ನಿಮ್ಮ ಮನೆ ಮಗಳಿಗೆ ಅರಿಶಿಣ ಕುಂಕುಮದ ಜತೆಗೆ ಮತ ಕೊಡಿ

ತೇರದಾಳ: ಪ್ರಧಾನಿ ನರೇಂದ್ರ ಮೋದಿಯವರೇ ನಮ್ಮ ನೇಕಾರರಿಗೆ ಮೂರು ಸಾವಿರ ಪೆನ್ಶನ್ ಬೇಡ, ಮೊದಲು ಜಿಎಸ್‌ಟಿ ತೆಗೆದು ಹಾಕುವ ಕೆಲಸ ಮಾಡಿ ಎಂದು ಮೈತ್ರಿಕೂಟದ ಅಭ್ಯರ್ಥಿ ವೀಣಾ ಕಾಶಪ್ಪನವರ ಮೋದಿಗೆ ತಿರುಗೇಟು ನೀಡಿದರು.

ಪಟ್ಟಣದ ಮಹಾತ್ಮ ಗಾಂಧಿ ಕ್ರೀಡಾಂಗಣದಲ್ಲಿ ಶುಕ್ರವಾರ ನಡೆದ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಅಭ್ಯರ್ಥಿ ಪರ ಬಹಿರಂಗ ಚುನಾವಣೆ ಪ್ರಚಾರ ಸಭೆಯಲ್ಲಿ ಅವರು ಮಾತನಾಡಿದರು.

ಮತದಾರ ದೇವರುಗಳೇ ಎಂದು ಕೈಮುಗಿದು ಮಾತುಗಳನ್ನು ಪ್ರಾರಂಭಿಸಿದ ಅವರು, ಪ್ರಧಾನಿ ಮೋದಿ ಆಶ್ವಾಸನೆಗಳನ್ನು ಕೊಟ್ಟು, ಅಭ್ಯರ್ಥಿ ಹೆಸರೇ ಎತ್ತಲಿಲ್ಲ. ಬಡವ, ದೀನ ದಲಿತರಿಗಾಗಿ ನೀವು ಏನೂ ಮಾಡಲಿಲ್ಲ. ಅದನ್ನು ಕೇಂದ್ರ ಸರ್ಕಾರ ನೋಡಿ ಕಲಿಯೋದಲ್ಲ. ಬಡ, ದೀನ-ದಲಿತರು ಸೇರಿ ಹಲವು ವರ್ಗಗಳಿಗೆ ರಾಜ್ಯದ ಸಮ್ಮಿಶ್ರ ಸರ್ಕಾರ ನೀಡಿದ ಜಾತ್ಯತೀತ ಕೊಡುಗೆ ನೋಡಿ ಬಿಜೆಪಿ ಕಲಿಯಿಲಿ ಎಂದರು.

ದೇಶಕ್ಕಾಗಿ ಮೋದಿ ಅಲ್ಲ. ಬದಲಾಗಿ ದೇಶಕ್ಕಾಗಿ ದೇವೇಗೌಡ, ರಾಜ್ಯಕ್ಕಾಗಿ ಕುಮಾರಸ್ವಾಮಿ, ಸಿದ್ದರಾಮಯ್ಯ ಎಂದು ಸ್ಲೋಗನ್ ಬದಲಾಯಿಸೋಣ. ಜಿಲ್ಲೆಯ ಹೆಣ್ಣು ಮಗಳಾಗಿ ಇಲ್ಲಿನ ನೇಕಾರರ, ರೈತರ, ದಿನಗೂಲಿ ಕಾರ್ಮಿಕರು ಸೇರಿ ಎಲ್ಲ ವರ್ಗಗಳ ಪರವಾಗಿ ನಾನು ಮಾತನಾಡಿ, ಕೆಲಸ ಮಾಡಿಸಿಕೊಡುತ್ತೇನೆ. ಅದಕ್ಕಾಗಿ ನಿಮ್ಮ ಮನೆ ಮಗಳಿಗೆ ಅರಿಶಿಣ ಕುಂಕುಮದ ಜತೆಗೆ ಒಂದು ಮತ ಉಡುಗೊರೆಯಾಗಿ ಕೊಡಿ ಎಂದು ಮನವಿ ಮಾಡಿದರು.

ಸಚಿವ ಆರ್.ಬಿ.ತಿಮ್ಮಾಪುರ ಮಾತನಾಡಿ, ಗದ್ದಿಗೌಡರು ಅಲ್ರಿ, ನಿದ್ದೆಗೌಡ್ರು ಎಂದು ಲೇವಡಿ ಮಾಡಿದ ಅವರು, ತೇರದಾಳ ತಾಲೂಕನ್ನು ಪಡೆದುಕೊಂಡ ತಾವೆಲ್ಲರೂ ತಮ್ಮ ಋಣದ ಭಾರಕ್ಕಾಗಿ ನಮ್ಮ ಅಭ್ಯರ್ಥಿ ವೀಣಾ ಕಾಶಪ್ಪನವರನ್ನು ಗೆಲ್ಲಿಸಬೇಕು ಎಂದು ಮನವಿ ಮಾಡಿದರು.

ಜಿಲ್ಲಾ ಉಸ್ತುವಾರಿ ಸಚಿವ ಶಿವಾನಂದ ಪಾಟೀಲ ಮಾಜಿ ಸಚಿವೆ ಉಮಾಶ್ರೀ ಮಾತನಾಡಿದರು.
ತಾಲೂಕು ಹೋರಾಟ ಸಮಿತಿ ಕಾರ್ಯದರ್ಶಿ ಬಸವರಾಜ ಬಾಳಿಕಾಯಿ ಪ್ರಾಸ್ತಾವಿಕ ಮಾತನಾಡಿದರು. ಅಜಯಕುಮಾರ ಸರನಾಯಕ, ಜೆ.ಟಿ. ಪಾಟೀಲ, ಎಚ್.ವೈ. ಮೇಟಿ, ಎನ್.ಎಸ್.ದೇವರವರ, ಎಸ್.ಆರ್. ನವಲಿಹಿರೇಮಠ, ಬಾಯಕ್ಕ ಮೇಟಿ, ಪಾರಸಮಲ್ಲ ಜೈನ, ಎಸ್.ಆರ್.ಪಾಟೀಲ, ಬಸವರಾಜ ಕೊಣ್ಣೂರ, ಆನಂದ ನ್ಯಾಮಗೌಡ, ಬಿ.ಎ.ದೇಸಾಯಿ, ಲಲಿತಾ ನಂದೆಪ್ಪನವರ, ಡಾ.ಪದ್ಮಜೀತ ನಾಡಗೌಡ, ಪ್ರವೀಣ ನಾಡಗೌಡ, ತಾಲೂಕು ಹೋರಾಟ ಸಮಿತಿ ಅಧ್ಯಕ್ಷ ಬುಜಬಲಿ ಕೆಂಗಾಲಿ ಸೇರಿದಂತೆ ಕಾಂಗ್ರೆಸ್-ಜೆಡಿಎಸ್‌ನ ಹಿರಿಯ ನಾಯಕರು ಇದ್ದರು.

ಶಕ್ತಿ ಪ್ರದರ್ಶನ
ಕುಮಾರಸ್ವಾಮಿ ನೇತೃತ್ವದ ಮೈತ್ರಿ ಸರ್ಕಾರದ ಪ್ರಚಾರ ಸಭೆಯಲ್ಲಿ ಸಾವಿರಾರು ಸಂಖ್ಯೆಯಲ್ಲಿ ಸಾರ್ವಜನಿಕರು ನೆರೆದಿದ್ದರು. ತಾಲೂಕು ಘೋಷಣೆಯಾದ ತೇರದಾಳದಲ್ಲಿ ಭಾರಿ ಪ್ರಮಾಣದ ಶಕ್ತಿ ಪ್ರದರ್ಶನ ಮೈತ್ರಿ ಪಕ್ಷಗಳು ತೋರಿಸಿದವು. ಬಿರುಬಿಸಿಲು ತಪ್ಪಿಸಲು ಶಾಮಿಯಾನ್ ವೇದಿಕೆ ನಿರ್ಮಿಸಲಾಗಿತ್ತು. ಸಿಎಂ ಅವರ ಆಗಮನ ಹಿನ್ನೆಲೆಯಲ್ಲಿ ಪೊಲೀಸ್ ಇಲಾಖೆ ಸೂಕ್ತ ಬಂದೋಬಸ್ತ್ ಕೈಗೊಂಡಿತ್ತು. ಶಾಂತಿಯುತವಾಗಿ ಸುಮಾರು ಎರಡು ಗಂಟೆಗಳ ಕಾಲ ಪ್ರಚಾರ ಸಭೆ ನಡೆಯಿತು.

ಅಭ್ಯರ್ಥಿ ವೀಣಾ, ಸಿಎಂ ಕುಮಾರಸ್ವಾಮಿ ಪರ ಜೈಕಾರಗಳು ಮೊಳಗಿದವು. ಎರಡು ಪಕ್ಷದ ಶಾಲುಗಳನ್ನು ನಾಯಕರು ಸೇರಿದಂತೆ ಕಾರ್ಯಕರ್ತರ ಬಳಸಿಕೊಂಡರು.