ ವಿದ್ಯಾರ್ಥಿ, ಸಸಾಲಟ್ಟಿ